ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿಯ ವೈಕುಂಠಪುರದಲ್ಲಿ ವೈಕುಂಠ ದರ್ಶನ

ಇಂದು ಜಿಲ್ಲೆಯ ದೇಗುಲಗಳಲ್ಲಿ ಹರಿ ನಾಮಸ್ಮರಣೆ
Last Updated 6 ಜನವರಿ 2020, 4:33 IST
ಅಕ್ಷರ ಗಾತ್ರ
ADVERTISEMENT
""

ಚಿಂತಾಮಣಿ: ಆಂಧ್ರಪ್ರದೇಶದ ಗಡಿಭಾಗ ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು ಹೋಬಳಿಯ ಏನಿಗದೆ- ಬುರುಡಗುಂಟೆ ರಸ್ತೆಯಲ್ಲಿರುವ ಶ್ರೀಹರಿಕ್ಷೇತ್ರ ವೈಕುಂಠಪುರದಲ್ಲಿ ಇದೇ 6ರಂದು ವೈಕುಂಠ ಏಕಾದಶಿ ವಿಜೃಂಭಣೆಯಿಂದ ನಡೆಯಲಿದೆ.

ನೂತನವಾಗಿ ನಿರ್ಮಾಣವಾಗಿರುವ ವೆಂಕಟರಮಣಸ್ವಾಮಿ ದೇವಾಲಯ ಜಿಲ್ಲೆಯ ಐತಿಹಾಸಿಕ ಹಾಗೂ ಪ್ರಸಿದ್ಧ ದೇವಾಲಯಗಳ ಸಾಲಿಗೆ ಸೇರ್ಪಡೆಗೊಳ್ಳುತ್ತದೆ. ಭಕ್ತಿಭಾವ ಸಾರುವ, ಶಾಂತಿ, ನೆಮ್ಮದಿಯ ತಾಣ ಇದಾಗಿದೆ.

ಚಿಂತಾಮಣಿಯಿಂದ 30 ಕಿ.ಮೀ ದೂರವಿರುವ ವೈಕುಂಠಪುರ ದೇವಾಲಯದಲ್ಲಿ 7.5 ಅಡಿ ಎತ್ತರದ ವೆಂಕಟರಮಣಸ್ವಾಮಿ ವಿಗ್ರಹ ಅತ್ಯಂತ ಮನಮೋಹಕವಾಗಿದೆ. ಇಷ್ಟು ಎತ್ತರದ ವಿಗ್ರಹ ರಾಜ್ಯದ ಯಾವ ಭಾಗದಲ್ಲೂ ಇಲ್ಲ. ತಿರುಪತಿ ತಿರುಮಲ ದೇಗುಲದಿಂದ ಈ ಮೂರ್ತಿಯನ್ನು ಕೊಡಲಾಗಿದೆ. ಈ ಮೂರ್ತಿ ಮೇಲುಕೋಟೆಯ ಚೆಲುವರಾಯಸ್ವಾಮಿಯನ್ನು ಹೋಲುತ್ತದೆ.ದೇವಾಲಯದ ಆವರಣದ ಒಂದು ಭಾಗದಲ್ಲಿ ನವಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಎನ್ನುತ್ತಾರೆ ದೇವಾಲಯದ ರೂವಾರಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎಂ.ವೆಂಕಟರೆಡ್ಡಿ.

ವೆಂಕಟರಮಣಸ್ವಾಮಿಯ ಭವ್ಯಮೂರ್ತಿ

ದೇವಾಲಯದ ಆವರಣದಲ್ಲಿ ವಿಷ್ಣುರಂಗಮಂದಿರ ನಿರ್ಮಾಣ ಮಾಡಲಾಗಿದೆ. ಮಂದಿರದ ವೇದಿಕೆಯ ಎರಡು ಮಗ್ಗುಲಲ್ಲಿ ಶ್ರೀನಿವಾಸ ಕಲ್ಯಾಣ ಮತ್ತು ಶ್ರೀರಾಮ ಕಲ್ಯಾಣದ ಸುಂದರವಾದ ಚಿತ್ರಗಳಿದ್ದು, ಮಧ್ಯದಲ್ಲಿ ಪದ್ಮಾವತಿ ಸ್ವಾಮಿಯ ಚಿತ್ರವಿದೆ.

ದೇವಾಲಯದ ನಿರ್ಮಾಣಕ್ಕಾಗಿ ಪ್ರೊ.ಡಿ.ವೆಂ.ವೆಂಕಟರೆಡ್ಡಿ ಮತ್ತು ಪತ್ನಿ ಸರೋಜಮ್ಮ ಸ್ವಂತ ಜಮೀನು ನೀಡಿದ್ದಾರೆ. ನಿವೃತ್ತಿಯಿಂದ ಬಂದ ಹಣವನ್ನು ವಿನಿಯೋಗಿಸಿದ್ದಾರೆ. ಅಮೆರಿಕದ ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲಿರುವ ತಮ್ಮ ಮಕ್ಕಳಿಂದಲೂ ಸಹಾಯ ಪಡೆದುಕೊಂಡಿದ್ದಾರೆ. ಸ್ವಆಸಕ್ತಿಯಿಂದ ನೀಡಲು ಮುಂದೆ ಬಂದ ದಾನಿಗಳಿಂದಲೂ ಸಹಾಯ ಪಡೆದುಕೊಂಡು ಸುಮಾರು ₹ 2.5 ಕೋಟಿ ವೆಚ್ಚದ ಸುಂದರವಾದ ದೇವಾಲಯ ನಿರ್ಮಾಣ ಮಾಡಿದ್ದಾರೆ.

ವೈಕುಂಠಪುರ ಕ್ಷೇತ್ರದ ದೇವಾಲಯಕ್ಕೆ ಬಂದು ಹರಕೆ ಸಲ್ಲಿಸಿದರೆ ಭಕ್ತರ ಕಷ್ಟಗಳು ದೂರವಾಗುತ್ತವೆ. ಕೋರಿಕೆಗಳು ಈಡೇರುತ್ತವೆ ಎಂಬ ಪ್ರತೀತಿ ಇದೆ.

ಜಿಲ್ಲೆಯ ವಿವಿಧೆಡೆಗಳಿಂದ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ತಿರುಪತಿಯಲ್ಲಿ ನಡೆಯುವ ಪದ್ಧತಿಯಲ್ಲಿ ನಿತ್ಯ ಆಗಮಶಾಸ್ತ್ರ ರೀತಿಯಲ್ಲಿ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ವೈಕುಂಠ ಏಕಾದಶಿ, ಯುಗಾದಿ, ತಿರುಮಲ ಅಮಾವಾಸ್ಯೆ, ಹೊಸ ವರ್ಷ ಸೇರಿದಂತೆ ಎಲ್ಲ ಹಬ್ಬಗಳ ಆಚರಣೆಯಂದು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT