ಶುಕ್ರವಾರ, ಏಪ್ರಿಲ್ 10, 2020
19 °C
ನಗರದ 6ನೇ ವಾರ್ಡ್‌ ವ್ಯಾಪ್ತಿಯಲ್ಲಿ ನಗರದ ಎಪಿಎಂಸಿ ಹಿಂಭಾಗದ ಐಡಿಎಸ್‌ಎಂಟಿ ಬಡಾವಣೆಯಲ್ಲಿ ಕೆಲ ತಿಂಗಳಿಂದ ಜನರ ನಿದ್ದೆಗೆಡಿಸಿದ ಯುಜಿಡಿ ಮಾರ್ಗದ ಸಮಸ್ಯೆ

ಚಿಕ್ಕಬಳ್ಳಾಪುರ: ನೆಮ್ಮದಿ ಕಸಿದ ಒಳಚರಂಡಿ ಮಾರ್ಗ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರದ 6ನೇ ವಾರ್ಡ್‌ ವ್ಯಾಪ್ತಿಯಲ್ಲಿ ಎಪಿಎಂಸಿ ಹಿಂಭಾಗ ಇರುವ ‘ಸಣ್ಣ ಮತ್ತು ಮಧ್ಯಮ ನಗರ ಅಭಿವೃದ್ಧಿ ಯೋಜನೆ’ (ಐಡಿಎಸ್‌ಎಂಟಿ) ಬಡಾವಣೆಯಲ್ಲಿ ಕಳೆದ ಕೆಲ ತಿಂಗಳಿಂದ ಒಳಚರಂಡಿ ಮಾರ್ಗ (ಯುಜಿಡಿ) ಕಟ್ಟಿಕೊಂಡು, ಮ್ಯಾನ್‌ಹೋಲ್‌ ಮೂಲಕ ಅಲ್ಲಲ್ಲಿ ಉಕ್ಕಿ ಹರಿಯುವ ಕೊಚ್ಚೆ ನೀರು ಸ್ಥಳೀಯರ ನೆಮ್ಮದಿ ಕಸಿದಿದೆ.

ಅವೈಜ್ಞಾನಿಕ ಚರಂಡಿಗಳಿಂದ ಮೊದಲೇ ಇಲ್ಲಿ ತ್ಯಾಜ್ಯ ನೀರು ಸರಾಗವಾಗಿ ಹರಿಯುವುದಿಲ್ಲ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಯುಜಿಡಿ ಮಾರ್ಗದಲ್ಲಿ ಹರಿಯುವ ಮಲಮೂತ್ರ ಮಿಶ್ರಿತ ಕೊಚ್ಚೆ ನೀರು ಉಕ್ಕಿ ಹರಿದು ಇಡೀ ಬೀದಿಯನ್ನು ದುರ್ವಾಸನೆಮಯಗೊಳಿಸಿ, ಜನರ ನೆಮ್ಮದಿ ಕಸಿದು ಹೈರಾಣು ಮಾಡಿದೆ. ಸ್ಥಳೀಯರು ಸದ್ಯ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಮ್ಯಾನ್‌ಹೋಲ್‌ವೊಂದರಿಂದ ಸತತವಾಗಿ ಹರಿದ ನೀರು ಬಡಾವಣೆಯಲ್ಲಿ ಖಾಲಿ ನಿವೇಶನದಲ್ಲಿ ಮಡುಗಟ್ಟಿ ನಿಂತು ಸಣ್ಣ ಕೆರೆಯನ್ನೇ ಸೃಷ್ಟಿಸಿದೆ. ಬಡಾವಣೆಯ ಚರಂಡಿಗಳಲ್ಲಿ ಮಡುಗಟ್ಟಿ ನಿಂತ ನೀರಿನಲ್ಲಿ ಸೊಳ್ಳೆ ಸಂತಾನ ಹೆಚ್ಚುತ್ತಿರುವುದರಿಂದ ಜನರ ನಿದ್ದೆಗೆಡಿಸಿ ಸಾಕು ಸಾಕು ಮಾಡಿದೆ. ದುರ್ವಾಸನೆಗೆ ವಾಂತಿ ಬೇಧಿ, ಜ್ವರ, ತಲೆ ನೋವು, ಮೈಕೈ ನೋವಿನ ಜತೆಗೆ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುವ ಭೀತಿ ಕಾಣಿಸಿಕೊಂಡಿದೆ.

ತಮ್ಮ ಬದುಕನ್ನು ನರಕ ಸದೃಶ್ಯಗೊಳಿಸಿದ ಈ ಸಮಸ್ಯೆಯ ಬಗ್ಗೆ ಸ್ಥಳೀಯರು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರಸಭೆಯ ಆರೋಗ್ಯ ಶಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಇತ್ತ ಇಣುಕಿ ನೋಡದೆ ಇರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.

‘ಯುಜಿಡಿ ಮಾರ್ಗ ಕಟ್ಟಿಕೊಂಡು ತ್ಯಾಜ್ಯ ನೀರು ಎಲ್ಲೆಂದರಲ್ಲಿ ಉಕ್ಕಿ ಹರಿದು, ಚರಂಡಿಗಳು ಮಡುಗಟ್ಟಿ ನಿಂತಿವೆ. ಸೊಳ್ಳೆಗಳ ಕಾಟವಂತೂ ಮಿತಿ ಮೀರಿದೆ. ಸಂಜೆಯಾದರೆ ಮನೆ ಕಿಟಕಿ, ಬಾಗಿಲು ತೆರೆಯಲು ಭಯವಾಗುತ್ತದೆ. ಮೊದಲೇ ಬರಬಾರದ ಕಾಯಿಲೆಗಳು ಬರುತ್ತಿವೆ. ಈ ಕೆಟ್ಟ ವಾತಾವರಣದಿಂದ ಎಲ್ಲಿ ನಮಗೆ ಕಾಯಿಲೆಗಳು ಅಂಟಿಕೊಳ್ಳುತ್ತವೆಯೋ ಭಯ ಕಾಡುತ್ತಿದೆ. ಯುಜಿಡಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಕೆಲಸ ನಡೆಯುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ಜಾಫರ್‌ ತಿಳಿಸಿದರು.

‘ನಮ್ಮ ಮನೆಗೆ ಹೊಸದಾಗಿ ಯುಜಿಡಿ ಸಂಪರ್ಕ ಕೊಡಬೇಕಿತ್ತು. ಆದರೆ ಎಲ್ಲ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡ ಕಾರಣಕ್ಕೆ ಸಂರ್ಪಕ ಕೊಡಲು ಸಾಧ್ಯವಾಗುತ್ತಿಲ್ಲ. ಮುನ್ಸಿಫಲ್‌ ಲೇಔಟ್‌ನಿಂದ ಬರುವ ನೀರು ಇಲ್ಲಿ ಪ್ರದೇಶ ಇರುವ ಕಾರಣಕ್ಕೆ ಮುಂದೆ ಹರಿದು ಹೋಗುತ್ತಿಲ್ಲ. ಹೀಗಾಗಿ ಸಮಸ್ಯೆ ಉಲ್ಭಣವಾಗುತ್ತಿದೆ. ಇಲ್ಲಿ ಕೊಳೆಗೇರಿ ಪ್ರದೇಶವೇ ಹೆಚ್ಚಿದೆ. ಬಡವರೇ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಆದರೆ ನಗರಸಭೆ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸುವ ಕಾಳಜಿ ತೋರುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಭಾಸ್ಕರ್ ಅವರು ಬೇಸರ ವ್ಯಕ್ತಪಡಿಸಿದರು.

‘ನಗರದಲ್ಲಿ ಶ್ರೀಮಂತರು, ರಾಜಕಾರಣಿಗಳು ವಾಸಿಸುವ ಪ್ರದೇಶದಲ್ಲಿ ಇಷ್ಟು ಮಾತ್ರವಾಗಿದ್ದರೆ ಅಧಿಕಾರಿಗಳು ಹಗಲು ರಾತ್ರಿ ಓಡಾಡಿ ಕೆಲಸ ಮಾಡಿ ಸಮಸ್ಯೆ ಬಗೆಹರಿಸುತ್ತಿದ್ದರು. ಇಲ್ಲಿ ಸ್ಲಮ್‌ ಇದೆ. ಹೀಗಾಗಿ, ಅಧಿಕಾರಿಗಳಿಗೆ ಈ ಪ್ರದೇಶವೆಂದರೆ ತಾತ್ಸಾರ. ಉಳ್ಳವರಿಗೊಂದು, ಇಲ್ಲದವರಿಗೊಂದು ನ್ಯಾಯ ಇಲ್ಲಿ. ಗಲೀಜು ವಾತಾವರಣ ನಮ್ಮ ನೆಮ್ಮದಿ ಕಳೆದು ಸಾಕುಸಾಕು ಮಾಡಿದೆ. ಆದರೂ ಅನಿವಾರ್ಯವಾಗಿ ಎಲ್ಲ ಸಹಿಸಿಕೊಂಡು ಬದುಕಬೇಕಾಗಿದೆ’ ಎಂದು ಸ್ಥಳೀಯ ನಿವಾಸಿ ಮೆಹರುನ್ನಿಸಾ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಗರಸಭೆ ಆಯುಕ್ತ ಡಿ.ಲೋಹಿತ್, ಪರಿಸರ ಅಧಿಕಾರಿ ಶಿವಶಂಕರ್‌ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು