ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಡಿಬಂಡೆ | ಇನ್ನೂ ಆರಂಭವಾಗದ ಕಾಮಗಾರಿಗಳು

ಜೆ.ವೆಂಕಟರಾಯಪ್ಪ
Published 11 ಮಾರ್ಚ್ 2024, 4:27 IST
Last Updated 11 ಮಾರ್ಚ್ 2024, 4:27 IST
ಅಕ್ಷರ ಗಾತ್ರ

ಗುಡಿಬಂಡೆ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಗುಡಿಬಂಡೆ ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿಗೆ 2019-20ರಿಂದ 2023-24ರವರೆಗೆ 20 ಕಾಮಗಾರಿಗೆ ಶಾಸಕ ಭೂಮಿಪೂಜೆ ಮಾಡಿದ್ದಾರೆ. ಈ ಪೈಕಿ 12 ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಉಳಿದ 8 ಕಾಮಗಾರಿಗಳು ಅರೆಬರೆ ಕಾಮಗಾರಿಗಳಾಗಿವೆ.

ಗುಡಿಬಂಡೆ ತಾಲ್ಲೂಕಿನಲ್ಲಿ ಸತತ ಬರಗಾಲದ ಹಿನ್ನೆಲೆಯಲ್ಲಿ ಅಂತರ್ಜಲ ವೃದ್ಧಿಗಾಗಿ 2019-20ರಲ್ಲಿ 6 ಕಾಮಗಾರಿಗಳನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕೈಗೆತ್ತಿಕೊಂಡು ಟೆಂಡರ್ ಪ್ರಕ್ರಿಯೆ ಮುಗಿದು ₹4.5 ಕೋಟಿ ಮೊತ್ತಕ್ಕೆ ಎಸ್.ನಾರಾಯಣರೆಡ್ಡಿ ಕಾಮಗಾರಿ ಗುತ್ತಿಗೆ ಪಡೆದಿದ್ದಾರೆ.

ಕೋವಿಡ್ ಕಾರಣ ಎರಡು ವರ್ಷ ಕಾಮಗಾರಿ ವಿಳಂಬವಾಗಿ 2021-22 ನೇ ಸಾಲಿನಲ್ಲಿ ಉಲ್ಲೋಡು ಗ್ರಾಮ ಪಂಚಾಯಿತಿ ಯಲಕಲರಾಳ್ಳ ಹಳ್ಳಿ ಬಳಿಯ ಗುಡಿಬಂಡೆ ಅಮಾನಿಬೈರಸಾಗರ ಕೆರೆಗೆ ಬರುವ ಕುಶಾವತಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ, ಎಲ್‌ಎಲ್‌ಸಿ ಕಾಮಗಾರಿಗೆ ₹1.60 ಕೋಟಿ, ಬ್ರಾಹ್ಮಣರಹಳ್ಳಿ ಬಳಿ ವಿದ್ಯಾಗಿರಿ ತಪ್ಪಲಿನ ಚಿಲುಮೆ ಬಳಿ ₹1.18 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದರು.

ಯಲಕಲರಾಳ್ಳಿ ಕಾಮಗಾರಿ ಮಳೆಗಾಲಕ್ಕೆ ಮುಂಚೆ ಆಗಲಿಲ್ಲ. ಮಳೆಯಿಂದ ಸೇತುವೆ ಕೊಚ್ಚಿಹೊಗಿತ್ತು. ಇದನ್ನು ಗಮನಿಸಿದ ಶಾಸಕ ಕಾಮಗಾರಿ ಸರಿಪಡಿಸಿದ ನಂತರ ಬಿಲ್‌ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು. 3 ವರ್ಷವಾದರೂ ಈ ಕಾಮಗಾರಿ ಕೆಲಸ ಆರಂಭವಾಗಲಿಲ್ಲ.

ಲಕ್ಕೆನಹಳ್ಳಿ ಬಳಿ ಚೆಕ್ ಡ್ಯಾಂ ಕಾಮಗಾರಿ ಅಪೂರ್ಣವಾಗಿದೆ. ಕಮ್ಮಡಿಕೆ ಬಳಿ ಚೆಕ್ ಡ್ಯಾಂ, ಪೋಲಂಪಲ್ಲಿ ಬಳಿ ಚೆಕ್ ಡ್ಯಾಂ, ತಿಮ್ಮಯ್ಯಗಾರಪಲ್ಲಿ ಬಳಿಯ ಚೆಕ್ ಡ್ಯಾಂ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.

2022-23ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಎರಡು ಕಾಮಗಾರಿ, ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಹಳೆ ಕೆರೆಯ ಅಭಿವೃದ್ಧಿ ಹಾಗೂ ಕಂಬಾಲಹಳ್ಳಿ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಸ್ಥಳೀಯರೇ ಗುತ್ತಿಗೆ ಪಡೆದಿದ್ದು ಒಂದು ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೊಂದು ಪೂರ್ಣಗೊಂಡಿದೆ.

2023-24ನೇ ಸಾಲಿಗೆ ಕೆರೆಗಳ ಆಧುನೀಕರಣ ಯೋಜನೆಯಲ್ಲಿ ನಾಲ್ಕು ಕಾಮಗಾರಿ, ಚಂಡೂರು ಕೆರೆಯ ತೂಬುಗಳ ಮರುನಿರ್ಮಾಣ ಹಾಗೂ ಏರಿ ದುರಸ್ತಿ ಕಾಮಗಾರಿಗೆ ₹9 ಲಕ್ಷ, ಕಡೇಹಳ್ಳಿ ಕೆರೆಯ ಏರಿ ಮತ್ತು ಕುಶಾವತಿ ನದಿಯಿಂದ ಕೆರೆಗೆ ನೀರು ಹರಿಯುವ ಕಾಲುವೆ ಒಡೆದು ಹೋದ ಭಾಗಗಳಲ್ಲಿ ದುರಸ್ತಿಗೆ ₹30 ಲಕ್ಷದ ಕಾಮಗಾರಿ ಪ್ರಗತಿಯಲ್ಲಿದೆ. ದೊಡ್ಡನಾಂಚರ್ಲು ಕೆರೆಯ ಏರಿ ದುರಸ್ತಿ ಹಾಗೂ ಗುಡಿಬಂಡೆ ಪಟ್ಟಣದಲ್ಲಿನ ಅಮಾನಿಬೈರಸಾಗರ ಕೆರೆ, ರಾಜಕಾಲುವೆ ಅಭಿವೃದ್ಧಿ ಕೆಲಸ ಇನ್ನೂ ಪ್ರಾರಂಭವಾಗಿಲ್ಲ.

2023-24ನೇ ಸಾಲಿನ ಅಟಲ್ ಭೂಜಲ ಯೋಜನೆಯಲ್ಲಿ 8 ಕಾಮಗಾರಿಗಳಿಗೆ ಅನುಮೋದನೆಯಾಗಿದ್ದು ತಲಾ ₹50 ಲಕ್ಷದಂತೆ ₹4 ಕೋಟಿ ಹಣದಲ್ಲಿ ಪೆಮ್ಮನಹಳ್ಳಿ, ಬೀಚಗಾನಹಳ್ಳಿ, ಮದ್ದಿರೆಡ್ಡಿಹಳ್ಳಿ, ದಪ್ಪರ್ತಿ, ಪುಲಿಸಾನಿಒಡ್ಡು, ಸೋಮೇನಹಳ್ಳಿ, ಚಿನ್ನಪಲ್ಲಿ, ಯಲ್ಲೋಡು ಬಳಿಯ ಚೆಕ್ ಡ್ಯಾಂ ನಿರ್ಮಾಣ ಹಂತದಲ್ಲಿದೆ.

ಅಟಲ್ ಭೂಜಲ ಯೋಜನೆಯಡಿ ಕೆಲವು ಚೆಕ್ ಡ್ಯಾಂ ನಿರ್ಮಾಣದ ಸ್ಥಳಗಳು ಸರ್ಕಾರಿ ದಾಖಲೆಗಳಲ್ಲಿ ಕಾಲುವೆ ಅಗಲವಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಜಾಗ ಕಡಿಮೆ ಇರುವುದರಿಂದ ಸರ್ವೆ ಮಾಡಿದ ನಂತರ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ. ಕೆರೆ ಆಧುನಿಕರಣ ಯೋಜನೆ ಕಾಮಗಾರಿ ಕೆಲಸಕ್ಕೆ ಗುತ್ತಿಗೆದಾರರಿಗೆ ಹಣ ಪಾವತಿ ಅಗದೇ ಕಾಮಗಾರಿ ಕೆಲಸಗಳು ಪೂರ್ಣವಾಗಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಸೈಟ್ ಸಹಾಯಕ ಎಂಜಿನಿಯರ್‌ ಸುನಿಲ್ ತಿಳಿಸಿದರು.

ಗುಡಿಬಂಡೆ ತಾಲ್ಲೂಕಿನ ಸರಣಿ ಚೆಕ್ ಡ್ಯಾಂ ಪೈಕಿ ಯಲಕರಾಳ್ಳಹಳ್ಳಿ ಬಳಿ ಕುಶಾವತಿ ನದಿಗೆ ಅಡ್ಡಲಾಗಿ ಸೇತುವೆ, ತಡೆಗೋಡೆ, ರಸ್ತೆ ಆಗಬೇಕಿದ್ದು ಹೆಚ್ಚಿನ ಅನುದಾನ ಬೇಕಾಗಿದೆ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೇತನ್ ತಿಳಿಸಿದರು.

ಮೂರು ವರ್ಷಗಳಿಂದ ಕುಶಾವತಿ ನದಿಗೆ ಸೇತುವೆ ನಿರ್ಮಾಣ ಮಾಡುತ್ತಿದ್ದು ಎರಡು ವರ್ಷಗಳ ಹಿಂದೆ ಸೇತುವೆ ನಿರ್ಮಾಣ ಹಂತದಲ್ಲಿ ಮಳೆಗೆ ಸೇತುವೆ ಕೊಚ್ಚಿಕೊಂಡು ಹೋಗಿದೆ. ತಡೆಗೋಡೆ ನಿರ್ಮಾಣ ಮಾಡದೇ ಇರುವುದರಿಂದ ಪಕ್ಕದ ಕೃಷಿ ಜಮೀನುಗಳು ಕೊಚ್ಚಿ ಹೋಗಿದೆ.ಇಂದಿಗೂ ಪರಿಹಾರ ಬಂದಿಲ್ಲ ಎಂದು ರೈತ ಯಲಕರಾಳ್ಳಹಳ್ಳಿ ವೈ.ಎನ್.ನರಸಿಂಹರೆಡ್ಡಿ ತಿಳಿಸಿದರು.

ಅಟಲ್ ಭೂಜಲ ಯೋಜನೆಯಲ್ಲಿ ಪುಲಿಸಾನಿವುಡ್ಡು ಗ್ರಾಮದ ಬಳಿ ಚೆಕ್ ಡ್ಯಾಂ ಪ್ರಾರಂಭದ ಹಂತದಲ್ಲಿರುವುದು
ಅಟಲ್ ಭೂಜಲ ಯೋಜನೆಯಲ್ಲಿ ಪುಲಿಸಾನಿವುಡ್ಡು ಗ್ರಾಮದ ಬಳಿ ಚೆಕ್ ಡ್ಯಾಂ ಪ್ರಾರಂಭದ ಹಂತದಲ್ಲಿರುವುದು
ಗುಡಿಬಂಡೆ ಪಟ್ಟಣದ ಸಮೀಪ ವಿದ್ಯಾಗಿರಿ ತಪ್ಪಲಿನ ಚಿಲುಮೆ ಬಳಿ ಚಕ್ ಡ್ಯಾಂ ಕಾಮಗಾರಿ ಗುಡ್ಡದಲ್ಲಿ ಕಲ್ಲುಗಳು ತೆಗೆದಿರುವುದು ಬಿಟ್ಟರೇ ಕಾಮಗಾರಿಗೆ ಅಷ್ಟಕ್ಕೆ ನಿಂತಿರುವುದು.
ಗುಡಿಬಂಡೆ ಪಟ್ಟಣದ ಸಮೀಪ ವಿದ್ಯಾಗಿರಿ ತಪ್ಪಲಿನ ಚಿಲುಮೆ ಬಳಿ ಚಕ್ ಡ್ಯಾಂ ಕಾಮಗಾರಿ ಗುಡ್ಡದಲ್ಲಿ ಕಲ್ಲುಗಳು ತೆಗೆದಿರುವುದು ಬಿಟ್ಟರೇ ಕಾಮಗಾರಿಗೆ ಅಷ್ಟಕ್ಕೆ ನಿಂತಿರುವುದು.

ಲಕ್ಕೆನಹಳ್ಳಿ ಚೆಕ್‌ ಡ್ಯಾಂಗೆ ಅಮಾನಿಬೈರಸಾಗರ ಕೆರೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಡ್ಯಾಂ ಪೂರ್ತಿ ಮಣ್ಣು ತುಂಬಿದೆ. ಡ್ಯಾಂ ಕೆಳಭಾಗ ಸಂಪೂರ್ಣ ಹಾಳಾಗಿದೆ- ಗೋವಿಂದಪ್ಪ ಲಕ್ಕೆನಹಳ್ಳಿ ಗ್ರಾಮಸ್ಥ

ಕಾಮಗಾರಿ ಶೀಘ್ರ ಯಲಕಲರಾಳ್ಳಹಳ್ಳಿ ಬಳಿಯ ಸೇತುವೆ ಕಳಪೆ ಕಾಮಗಾರಿಯಿಂದ 2 ವರ್ಷಗಳ ಹಿಂದೆ ಕಿತ್ತುಹೋಗಿದೆ. ಅನುದಾನ ಬಿಡುಗಡೆ ಮಾಡಬಾರದು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಉಳಿದ ಕಾಮಗಾರಿಗಳ ವಿಚಾರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಶೀಘ್ರ ಕಾಮಗಾರಿ ಪೂರ್ಣಗೊಳ್ಳಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT