ಭಾನುವಾರ, ಜನವರಿ 26, 2020
28 °C

ಚಿಂತಾಮಣಿ: ವೈಕುಂಠದ್ವಾರ ಪ್ರವೇಶಕ್ಕೆ ಹರಿದುಬಂದ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ವಿವಿಧ ದೇಗುಲಗಳಲ್ಲಿ ಸೋಮವಾರ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ವೈಭವದಿಂದ ನಡೆದವು.

ನಗರ ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳಿಗೆ ಭಕ್ತರ ದಂಡೇ ಹರಿದು ಬಂದಿತ್ತು. ಕೆಲವು ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವು. ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವಿಶೇಷ ಪೂಜೆ, ಉತ್ಸವ ಮೂರ್ತಿಗೆ ಅಲಂಕಾರ ವೈಕುಂಠದ್ವಾರ ಪೂಜೆ, ನಾರಾಯಣನ ದರ್ಶನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಭಕ್ತರು ಬೆಳ್ಳಂಬೆಳಿಗ್ಗೆ ದೇವಾಲಯಗಳಿಗೆ ಎಡತಾಕುತ್ತ ವೈಕುಂಠದ್ವಾರದ ಮೂಲಕ ದೇವರ ದರ್ಶನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಾಲ್ಲೂಕಿನ ಐತಿಹಾಸಿಕ ಆಲಂಬಗಿರಿ ಕಲ್ಕಿ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಯದಲ್ಲಿ ವೈಕುಂಠ ಏಕಾದಶಿ ಆಚರಿಸಲಾಯಿತು. ವೆಂಕಟರಮಣಸ್ವಾಮಿ ಉತ್ಸವ ಮೂರ್ತಿಗೆ ತ್ರಿವಿಕ್ರಮ ವಿಶೇಷ ಅಲಂಕಾರ ಮಾಡಲಾಗಿತ್ತು. ಆಲಂಬಗಿರಿಯಲ್ಲಿ ಪ್ರತಿವರ್ಷ ವೈಕುಂಠ ಏಕಾದಶಿಯಂದು ವಿಶೇಷ ಅಲಂಕಾರ ಮಾಡುವ ಪದ್ಧತಿ ರೂಢಿಯಲ್ಲಿದೆ.

ವೆಂಕಟರಮಣಸ್ವಾಮಿ ಮೂಲ ವಿಗ್ರಹವನ್ನು ವಿಶೇಷ ಹೂ ಮತ್ತು ಆಭರಣಗಳಿಂದ ಅಲಂಕರಿಸಲಾಗಿತ್ತು. 

ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿರುವ ಲಕ್ಷ್ಮೀ ಅಮ್ಮನವರ ದೇವಾಲಯದಲ್ಲೂ ವಿಶೇಷ ಪೂಜಾ ಕೈಂಕರ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ದಂಪತಿ ಬೆಳಗಿನ ಪ್ರಥಮ ಪೂಜೆಯಲ್ಲಿ ಭಾಗವಹಿಸಿದ್ದರು.

ಕನಂಪಲ್ಲಿ: ನಗರದ ಹೊರವಲಯದ ಕನಂಪಲ್ಲಿ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಹಾಗೂ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ವೀರಾಂಜನೇಯಸ್ವಾಮಿಗೆ ಬೆಳ್ಳಿಕವಚ, ಬೆಳ್ಳಿಗದೆ ತೊಡಿಸಲಾಗಿತ್ತು.

ಬ್ರಹ್ಮಚೈತನ್ಯ ಶ್ರೀರಾಮ ಮಂದಿರ: ನಗರದ ಎನ್.ಆರ್.ಬಡಾವಣೆಯ ಬ್ರಹ್ಮಚೈತನ್ಯ ಶ್ರೀರಾಮ ಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀರಾಮಚಂದ್ರ ಪ್ರಭುವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಾಕಡಾರತಿ, ಗೋವಿಂದನಾಮ ಸ್ಮರಣೆ, ವೈಕುಂಠದ್ವಾರ ದರ್ಶನ, ವಿಷ್ಣುನಾಮ ಮತ್ತು ಲಲಿತ ಸಹಸ್ರನಾಮಗಳ ಸಾಮೂಹಿಕ ಪಾರಾಯಣ ನಡೆಯಿತು.

ನಗರದ ದೊಡ್ಡಪೇಟೆಯ ವಾಸವಿ ದೇವಾಲಯ, ಹರಿಹರೇಶ್ವರಸ್ವಾಮಿ, ಕುರುಟಹಳ್ಳಿಯ ವೀರಾಂಜನೇಸ್ವಾಮಿ ದೇವಾಲಯ, ಬೂರಗಮಾಕಲಹಳ್ಳಿಯ ವೀರಾಂಜನೇಯಸ್ವಾಮಿ ದೇವಾಲಯ, ಮುರುಗಮಲೆಯ ಮುಕ್ತೀಶ್ವರಸ್ವಾಮಿ ದೇವಾಲಯ ಮುಂತಾದ ದೇವಾಲಯಗಳಲ್ಲೂ ವಿಶೇಷ ಅಲಂಕಾರ, ವೈಕುಂಠದ್ವಾರ ದರ್ಶನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು