ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಸರ್ಕಾರ ವಜಾಗೆ ಒತ್ತಾಯ

ಹಾಥರಸ್‌ ಅತ್ಯಾಚಾರ– ಕೊಲೆ ಖಂಡಿಸಿ ವಕೀಲರ ಸಂಘದ ಪದಾಧಿಕಾರಿಗಳಿಂದ ರಾಷ್ಟ್ರಪತಿಗೆ ಮನವಿ ರವಾನೆ
Last Updated 5 ಅಕ್ಟೋಬರ್ 2020, 11:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಉತ್ತರಪ್ರದೇಶದ ಹಾಥರಸ್‌ನಲ್ಲಿ ನಡೆದ ಯುವತಿ ಅತ್ಯಾಚಾರ– ಕೊಲೆ ಖಂಡಿಸಿವಕೀಲರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಅಲ್ಲಿನ ಸರ್ಕಾರವನ್ನು ಕೂಡಲೇ ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಉಪವಿಭಾಗಾಧಿಕಾರಿ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್‌.ತಮ್ಮೇಗೌಡ, ‘ಉತ್ತರಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುದಕ್ಕೆ ಇಂದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ನಡೆದಿರುವುದೇ ಸಾಕ್ಷಿ’ ಎಂದು ಹೇಳಿದರು.

‘ಒಬ್ಬ ಬಡ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಮಾತ್ರವಲ್ಲದೇ, ಆ ಹೆಣ್ಣುಮಗಳನ್ನು ಅಲ್ಲಿನ ಅಧಿಕಾರಿಗಳು ಹಾಗೂ ಸರ್ಕಾರ ಸಾಯಿಸಿದೆ. ಜತೆಗೆ ಆಕೆಯ ಮೃತದೇಹವನ್ನು ಕುಟುಂಬಸ್ಥರಿಗೆ ವರ್ಗಾಯಿಸದೆ ರಾತ್ರೋರಾತ್ರಿ ಸುಟ್ಟುಹಾಕುವ ಪರಿಸ್ಥಿತಿ ಏನಿತ್ತು? ಇದರ ಹಿಂದಿನ ಒಳಮರ್ಮ ಜನತೆಗೆ ಜನತೆಗೆ ಗೊತ್ತಾಗಲೇ ಬೇಕು ಹಾಗಾಗಿ ಈ ಅತ್ಯಾಚಾರವನ್ನು ವಕೀಲರ ಸಂಘ ಖಂಡಿಸುತ್ತದೆ’ ಎಂದು ತಿಳಿಸಿದರು.

ವಕೀಲ ಆರ್.ಮಟಮಪ್ಪ ಮಾತನಾಡಿ, ‘ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರ ಸರ್ಕಾರದಲ್ಲಿ ಅತ್ಯಾಚಾರಗಳು, ದೌರ್ಜನ್ಯ ಘಟನೆಗಳು ಹೆಚ್ಚಾಗುತ್ತಿವೆ. ಅಲ್ಲಿನ ಸರ್ಕಾರ ಜನರ ಹಿತರಕ್ಷಣೆ ಮಾಡಲು ಸಂಪೂರ್ಣ ವಿಫಲವಾಗಿದೆ. ಅಲ್ಲಿ ಸಂವಿಧಾನದ ಆಶಯಗಳು ಮಣ್ಣುಪಾಲಾಗಿವೆ. ಮಾನವ ಹಕ್ಕುಗಳಿಗೆ ಧಕ್ಕೆಯಾಗಿವೆ’ ಎಂದು ಆರೋಪಿಸಿದರು.

‘ಉತ್ತರಪ್ರದೇಶ ಸರ್ಕಾರ ಆಡಳಿತದಲ್ಲಿ ವೈಫಲ್ಯಗೊಂಡಿದೆ. ಹಾಗಾಗಿ ರಾಷ್ಟ್ರಪತಿಗಳು ಅಲ್ಲಿನ ಸರ್ಕಾರ ವಜಾ ಮಾಡಿ, ರಾಷ್ಟ್ರಪತಿ ಆಡಳಿತ ಜಾರಿಯಾಗೊಳಿಸುವ ಮೂಲಕ ಕಾನೂನು ಸುವ್ಯವಸ್ಥೆ ಸರಿಪಡಿಸಬೇಕು. ಆ ಮೂಲಕ ಅಲ್ಲಿ ಭೀತಿಯಲ್ಲಿರುವ ದಲಿತರು ಹಾಗೂ ಹಿಂದುಳಿದವರಲ್ಲಿ ಆತ್ಮಸ್ಥೈರ್ಯ ತುಂಬಿ, ಪ್ರಜೆಗಳು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ದಿನಗಳಿಂದ ಉತ್ತರಪ್ರದೇಶದ ಸ್ಥಿತಿ ಗೊತ್ತಿದ್ದರೂ ಮೌನವಹಿಸಿರುವ ಉದ್ದೇಶ ಏನು ಎಂದು ಅವರೇ ದೇಶದ ಜನತೆಗೆ ತಿಳಿಸಬೇಕು. ಕೂಡಲೇ ತಪ್ಪಿತಸ್ಥ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಂಡು ದೇಶದ ಜನತೆಗೆ ವಿಶ್ವಾಸ ಮೂಡಿಸಬೇಕು’ ಎಂದು ಹೇಳಿದರು.

‘ಅತ್ಯಾಚಾರ ಪ್ರಕರಣದಲ್ಲಿ ಪಾಲಕರಿಗೆ ಶವ ಒಪ್ಪಿಸದೆ, ಅವರಿಗೆ ದಿಗ್ಭಂಧನ ವಿಧಿಸಿ, ಅಂತ್ಯ ಸಂಸ್ಕಾರಕ್ಕೂ ಅವಕಾಶ ಕಲ್ಪಿಸದೆ ರಾತ್ರಿಯೇ ಸುಟ್ಟು ಹಾಕಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಸಹ ಕ್ರಮ ತೆಗೆದುಕೊಳ್ಳಬೇಕು ಮತ್ತು ಆ ನೊಂದ ಕುಟುಂಬಕ್ಕೆ ರಕ್ಷಣೆಯಾಗಿ ನಿಲ್ಲಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ’ ಎಂದು ತಿಳಿಸಿದರು.

ವಕೀಲರ ಸಂಘದ ಕಾರ್ಯದರ್ಶಿ ಬಿ.ವಿನೋದ್ ಕುಮಾರ್, ಖಜಾಂಚಿ ಹರೀಶ್, ಪದಾಧಿಕಾರಿಗಳಾದ ಬಾಲಕೃಷ್ಣ ರಾಜು, ಮಹಮ್ಮದ್ ದಾವೂದ್, ಎಸ್.ಎನ್.ನಾಗರಾಜನ್, ಕಂಬದಹಳ್ಳಿ ಜಯರಾಮರೆಡ್ಡಿ, ಎಂ.ವೆಂಕಟೇಶಪ್ಪ, ಎನ್.ನರಸಿಂಹಪ್ಪ, ರಮೇಶ್, ತಿಮ್ಮಯ್ಯ, ಮುನಿಕೃಷ್ಣಪ್ಪ, ಶಿವರೆಡ್ಡಿ , ಗೋಪಿ, ಕುಪ್ಪಳ್ಳಿ ಶ್ರೀನಿವಾಸ್, ನರಸಿಂಹಮೂರ್ತಿ, ಮುರಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT