ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸುಗ್ಗಿ ಹಬ್ಬದಲ್ಲಿ ಗ್ರಾಮೀಣ ಸೊಗಡು ಅನಾವರಣ

ಅಗಲಗುರ್ಕಿ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ಸಂಕ್ರಾಂತಿ ಆಚರಣೆ, ವಿಜ್ಞಾನ ವಸ್ತು ಪ್ರದರ್ಶನ ಆಯೋಜನೆ
Last Updated 14 ಜನವರಿ 2020, 13:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರ ಹೊರವಲಯದ ಅಗಲಗುರ್ಕಿ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ಮಂಗಳವಾರ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವ ಜತೆಗೆ ಸುಗ್ಗಿಹಬ್ಬ ‘ಸಂಕ್ರಾಂತಿ’ಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಶಾಲೆಯ ಆವರಣವನ್ನು ಕಣವಾಗಿ ಪರಿವರ್ತಿಸಿ ಧಾನ್ಯದ ರಾಶಿ ಮಾಡಲಾಗಿತ್ತು. ಬಣ್ಣ ಬಣ್ಣದ ರಂಗೋಲಿ ಹಾಕಿ ಹೊಸ ಗಡಿಗೆ, ಕಬ್ಬಿನ ಜಲ್ಲೆ ಇಟ್ಟು ಸಿಂಗರಿಸಿದ ವಿದ್ಯಾರ್ಥಿಗಳು ಗಮನ ಸೆಳೆದರು. ಗಂಡು ಮಕ್ಕಳು ಪಂಚೆ, ಜುಬ್ಬಾ, ಹೆಣ್ಣುಮಕ್ಕಳು ಸೀರೆ ಉಟ್ಟು ಹಬ್ಬದಲ್ಲಿ ಉತ್ಸುಕತೆಯಿಂದ ಭಾಗವಹಿಸಿದ್ದರು.

ಸಾಂಪ್ರದಾಯಿಕ ದಿರಿಸಿನಲ್ಲಿದ್ದ ವಿದ್ಯಾರ್ಥಿಗಳು ಕೃಷಿ ಪರಿಕರಗಳನ್ನು ಇಟ್ಟು ರಾಶಿ ಪೂಜೆ ನೆರವೇರಿಸಿದರು. ರಾಸುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸಲಾಯಿತು. ಜನಪದ ಶೈಲಿಯಲ್ಲಿ ಮಕ್ಕಳು ಪ್ರದರ್ಶಿಸಿದ ಗ್ರಾಮೀಣ ಸೊಗಡನ್ನು ಬಿಂಬಿಸುವ ಕೋಲಾಟ, ಕುಣಿತ ಮನಮೋಹಕವಾಗಿತ್ತು.

ಇನ್ನೊಂದೆಡೆ ವಸ್ತು ಪ್ರದರ್ಶನದ ಕೊಠಡಿಯಲ್ಲಿ ವಿಜ್ಞಾನದ ಜಾತ್ರೆ ನೆರೆದಿತ್ತು. ವಿದ್ಯಾರ್ಥಿಗಳು ಪರಿಸರದ ಮಾಲಿನ್ಯದಿಂದ ಉಂಟಾಗುವ ಪರಿಣಾಮ, ಹನಿ ನೀರಾವರಿ, ಹೈನುಗಾರಿಕೆ, ನೀರಾವರಿ ಮಾದರಿಗಳು, ರಾಕೆಟ್‌, ಎಟಿಂಎಂ ಯಂತ್ರ, ಆಹಾರದಲ್ಲಿ ಕಲಬೆರಕೆ ಪತ್ತೆ ಹಚ್ಚುವ ಸಾಧನ, ರಕ್ತ ಪರೀಕ್ಷೆ, ಶ್ವಾಸಕೋಶದ ರಚನೆ ಮುಂತಾದ ಮಾದರಿಗಳು ಗಮನ ಸೆಳೆದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌ ಮಾತನಾಡಿ, ‘ಸಂಕ್ರಾಂತಿ ನಾಡಿನ ಪ್ರಮುಖ ಹಬ್ಬವಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಉತ್ತಿ, ಬಿತ್ತಿ, ಬೆಳೆದ ಪೈರು ಕಟಾವಿಗೆ ಬರುವ ಸಮಯದಲ್ಲಿ ಸಂತಸದಿಂದ ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸುವ ಸುಗ್ಗಿಯ ಆಚರಣೆ ಇದಾಗಿದೆ. ಹಿಂದೆ ರೈತರು ತಾವು ಬೆಳೆದ ಬೆಳೆಗಳನ್ನು ಒಕ್ಕಣೆ ಮಾಡಿ, ರಾಶಿ ಹಾಕಿ ವಿಶೇಷವಾಗಿ ಪೂಜೆ ಮಾಡುತ್ತಿದ್ದರು. ಆದರೆ, ಅಧುನಿಕ ಯುಗದಲ್ಲಿ ಈ ಸಂಸ್ಕೃತಿ ಮರೆಯಾಗುತ್ತಿದೆ’ ಎಂದು ಹೇಳಿದರು.

‘ಶಾಲಾ–ಕಾಲೇಜು ಹಂತದಲ್ಲಿ ಏರ್ಪಡಿಸುವ ವಿಜ್ಞಾನ ವಸ್ತುಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ ಹಾಗೂ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆಯಾಗಲಿದೆ. ವಸ್ತು ಪ್ರದರ್ಶನದಂತಹ ಸ್ಪರ್ಧೆಗಳನ್ನು ಶಾಲೆಗಳಲ್ಲಿ ಆಯೋಜಿಸುವ ಮೂಲಕ ಮಕ್ಕಳಲ್ಲಿ ಜ್ಞಾನ ವಿಕಾಸವನ್ನು ಹೆಚ್ಚಿಸಬಹುದು. ಪಠ್ಯ ವಸ್ತುವಿನಲ್ಲಿರುವ ವಿಷಯವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಇಂತಹ ಪ್ರದರ್ಶನಗಳು ಮಕ್ಕಳಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಬಿಜಿಎಸ್ ಪ್ರೌಢಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್‌ ಕುಮಾರ್ ಮಾತನಾಡಿ, ‘ವಿಜ್ಞಾನ ಮನುಷ್ಯನ ನಿತ್ಯ ಜೀವನದ ಭಾಗವಾಗಿದೆ. ಹಿಂದಿನಿಂದಲೂ ಹಿರಿಯರು ನಡೆಸಿಕೊಂಡು ಬಂದಿರುವ ಆಚರಣೆಗಳ ಹಿಂದೆ ವೈಜ್ಞಾನಿಕ ತಳಹದಿ ಇದೆ. ಅದನ್ನು ವಿಶ್ಲೇಷಿಸಿ ಮನೋಭೂಮಿಕೆ ನಮ್ಮಲ್ಲಿ ಬರಬೇಕು. ಮಕ್ಕಳು ಚಿಕ್ಕಂದಿನಲ್ಲಿಯೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ತೀವ್ರ ಸ್ಪರ್ಧಾತ್ಮಕವಾದ ಈ ಯುಗದಲ್ಲಿ ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ’ ಎಂದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT