ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕುಂಠಿತ

ಏಳರಲ್ಲಿ ಮೂರು ಮಾತ್ರ ಕಾರ್ಯನಿರ್ವಹಣೆ
Last Updated 27 ಜೂನ್ 2022, 4:40 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 7 ಘನ ತ್ಯಾಜ್ಯ ವಿಲೇವಾರಿ ಘಟಕಗಳು ಬಹುತೇಕ ನಿರ್ಮಾಣವಾಗಿವೆ. ಇವುಗಳಲ್ಲಿ ಮೂರು ಘಟಕಗಳು ಕಾರ್ಯವನ್ನು ಪ್ರಾರಂಭಿಸಿದ್ದು, ಉಳಿದ ನಾಲ್ಕು ಇನ್ನೇನು ಕಾರ್ಯವನ್ನು ಪ್ರಾರಂಭಿಸಲಿವೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಒಟ್ಟು 274 ಗ್ರಾಮಗಳಿವೆ. 28 ಗ್ರಾಮ ಪಂಚಾಯಿತಿಗಳು ಇವೆ. ಪ್ರಗತಿಪಥದಲ್ಲಿ ಸಾಗುತ್ತಿರುವ ಗ್ರಾಮಗಳಿಂದ ಹಿಡಿದು ಮೂಲ ಸೌಕರ್ಯಗಳಿಂದ ವಂಚಿತಗೊಂಡ ಗ್ರಾಮಗಳವರೆಗೆ, ಆಧುನಿಕ ಸೌಕರ್ಯ, ನಗರ ಹಾಗೂ ಮುಖ್ಯರಸ್ತೆಗೆ ಸಮೀಪದ ಹಳ್ಳಿಗಳಿಂದ ಹಿಡಿದು ಹಕ್ಕಿಪಿಕ್ಕಿ ಕಾಲೋನಿಗಳಿರುವ ಹಳ್ಳಿಗಳವರೆಗೂ ಇವೆ.

ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಮರೀಚಿಕೆ ಆಗಿದೆ. ಗ್ರಾಮಗಳಲ್ಲಿ‌ ತ್ಯಾಜ್ಯಗಳ ವಿಲೇವಾರಿ ಸಮರ್ಪಕವಾಗಿ ಮಾಡುತ್ತಿಲ್ಲ. ಚರಂಡಿಗಳಲ್ಲಿ ನೀರು, ಕಸ, ಕಡ್ಡಿ, ಪ್ಲಾಸ್ಟಿಕ್ ತುಂಬಿರುವುದರಿಂದ, ಕೊಳುಕು ನೀರು ರಸ್ತೆಗೆ ಹರಿಯುತ್ತಿವೆ. ಗ್ರಾಮ ಪಂಚಾಯಿತಿಗಳಲ್ಲಿ ಕೆಲ ಕಡೆ ಅಗತ್ಯ ಸಿಬ್ಬಂದಿ ಇದ್ದರೂ, ಕಸ, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಗ್ರಾಮಸ್ಥರ ಆರೋಪವಿದೆ. ಕೆಲವು ಪಂಚಾಯಿತಿ ಕೇಂದ್ರಗಳಲ್ಲಿಯೇ ಸ್ವಚ್ಛತೆಯ ಕೊರತೆ ಎದ್ದು ಕಂಡುಬರುತ್ತದೆ.

ತಾಲ್ಲೂಕಿನಲ್ಲಿ ಹಲವು ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ಒಂದೆಡೆ ಎಂಬಂತೆ ಒಟ್ಟಾರೆ 7 ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಮಾಡಲಾಗಿದೆ. ಎಸ್.ದೇವಗಾನಹಳ್ಳಿ, ಗಂಜಿಗುಂಟೆ, ತಲಕಾಯಲಬೆಟ್ಟ, ದೊಡ್ಡತೇಕಹಳ್ಳಿ, ಮಳಮಾಚನಹಳ್ಳಿ, ಕೊತ್ತನೂರು, ಕುಂಭಿಗಾನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗಿದೆ.

ಸಾದಲಿ ಮತ್ತು ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ಎಸ್.ದೇವಗಾನಹಳ್ಳಿಯಲ್ಲಿ, ಗಂಜಿಗುಂಟೆ ಮತ್ತು ಕುಂದಲಗುರ್ಕಿ ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ಗಂಜಿಗುಂಟೆಯಲ್ಲಿ, ತಿಮ್ಮನಾಯಕನಹಳ್ಳಿ, ತಲಕಾಯಲಬೆಟ್ಟ, ಈ.ತಿಮ್ಮಸಂದ್ರ, ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ತಲಕಾಯಲಬೆಟ್ಟದಲ್ಲಿ, ಅಬ್ಲೂಡು, ಬಶೆಟ್ಟಹಳ್ಳಿ, ದೊಡ್ಡತೇಕಹಳ್ಳಿ, ಪಲಿಚೇರ್ಲು ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ದೊಡ್ಡತೇಕಹಳ್ಳಿಯಲ್ಲಿ, ಮೇಲೂರು, ಮಳ್ಳೂರು, ಭಕ್ತರಹಳ್ಳಿ, ನಾಗಮಂಗಲ, ಮಳಮಾಚನಹಳ್ಳಿ, ಹಂಡಿಗನಾಳ, ಆನೂರು, ಹೊಸಪೇಟೆ, ಜಂಗಮಕೋಟೆ ಮತ್ತು ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ಮಳಮಾಚನಹಳ್ಳಿಯಲ್ಲಿ, ದೇವರಮಳ್ಳೂರು, ಕೊತ್ತನೂರು, ವೈ.ಹುಣಸೇನಹಳ್ಳಿ, ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ಕೊತ್ತನೂರಿನಲ್ಲಿ, ಚೀಮಂಗಲ ಮತ್ತು ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ಕುಂಭಿಗಾನಹಳ್ಳಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗಿದೆ.

ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಘನ ತ್ಯಾಜ್ಯ ವಿಲೇವಾರಿ ಮಾಡಲೆಂದು ವಾಹನವನ್ನು ಖರೀದಿಸಲಾಗಿದೆ. ಅಲ್ಲದೇ ಎಲ್ಲಾ ಗ್ರಾಮ ಪಂಚಾಯಿತಿಗೂ ದಹನಕಾರಕ (ಇನ್ಸಿನರೇಟರ್) ಕೂಡ ಖರೀದಿಸಲಾಗಿದೆ. ಒಂದೊಂದು ಘಟಕವನ್ನೂ ₹15 ಲಕ್ಷ ವೆಚ್ಚದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾಗಿದೆ. ಎರಡು ವರ್ಷಗಳ ಕಾಲ ಇವುಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಯವರೇ ಮಾಡುವರು, ನಂತರ ಮಹಿಳಾ ಒಕ್ಕೂಟಕ್ಕೆ ಇದರ ಉಸ್ತುವಾರಿಯನ್ನು ನೀಡಲಾಗುತ್ತದೆ. ಅವರು ಈ ಘಟಕದಲ್ಲಿ ತ್ಯಾಜ್ಯವನ್ನು ವರ್ಗೀಕರಿಸಿ, ಕೆಲವನ್ನು ಮಾರಿ, ಇನ್ನುಳಿದ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಹಣ ಸಂಪಾದಿಸಲಿದ್ದಾರೆ. ಗೊಬ್ಬರ ತಯಾರಿಸಲೆಂದೇ ಎರೆಹುಳು ಗೊಬ್ಬರದ ತೊಟ್ಟಿಗಳನ್ನು ನಿರ್ಮಿಸಲಾಗಿದೆ.

*

ತಾಲ್ಲೂಕಿನ 7 ಘನ ತ್ಯಾಜ್ಯ ವಿಲೇವಾರಿ ಘಟಕಗಳ ಪೈಕಿ 3 ಕಾರ್ಯನಿರ್ವಹಿಸುತ್ತಿವೆ. ಉಳಿದ 5 ಇನ್ನೇನು ಸದ್ಯದಲ್ಲಿಯೇ ಕಾರ್ಯನಿರ್ವಹಿಸಲಿವೆ. ಜುಲೈ ಒಳಗೆ ಎಲ್ಲ ಘಟಕಗಳು ಬಳಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು.
-ಜಿ.ಮುನಿರಾಜು, ತಾಲ್ಲೂಕು ಪಂಚಾಯಿತಿ ಇಒ

*

ಗ್ರಾಮದಲ್ಲಿ ಇದುವರೆಗೂ ತ್ಯಾಜ್ಯ ವಿಲೇವಾರಿ ಮಾಡಿಲ್ಲ. ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛತೆ ಮಾಡಿಲ್ಲ. ಸ್ವಚ್ಛತೆ ಮರೀಚಿಕೆ ಆಗಿದೆ. ತ್ಯಾಜ್ಯ ವಿಲೇವಾರಿಗೆ ಪಂಚಾಯಿತಿ ಅಧಿಕಾರಿಗಳು ಕ್ರಮವಹಿಸಬೇಕು.
-ಅಂಬರೀಷ್, ದೇವರಮಳ್ಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT