ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನದಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು: ಡಾ. ಕೆ.ಸುಧಾಕರ್ ಮಾಹಿತಿ

Last Updated 7 ಆಗಸ್ಟ್ 2020, 16:48 IST
ಅಕ್ಷರ ಗಾತ್ರ

ಗೌರಿಬಿದನೂರು: ಆಂಧ್ರದ ಕೃಷ್ಣಾ ನದಿಯಿಂದ 5ರಿಂದ 10 ಟಿಎಂಸಿ ಹೆಚ್ಚುವರಿ ನೀರನ್ನು ಜಿಲ್ಲೆಗೆ ಹರಿಸುವ ಸಂಬಂಧ ಆಂಧ್ರ‌ದ ಮುಖ್ಯಮಂತ್ರಿ ಹಾಗೂ ರಾಜ್ಯದ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ನಗರೊತ್ಥಾನ ಯೋಜನೆಯಡಿ ₹ 7.81 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಅದಕ್ಕಾಗಿ ಎಚ್ಎನ್ ವ್ಯಾಲಿ, ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಅನುದಾನ ನೀಡುತ್ತಿದೆ. ರಾಜ್ಯ ಕೈಗಾರಿಕಾ ನೀತಿಯ ಮೇರೆಗೆ ಈ‌ ಭಾಗಕ್ಕೆ ಮತ್ತಷ್ಟು ಕೈಗಾರಿಕೆಗಳನ್ನು ತರಲಾಗುವುದು. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಅಭಿವೃದ್ಧಿ ಕಾರ್ಯಗಳಿಗೆ ರಾಜಕೀಯ ಅಡ್ಡಿ ಬರುವುದಿಲ್ಲ. ನಗರದಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿ, ‘ತಾಲ್ಲೂಕು ಅಭಿವೃದ್ಧಿಯಲ್ಲಿ ದಾಪುಗಾಲು ಹಾಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಈ ಭಾಗಕ್ಕೆ ಹೆಚ್ಚಿನ ಅನುದಾನ ಹರಿದು ಬಂದು ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ. ಮಿನಿವಿಧಾನಸೌಧ, ಅಂಬೇಡ್ಕರ್ ಅಧ್ಯಯನ ಕೇಂದ್ರ, ಕುಡುಮಲಕುಂಟೆ ಕೈಗಾರಿಕ ಪ್ರದೇಶದಲ್ಲಿ ಕೈಗಾರಿಕ ಸ್ಥಾಪನೆ, ಹೊಸೂರು ಬಳಿ ವಿಜ್ಞಾನ ಕೇಂದ್ರ ಅಭಿವೃದ್ಧಿ ಕಾರ್ಯಗಳಾಗಿವೆ. 5 ವರ್ಷದಲ್ಲಿ ನಗರಸಭೆಗೆ ಸುಮಾರು ₹ 100 ಕೋಟಿಯಷ್ಟು ಹಣ ಬಿಡುಗಡೆಯಾಗಿತ್ತು. ಸಚಿವ ಜಗದೀಶ್ ಶೆಟ್ಟರ್ ನೆನ್ನೆ ಕರೆಮಾಡಿ ಕುಡುಮಲಕುಂಟೆ ಮೂರನೇ ಹಂತದ ಅಭಿವೃದ್ಧಿಗೆ ಸುಮಾರು 900 ಎಕರೆ ಮಂಜೂರು ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ’ ಎಂದರು.

ಆಶ್ರಯ ಯೋಜನೆಯಡಿ ವಸತಿರಹಿತ ನಗರವಾಸಿಗಳಿಗೆ ಉಚಿತ ನಿವೇಶನಗಳ ಹಕ್ಕುಪತ್ರ, ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಬಡರೋಗಿಗಳಿಗೆ ತಲಾ ₹ 5000 ಸಹಾಯಧನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜಿಯಾ ತರನ್ನಮ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ತಹಶೀಲ್ದಾರ್ ಎಂ .ರಾಜಣ್ಣ, ತಾಲ್ಲೂಕು ಪಂಚಾಯಿತಿ ಇಒ ಎನ್.ಮುನಿರಾಜು, ನಗರಸಭೆ ಆಯುಕ್ತ ಜಿ.ಎನ್. ಚಲಪತಿ, ಆರೋಗ್ಯ ಅಧಿಕಾರಿ ಒ.ರತ್ನಮ್ಮ ಇದ್ದರು.

ವರ್ಷದ ಬಳಿಕ ವೇದಿಕೆ ಹಂಚಿಕೊಂಡ ಸಚಿವ, ಶಾಸಕ

ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ. ಸುಧಾಕರ್ ರಾಜ್ಯ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರೆ, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ತಾಲ್ಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ‌ಕಾರ್ಯಗಳು‌ ಹಾಗೂ ಮಾಜಿ ಮುಖ್ಯಮಂತ್ರಿಯನ್ನು ಬಣ್ಣಿಸಿದರು. ಉಪಚುನಾವಣೆ ವೇಳೆ ಈ ಇಬ್ಬರು ‍ಪರಸ್ಪರ ಆರೋಪ– ಪ್ರತ್ಯಾರೋಪಗಳಿಂದಲೇ ಸದ್ದು ಮಾಡಿದ್ದರು. ವರ್ಷದ ಬಳಿಕ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಶಾಸಕ, ಸಚಿವರಿಬ್ಬರು ಪರಸ್ಪರ ಸನ್ಮಾನಿಸಿಕೊಂಡರು.

ರಾರಾಜಿಸಿದ ಪ್ಲೆಕ್ಸ್, ಬ್ಯಾನರ್

ಸಚಿವರಾದ ಬಳಿಕ ಡಾ.ಕೆ.ಸುಧಾಕರ್ ಮೊದಲ ಬಾರಿಗೆ ವೇದಿಕೆ ಕಾರ್ಯಕ್ರಮಕ್ಕೆ ನಗರ ಬಂದಿದ್ದರಿಂದ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಸ್ವಾಗತ‌ ಕೋರಲು ನಗರದೆಲ್ಲೆಡೆ ಪ್ಲೆಕ್ಸ್, ಬ್ಯಾನರ್ ಅಳವಡಿಸಿದ್ದು, ಚರ್ಚೆಗೆ ಗ್ರಾಸವಾಗಿತ್ತು. ನಗರದಲ್ಲಿ ಯಾವುದೇ ಕಾರಣಕ್ಕೂ ಪ್ಲೆಕ್ಸ್ ಬ್ಯಾನರ್ ಹಾಕುವಂತಿಲ್ಲ ಎಂದು ಪುರಸಭೆ ಸೂಚಿಸಿದ್ದರು, ನಿಯಮ ಉಲ್ಲಂಘಿಸಿ ಫ್ಲೆಕ್ಸ್‌ ಅಳವಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT