ಚಿಂತಾಮಣಿ: ನಗರ ಅಥವಾ ಯಾವುದೇ ಗ್ರಾಮದ ಅಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರ ಪ್ರಮುಖವಾಗುತ್ತದೆ. ಯಾವುದೇ ಒಂದು ಕ್ಷೇತ್ರ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದೆ ಎಂದರೆ ಅದಕ್ಕೆ ಕ್ಷೇತ್ರದಲ್ಲಿನ ಅತ್ಯುತ್ತಮ ಸಂಪರ್ಕ ಜಾಲವೇ ಕಾರಣವಾಗುತ್ತದೆ.
ತಾಲ್ಲೂಕಿನ ಅಭಿವೃದ್ಧಿಗೆ ಗ್ರಾಮೀಣ ರಸ್ತೆಗಳು ತೊಡಕಾಗಿವೆ. ಅನೇಕ ವರ್ಷಗಳಿಂದ ತಾಲ್ಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಾರೆ.
ಚಿಂತಾಮಣಿ ತಾಲ್ಲೂಕು ಶಿಕ್ಷಣ, ವ್ಯಾಪಾರ, ವಾಣಿಜ್ಯದಲ್ಲಿ ಪ್ರಗತಿಯ ಹಾದಿಯಲ್ಲಿದೆ. ನಗರದಲ್ಲಿ 2 ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳಿವೆ. 2 ಸರ್ಕಾರಿ ಪದವಿಪೂರ್ವ ಕಾಲೇಜುಗಳಿವೆ. ರೇಷ್ಮೆ ಕೃಷಿ ಮಹಾವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಹತ್ತಾರು ಖಾಸಗಿ ಶಿಕ್ಷಣ ಸಂಸ್ಥೆಗಳು, ಎಪಿಎಂಸಿ, ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಈ ವರ್ಷದಿಂದ ಎಂಜಿನಿಯರಿಂಗ್ ಕಾಲೇಜು ಆರಂಭವಾಗಲಿದೆ.
ಆದರೆ ತಾಲ್ಲೂಕಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಪಿಎಂಜಿಎಸ್‌ಆರ್‌ವೈ ರಸ್ತೆಗಳು ಹಾಳಾಗಿದ್ದು ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗಿವೆ. ತಾಲ್ಲೂಕಿನ ಯಾವುದೇ ಭಾಗದಲ್ಲಿ ಸುಸಜ್ಜಿತ ಗ್ರಾಮೀಣ ರಸ್ತೆಗಳು ಕಾಣಸಿಗುವುದಿಲ್ಲ. ಹತ್ತಾರು ವರ್ಷಗಳಿಂದ ದುರಸ್ತಿ, ಡಾಂಬರು ಕಾಣದೆ ತೀವ್ರವಾಗಿ ಹದಗೆಟ್ಟಿವೆ. ಮಳೆಗಾಲದಲ್ಲಿ ಕೆಸರು ಗದ್ದೆಗಳಾಗುತ್ತವೆ. ಬೇಸಿಗೆ ಕಾಲದಲ್ಲಿ ದೂಳಿನಿಂದ ಸಂಚರಿಸಲು ಅಯೋಗ್ಯವಾಗಿರುತ್ತವೆ.
ನಗರಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ದಿಕ್ಕಿನ ಪ್ರಮುಖ ರಸ್ತೆಗಳು ಉತ್ತಮವಾಗಿವೆ. ಪೂರ್ವ ಮತ್ತು ಪಶ್ಚಿಮಕ್ಕೆ ರಾಷ್ಟ್ರೀಯ ಹೆದ್ದಾರಿ 234 ಹಾದು ಹೋಗಿದೆ. ಉತ್ತರ-ದಕ್ಷಿಣಕ್ಕೆ ಬೆಂಗಳೂರು -ಮದನಪಲ್ಲಿ ರಾಜ್ಯ ಹೆದ್ದಾರಿ ಇದೆ. ಜತೆಗೆ ಕೋಲಾರ, ಚೇಳೂರು ರಸ್ತೆಯು ಉತ್ತಮ ಸ್ಥಿತಿಯಲ್ಲಿದೆ. ನಗರಕ್ಕೆ ಬರುವವರು ಈ ರಸ್ತೆಗಳನ್ನು ಕಂಡು ಆಹಾ ಎಂದು ತಲೆದೂಗುತ್ತಾರೆ. ಆದರೆ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿದರೆ ರಸ್ತೆಗಳ ನರಕಸದೃಶ ಕಂಡುಬರುತ್ತವೆ.
ದಶಕಗಳಿಂದ ನಿರ್ವಹಣೆ ಇಲ್ಲದ ರಸ್ತೆಗಳು, ಅಡಿಗಡಿಗೂ ದೊಡ್ಡದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ವಾಹನ ಸವಾರರು ಅದರಲ್ಲೂ ವಿಶೇಷವಾಗಿ ದ್ವಿಚಕ್ರವಾಹನ ಸವಾರರು, ಆಟೊ, ಕಾರು ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗುಂಡಿ ಬಿದ್ದ ರಸ್ತೆಗಳು ಜನರ ಪ್ರಾಣಕ್ಕೆ ಎರವಾಗುತ್ತಿವೆ.
ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 1024.46 ಕಿ.ಮೀ ರಸ್ತೆ, ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ 293.4 ಕಿ.ಮೀ ರಸ್ತೆ ಇದೆ. ರಸ್ತೆಗಳ ಡಾಂಬರು ಕಿತ್ತುಹೋಗಿ ದಶಕಗಳೇ ಕಳೆದಿದ್ದು ಸಂಚರಿಸುವುದು ದುಸ್ತರವಾಗಿದೆ. ಗ್ರಾಮೀಣ ಭಾಗಗಳ ರಸ್ತೆಗಳು ಮೊದಲೇ ಹಾಳಾಗಿದ್ದವು. ಮಳೆ ಬಂದಾಗ ಹೋದರೆ ರಸ್ತೆ ಎಲ್ಲಿದೆ ಎಂಬುದು ಗೊತ್ತಾಗುವುದಿಲ್ಲ. ರಸ್ತೆಗಳಲ್ಲಿ ಡಾಂಬರು ಇದೆಯೇ ಎಂದು ಹುಡುಕಾಡಬೇಕಾಗಿದೆ.
ಮಳೆ ಬಂದಾಗ ರಸ್ತೆಗಳೆಲ್ಲ ಕೆಸರುಮಯವಾಗುತ್ತಿವೆ. ದ್ವಿಚಕ್ರವಾಹನ ಸವಾರರು ಬೈಕ್ ಸ್ಕಿಡ್ ಆಗಿ ಮುಗ್ಗರಿಸಿ ಗಾಯಗೊಂಡಿರುವ ಪ್ರಕರಣಗಳು ಸಾಕಷ್ಟು ನಡೆದಿವೆ. ಮಳೆ ಬಂದಾಗ ರಸ್ತೆಗಳಲ್ಲಿ ತಗ್ಗುಗಳೇ ಕಾಣುವುದಿಲ್ಲ. ಬೇಸಿಗೆ ಬಂದರೆ ದೂಳು ಬರುತ್ತದೆ. ರಸ್ತೆಗಳ ಸುತ್ತಮುತ್ತಲಿನ ಜಮೀನಿನ ಬೆಳೆಗಳು ಸಹ ದೂಳುಮಯವಾಗುತ್ತವೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.
ಗ್ರಾಮ ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳ ಸ್ಥಿತಿ ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯವಾಗಿದೆ. ಮಳೆ ನೀರು ನಿಂತು ರಸ್ತೆಗಳು ಕೆರೆಯಂತಾಗಿದ್ದು, ಸಂಪೂರ್ಣವಾಗಿ ಕಿತ್ತುಹೋಗಿವೆ. 2-3 ಅಡಿ ಗುಂಡಿ ಕಾಣುತ್ತಿವೆ.
ಅಧಿಕಾರಿಗಳು ರಸ್ತೆಗಳ ಕಡೆ ತಿರುಗಿ ನೋಡುತ್ತಿಲ್ಲ. ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾರೆ. ಕೈವಾರ -ಗವಿಮಾರ್ಗವಾಗಿ ಚಿಂತಾಮಣಿಯ ರಸ್ತೆ ತಪೋವನ ಮತ್ತು ವೈಕುಂಠ, ನರಸಿಂಹಸ್ವಾಮಿ ಗುಹೆಯ ಸಮೀಪ ಸಂಪೂರ್ಣವಾಗಿ ಹದಗೆಟ್ಟಿದೆ. ಚಿಂತಾಮಣಿ-ಮುನುಗನಹಳ್ಳಿ ರಸ್ತೆ ಹಾಳಾಗಿದೆ.
ಚೇಳೂರು ರಸ್ತೆಯಿಂದ ಕೊಮ್ಮೇಪಲ್ಲಿ ಕೋಡೇಗಂಡ್ಲು ಮಾರ್ಗವಾಗಿ ಬುರುಡಗುಂಟೆಗೆ ಗ್ರಾಮಕ್ಕೆ ಹೋಗುವ ರಸ್ತೆ ದಶಕಗಳಿಂದ ಡಾಂಬರು ಕಾಣದೆ ಹದಗೆಟ್ಟಿದೆ.
ಕಸಬಾ ಹೋಬಳಿಯ ಸೀಕಲ್ ಗ್ರಾಮದ ಆನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗಿಡಗಂಟೆಗಳು ಬೆಳೆದುಕೊಂಡು ಕಾಲು ದಾರಿಯಾಗಿದೆ. ಗಿಡಗಳ ನಡುವೆ ರಸ್ತೆಯನ್ನು ಹುಡುಕಬೇಕು. ಎತ್ತಿನ ಬಂಡಿ ಸಹ ಸಂಚರಿಸಲು ಸಾಧ್ಯವಿಲ್ಲ.
ಗಡದಾಸನಹಳ್ಳಿ-ಯಡಹಳ್ಳಿ ರಸ್ತೆ, ಯಡಹಳ್ಳಿ-ಕೂಟರಾಜನಹಳ್ಳಿ-ಆಲಂಬಗಿರಿ-ಚಿನ್ನಸಂದ್ರ ರಸ್ತೆ ಹದಗೆಟ್ಟು ದಶಕಗಳೇ ಕಳೆದಿದೆ. ರಸ್ತೆಯಲ್ಲಿ ಮೊಣಕಾಲು ಉದ್ದದ ಗುಂಡಿಗಳು ಬಿದ್ದಿವೆ.
ಹದಗೆಟ್ಟ ರಸ್ತೆಗಳ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಂದಾಜುಪಟ್ಟಿ ನೀಲನಕ್ಷೆ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ದುರಸ್ತಿ ಮಾಡಿಸಲಾಗುವುದುಎಇಇ ಜಿಲ್ಲಾ ಪಂಚಾಯಿತಿ
ಗುಂಡಿಗಳಲ್ಲಿ ರಸ್ತೆ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಹಬ್ಬ ಹರಿದಿನ ಹಾಗೂ ಭಾನುವಾರ ಹೆಚ್ಚು ವಾಹನಗಳು ಆಗಮಿಸುತ್ತವೆ. ಹಲವಾರು ವರ್ಷಗಳಿಂದ ರಸ್ತೆ ದುರಸ್ತಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲಮಲ್ಲಿಕಾರ್ಜುನಾಚಾರಿ ಜುಂಜನಹಳ್ಳಿ
ರಸ್ತೆ ದುರಸ್ತಿ ಮಾಡುವುದಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಲವು ಬಾರಿ ಭರವಸೆ ನೀಡಿ ವರ್ಷ ಕಳೆದರೂ ರಸ್ತೆ ನಿರ್ಮಾಣವಾಗಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತಕಡೆ ಗಮನಹರಿಸಲಿಸುರೇಶ್ ಕೋಡೇಗಂಡ್ಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.