ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆಗೆ ಗುಟುಕು ನೀರೇ ಆಸರೆ: ಒಬ್ಬರಿಗೆ ದಿನಕ್ಕೆ 55 ಲೀಟರ್‌ ಪೂರೈಕೆ

Published 18 ಮಾರ್ಚ್ 2024, 6:52 IST
Last Updated 18 ಮಾರ್ಚ್ 2024, 6:52 IST
ಅಕ್ಷರ ಗಾತ್ರ

ಗ್ರಾಮಾಂತರ ಪ್ರದೇಶದಲ್ಲಿ ಒಬ್ಬರಿಗೆ ಒಂದು ದಿನಕ್ಕೆ 55 ಲೀಟರ್‌ ಪ್ರಕಾರ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರದಲ್ಲಿ ಎರಡು ದಿನ ನೀರು ಪೂರೈಸಲಾಗುತ್ತಿದೆ. ನೀರಿನ ಸಮಸ್ಯೆ ಹೆಚ್ಚಿದರೆ 35 ಲೀಟರ್‌ಗೆ ಇಳಿಸಲು ಸರ್ಕಾರ ಸೂಚಿಸಿದೆ. 

ತಾಲ್ಲೂಕು ಮಳೆ ಇಲ್ಲದೆ ಬರಗಾಲಕ್ಕೆ ತುತ್ತಾಗಿದೆ. 2020-21ರಲ್ಲಿ ಮುಂಗಾರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ದಾಖಲೆ ಮಳೆಯಾಗಿತ್ತು. ಕೊಳವೆ ಬಾವಿ, ಕೆರೆ ಕುಂಟೆಗಳಲ್ಲಿ ನೀರು ಶೇಖರಣೆಯಾಗಿತ್ತು. ಕಳೆದ ವರ್ಷ ಮಳೆ ಇಲ್ಲದ ಕಾರಣ ಕೆರೆಗಳು ಬತ್ತಿವೆ. ಅಂತರ್ಜಲ ಕುಸಿದಿದೆ. ಜನರ ಜೊತೆಗೆ ಜಾನುವಾರುಗಳಿಗೆ ನೀರಿಗೆ ಹಾಹಾಕಾರ ಉಂಟಾಗಿದೆ. ಇದು ಇನ್ನು ಆರಂಭಿಕ. ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. 

ತಾಲ್ಲೂಕಿನ ಪ್ರತಿ ಹಳ್ಳಿಗೆ ಕುಡಿಯುವ ನೀರು ಪೂರೈಸಲು ಕೊಳವೆ ಬಾವಿ ಇದೆ. ಆದರೆ ನೀರಿನ ಒರತೆ ಕ್ಷೀಣಿಸುತ್ತಿದೆ. ಮುಂದಿನ ದಿನಗಳಲ್ಲಿ 31 ಹಳ್ಳಿಗಳಿಗೆ ನೀರಿನ ಅಭಾವ ಉಂಟಾಗಬಹುದು ಎಂದು ತಾಲ್ಲೂಕು ಆಡಳಿತ ಅಂದಾಜಿಸಿದೆ. ನೀರಿನ ಸಮಸ್ಯಯಾಗದಂತೆ ಕೊಳವೆ ಬಾವಿಗಳನ್ನು ಮತ್ತೊಮ್ಮೆ ಕೊರೆಸುವುದು, ಟ್ಯಾಂಕರ್, ಖಾಸಗಿ ಕೊಳವೆ ಬಾವಿಗಳನ್ನು ಪಡೆದು ನೀರಿನ ಸಮಸ್ಯೆ ನೀಗಿಸಲು ತಾಲ್ಲೂಕು ಅಡಳಿತ ಸಿದ್ಧತೆ ಮಾಡಿಕೊಂಡಿದೆ.

ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕತಮ್ಮನಹಳ್ಳಿ, ಕೊಪ್ಪಕಾಟೇನಹಳ್ಳಿ, ಪಾವಜೇನಹಳ್ಳಿ, ರಾಮಗಾನಹಳ್ಳಿ, ತಲವಾರದಿನ್ನೆ, ಹುಮಂತಪುರ, ಹಂಪಸಂದ್ರ ಗ್ರಾಮ ಪಂಚಾಯಿತಿ ಹಂಪಸಂದ್ರ, ಸಂಜೀವರಾಯನಹಳ್ಳಿ, ಕೊಂಡರೆಡ್ಡಿಹಳ್ಳಿ, ಚೆಂಡೂರು, ಪಸಪಲೋಡು, ಆದಿನಾರಾಯಣಹಳ್ಳಿ, ಕಡೇಹಳ್ಳಿ, ದಪ್ಪರ್ತಿ ಗ್ರಾಮ ಪಂಚಾಯಿತಿ ದಪ್ಪರ್ತಿ, ಗವಿಕುಂಟಹಳ್ಳಿ, ವರ್ಲಕೊಂಡ ಗ್ರಾಮ ಪಂಚಾಯಿತಿಯ ಅಪ್ಪಿರೆಡ್ಡಿಹಳ್ಳಿ, ಬೊಮ್ಮನಹಳ್ಳಿ, ಮೇಲಿನ ಅಪ್ಪಿರೆಡ್ಡಿಹಳ್ಳಿ, ಮುದ್ದರೆಡ್ಡಿಹಳ್ಳಿ ಕೇರೇನಹಳ್ಳಿ, ಭತ್ತಲಹಳ್ಳಿ ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಗುಂಡ್ಲಹಳ್ಳಿ, ಕಮ್ಮಡಿಕೆ, ತಿರುಮಣಿ ಗ್ರಾಮ ಪಂಚಾಯಿತಿಯ ಯರ್ರಲಕ್ಕೇನಹಳ್ಳಿ, ತಿರುಮಣಿ, ಮಿಂಚಿನಹಳ್ಳಿ, ಉಲ್ಲೋಡು ಗ್ರಾಮ ಪಂಚಾಯಿತಿಯ ಚಿನ್ನಹಳ್ಳಿ, ನಿಚ್ಚನಬಂಡನಹಳ್ಳಿ, ಎಲ್ಲೋಡು ಗ್ರಾಮ ಪಂಚಾಯಿತಿಯ ಬುಳ್ಳಸಂದ್ರ, ಯರ್ರಹಳ್ಳಿ, ಮ್ಯಾಳಕೆರೆ ಸೇರಿ 31 ಹಳ್ಳಿಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಸಾಮರ್ಥ್ಯ ಕಡಿಮೆಯಾಗಿದೆ. ಇಲ್ಲಿ ಕೆಲವೇ ದಿನಗಳಲ್ಲಿ ಸಮಸ್ಯೆ ಉಂಟಾಗಬಹುದು.

ಕೇಂದ್ರ ಸರ್ಕಾರ ಜಲ ಜೀವಿನ್ ಮಿಷನ್ ಯೋಜನೆಯಡಿ ತಾಲ್ಲೂಕಿನ 118 ಗ್ರಾಮಗಳ ಪ್ರತಿ ಮನೆಗೆ ನೀರು ಪೂರೈಸಲು ₹ 60 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ₹ 6 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೆಲವು ಹಳ್ಳಿಗಳಿಗೆ ಪೈಪ್‌ಲೈನ್, ನಲ್ಲಿ ಅಳವಡಿಸಲಾಗಿದೆ. ಕೆಲವೇ ಹಳ್ಳಿಗಳಿಗೆ ಮಾತ್ರ ನೀರು ಪೂರೈಕೆ ಆಗುತ್ತಿದೆ. ಕೆಲವು ಕಡೆ ಒವರ್ ಹೆಡ್ ಟ್ಯಾಂಕ್ ನಿರ್ಮಾಣ ಅಗಬೇಕಿದೆ.

ಜೆಜೆಎಂ ಯೋಜನೆಯಲ್ಲಿ ಗುಡಿಬಂಡೆ ಪಟ್ಟಣದ ಅಮಾನಿಬೈರಸಾಗರ ಕೆರೆಯಿಂದ 11.21 ಎಂಸಿಎಫ್‌ಟಿ ನೀರನ್ನು ಬಳಕೆ ಮಾಡಿಕೊಂಡು, ಪ್ರತಿ ವರ್ಷ ನೀರಿನ ಸಮಸ್ಯೆ ಅಗುವ ಉಲ್ಲೋಡು, ಹಂಪಸಂದ್ರ, ಎಲ್ಲೋಡು, ದಪ್ಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 28 ಹಳ್ಳಿಗಳಿಗೆ ನೀರು ಪೂರೈಸುವ ಕಾಮಗಾರಿ ಸಹ ಸಾಗುತ್ತಿದೆ.

ಪಟ್ಟಣದ ವ್ಯಾಪ್ತಿಯ 11 ವಾರ್ಡ್‌ಗಳಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಅಮಾನಿಬೈರಸಾಗರ ಕೆರೆ ನೀರನ್ನು ಶುದ್ಧೀಕರಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದಲ್ಲಿ ಹಲವು ಕೊಳವೆ ಬಾವಿಗಳು ಬತ್ತುವ ಹಂತದಲ್ಲಿವೆ. ಹೀಗೆ ಪುಟ್ಟ ತಾಲ್ಲೂಕು ಎನಿಸಿರುವ ಗುಡಿಬಂಡೆಯಲ್ಲಿ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಹಂಪಸಂದ್ರ ಗ್ರಾಮ ಪಂಚಾಯಿತಿ ಅದಿನಾರಾಯಣಹಳ್ಳಿಯಲ್ಲಿ ಕೊಳವೆ ಬಾವಿಯಲ್ಲಿ ನೀರಿನ ಸಾಮರ್ಥ್ಯ ಕುಸಿದಿದ್ದು ಅಧಿಕಾರಿಗಳು ಪರಿಶೀಲಿಸಿದರು
ಹಂಪಸಂದ್ರ ಗ್ರಾಮ ಪಂಚಾಯಿತಿ ಅದಿನಾರಾಯಣಹಳ್ಳಿಯಲ್ಲಿ ಕೊಳವೆ ಬಾವಿಯಲ್ಲಿ ನೀರಿನ ಸಾಮರ್ಥ್ಯ ಕುಸಿದಿದ್ದು ಅಧಿಕಾರಿಗಳು ಪರಿಶೀಲಿಸಿದರು
ತಾಲ್ಲೂಕಿನಲ್ಲಿನ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿದೆ. ಇದರಂದ ಅಂತರ್ಜಲ ಕುಸಿದು ಕೊಳವೆ ಬಾವಿಗಳಲ್ಲಿ ನೀರಿಲ್ಲ.
–  ಸುಬ್ಬರಾಯಪ್ಪ ಸದಾಶಿವನಹಳ್ಳಿ 
- ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆ ಕುಂಟೆ ಜತೆಗೆ ಕುಶಾವತಿ ನದಿ ಬತ್ತಿದೆ. ಕೆಲವೇ ದಿನಗಳಲ್ಲಿ ನೀರಿನ ಅಭಾವ ಉಂಟಾಗಬಹುದು.
– ಕಡೇಹಳ್ಳಿ ಅನಂದಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT