ಬುಧವಾರ, ಮಾರ್ಚ್ 3, 2021
22 °C

ವೇಣುಗೋಪಾಲಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಶಿಡ್ಲಘಟ್ಟದ ಊರ ದೇವರೆಂದೇ ಖ್ಯಾತವಾದ ನಗರದ ಪುರಾತನ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಸಹಿತ ಎಲ್ಲ ಕೈಂಕರ್ಯಗಳು ಪಾಂಚರಾತ್ರಾಗಮ ಪದ್ಧತಿ­ಯಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇಗು­ಲದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರವೇ ನಗರದಲ್ಲಿ ಶುಭಕಾರ್ಯಗಳು ಪ್ರಾರಂಭವಾಗುವ ಸಂಪ್ರದಾಯವಿದೆ.

ಶಾಸಕ ವಿ.ಮುನಿಯಪ್ಪ ಮತ್ತು ಶಿರಸ್ತೆದಾರ್ ಮಂಜುನಾಥ್ ರಥೋತ್ಸವಕ್ಕೆ ಚಾಲನೆ ನೀಡಿ­ದರು. ತಮಟೆ ವಾದನ, ಮಂಗಳ ವಾದ್ಯಗಳ ಮಧ್ಯೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡ­­ಲಾಯಿತು. ಮಹಿಳೆಯರು ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಮಯೂರ ವೃತ್ತ­ದಲ್ಲಿ ಪಾನಕ ಮತ್ತು ಹೆಸರುಬೇಳೆ ಕೋಸಂಬರಿ ಹಂಚಲಾಯಿತು.

‘ಶಿಡ್ಲಘಟ್ಟ ದೇವರು ಹಿಂದು ಮುಂದು’ ಎಂಬ ಪ್ರಸಿದ್ಧ ನಾಣ್ಣುಡಿಗೆ ಕಾರಣ ವೇಣುಗೋಪಾಲಸ್ವಾಮಿ ರಥೋ
ತ್ಸವ. ಹಿಂದೆ ನಗರದ ಅಶೋಕರಸ್ತೆಯು ಕಿರಿದಾಗಿತ್ತು. ಆ ಕಾರಣಕ್ಕೆ ದೊಡ್ಡದಾದ ದೇವರ ರಥವನ್ನು ರಸ್ತೆ ಕೊನೆಯಲ್ಲಿ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇವರನ್ನೇ ಹಿಂದು ಮುಂದಾಗಿ ತಿರುಗಿಸಿ ರಥವನ್ನು ಹಿಂಬದಿಯಿಂದ ಎಳೆದು ತರಲಾಗುತ್ತಿತ್ತು. ಹೀಗಾಗಿ ಆ ಮಾತು ಚಾಲ್ತಿಗೆ ಬಂತು.

ಶ್ರೀಕೃಷ್ಣದೇವರಾಯ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ತೆರಳುವಾಗ ಮಾರ್ಗ ಮಧ್ಯೆ ತಂಗಿದ್ದು, ತನ್ನ ಆರಾಧ್ಯ ದೈವ ವೇಣುಗೋಪಾಲಸ್ವಾಮಿಯನ್ನು ಇಲ್ಲಿ ಪ್ರತಿಷ್ಠಾಪಿಸಿದನೆಂಬ ಪ್ರತೀತಿಯಿದೆ. ಕ್ರಿ.ಶ.1526ರಲ್ಲಿ ಶಿಡ್ಲಘಟ್ಟ ಸ್ಥಾಪಿಸಿದ ಅಲಸೂರಮ್ಮ ಕೂಡ ಈ ದೇವಾಲಯವನ್ನು ಅಭಿವೃದ್ಧಿಗೊಳಿಸಿರುವುದಾಗಿ ಇತಿಹಾಸ ಹೇಳುತ್ತದೆ. ತದನಂತರ ನೂರು ವರ್ಷಗಳ ತರುವಾಯ ಮರಾಠರ ಕಾಲದಲ್ಲಿ ದೇವಾಲಯದ ಜೀರ್ಣೋದ್ಧಾರ ವಾಯಿತೆಂದು ಹೇಳಲಾಗುತ್ತದೆ. ಸುಮಾರು 500 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ ಈ ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗಿರುವ ವೇಣುಗೋಪಾಲಸ್ವಾಮಿ ಮೂರ್ತಿಯ ಎಡಭಾಗದಲ್ಲಿ ರುಕ್ಮಿಣಿ ಹಾಗೂ ಬಲಭಾಗದಲ್ಲಿ ಸತ್ಯಭಾಮೆಯ ಸುಂದರ ಮೂರ್ತಿಗಳಿವೆ.

ವೇಣುಗೋಪಾಲಸ್ವಾಮಿ ದೇಗುಲ­ದಲ್ಲಿ ಪೂಜಾ ಕಾರ್ಯಕ್ರಮಗಳು ಒಂದು ವಾರದ ಕಾಲ ನಡೆಯಲಿದ್ದು, ನಗರದ ಎಲ್ಲ ಜಾತಿಯವರೂ ವಿವಿಧ ಕೈಂಕರ್ಯ­ಗಳಲ್ಲಿ ಭಾಗಿಯಾಗುವುದು ವಿಶೇಷ­ವಾಗಿದೆ. ಅರ್ಚಕ ವೈ.ಎನ್‌. ದಾಶರಥಿಭಟ್ಟಾಚಾರ್ಯ, ದೇಗುಲ ಸಮಿತಿ ಸದಸ್ಯರು, ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್‌ ಸದಸ್ಯರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.