ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಅಂತರ್ಜಲ: ಹೆಚ್ಚಿದ ನೀರಿನ ಬವಣೆ

ಕೆರೆಕುಂಟೆಗಳು ಖಾಲಿ ಖಾಲಿ: ಜನ, ಜಾನುವಾರಿಗೆ ಸಂಕಷ್ಟ
Published 20 ಮಾರ್ಚ್ 2024, 9:19 IST
Last Updated 20 ಮಾರ್ಚ್ 2024, 9:19 IST
ಅಕ್ಷರ ಗಾತ್ರ

ಸಾದಲಿ: ಶಿಡ್ಲಘಟ್ಟ ತಾಲ್ಲೂಕಿನ ಗಡಿ ಭಾಗವಾದ ಸಾದಲಿ ಹೋಬಳಿಯಲ್ಲಿ ಬೇಸಿಗೆ ಆರಂಭದಲ್ಲಿಯೇ ಜಲ ಮೂಲಗಳಾದ ಕೆರೆ, ಕುಂಟೆ, ಚೆಕ್ ಡ್ಯಾಂಗಳು ಬರಿದಾಗುತ್ತಿದ್ದು, ಅಂತರ್ಜಲ ಕುಸಿದಿದೆ. ಜನ, ಜಾನುವಾರು ಹಾಗೂ ಕೃಷಿಗೆ ನೀರಿನ ಸಮಸ್ಯೆ ಎದುರಾಗಿದೆ.

ತಾಲ್ಲೂಕಿನಲ್ಲಿ ಹಿಂದುಳಿದ ಪ್ರದೇಶವಾದ ಸಾದಲಿ ಹೋಬಳಿ ಹೆಚ್ಚು ಬೆಟ್ಟ ಗುಡ್ಡಗಳಿಂದ ಕೂಡಿದೆ. ಕೆಲವು ನೀರು ಸಂಗ್ರಹವಾಗುವ ಕೆರೆಗಳಿವೆ. ಇನ್ನು ಹಲವು ಕರೆಗಳು ಒತ್ತುವರಿಯಾಗಿ ನೀರು ಸಂಗ್ರಹವಾಗುತ್ತಿಲ್ಲ. ಇದೀಗ ಬೇಸಿಗೆ ಕಾಲದಲ್ಲಿ ಯಾವ ಕೆರೆಯಲ್ಲೂ ನೀರಿಲ್ಲ.

ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿಗಾಗಿ ಜನತೆ ಪ್ರತಿನಿತ್ಯ ಪರದಾಡುವ ದೃಶ್ಯ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿದೆ. ಜಾನುವಾರುಗಳ ಸ್ಥಿತಿಯಂತೂ ಹೇಳತೀರದಾಗಿದೆ. ಕುರಿ– ಮೇಕೆಗಳು ನೀರಿಗಾಗಿ ಪ್ರತಿನಿತ್ಯ ಹುಡುಕಿಕೊಂಡು ಹೋಗುವ ಸ್ಥಿತಿ ಎದುರಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳ ಬಿಸಿಲನ್ನು ಎದುರಿಸುವುದು ಹೇಗೆ ಎಂಬ ಚಿಂತೆ ಜನರನ್ನು ಕಾಡುತ್ತಿದೆ.

ಮುಂಗಾರು ಮಳೆ ಕಳೆದ ವರ್ಷ ಕೈಕೊಟ್ಟಿದ್ದ ಹಿನ್ನೆಲೆಯಲ್ಲಿ ಹಲವು ಬಾವಿ, ಕೆರೆ ಕುಂಟೆಗಳು ಹಾಗೂ ಬೋರ್‌ವೆಲ್‌ಗಳು ಬತ್ತಿವೆ. ಬಿಸಿಲು ಹೊಡೆತದಿಂದ ನೀರಿರುವ ಕೆರೆಗಳು ಬತ್ತುವ ಸ್ಥಿತಿಗೆ ತಲುಪಿವೆ.

ರಾಮಸಮುದ್ರ ಕೆರೆ ನೀರು ಕಲುಷಿತ: ಈ ಭಾಗಕ್ಕೆ ಬಂದರೆ ನೀರಿನ ಸಮಸ್ಯೆ ಎದುರಾದಾಗ ರಾಮಸಮುದ್ರ ಕೆರೆ ಆಸರೆಯಾಗಬಹುದಾದರೂ ಮೀನು ಸಾಕಾಣಿಕೆ ಮಾಡಲು ಗುತ್ತಿಗೆ ಪಡೆದವರು ಮೀನುಗಳಿಗೆ ಮಾಂಸ ಮತ್ತು ಇತರ ಪದಾರ್ಥಗಳ ಹಾಕಿ ನೀರನ್ನು ಕಲುಷಿತ ಮಾಡಿದ್ದಾರೆ. ಹೀಗಾಗಿ ಈ ನೀರು ಬಳಕೆಗೆ ಯೋಗ್ಯವಾಗಿಲ್ಲ.
ಹೋಬಳಿಯ ಈ.ತಿಮ್ಮಸಂದ್ರ, ತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ಎಸ್.ದೇವಗಾನಹಳ್ಳಿ, ಸಾದಲಿ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ.

ವಾರಕ್ಕೊಮ್ಮೆ ನೀರು: ಹೋಬಳಿಯ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಹಲವು ಗ್ರಾಮಗಳಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಾರೆ. ಅದನ್ನೇ ಇಡೀ ವಾರದ ಪೂರ್ತಿ ಜನ ಬಳಸಬೇಕು. ಸಾದಲಿ ಹೋಬಳಿಯ ಭಾಗದಲ್ಲಿ ಸಾವಿರ ಅಡಿ ಕೊರೆದರು ನೀರು ಸಿಗುತ್ತಿಲ್ಲ. ಸಿಕ್ಕ ಅಲ್ಪ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ.

ಕುರಿ, ಮೇಕೆ ಹಾಗೂ ಕಾಡು ಪ್ರಾಣಿಗಳು ಕೆರೆ, ಕುಂಟೆಯಲ್ಲಿನ ನೀರನ್ನು ಮೂಸಿ ನೋಡುತ್ತಿಲ್ಲ. ಕೆಲವೊಂದು ಕೆರೆಗಳಲ್ಲಿ ಮೀನನ್ನು ಬಿಟ್ಟಿದ್ದು ಅವುಗಳ ಸಾಕಾಣಿಕೆಗೆಂದು ವಿವಿಧ ಬಗೆಯ ಆಹಾರವನ್ನು ಕೆರೆಗೆ ಹಾಕಲಾಗಿತ್ತು. ಇದರಿಂದ ನೀರು ಕಲುಷಿತಗೊಂಡಿವೆ. ಕುರಿ, ಮೇಕೆಗಳು ಹಾಗೂ ಜಾನುವಾರುಗಳಿಗಾಗಿ ನಿರ್ಮಿಸಿರುವ ನೀರಿನ ತೊಟ್ಟಿಗಳಲ್ಲಿ ಕಸ ಕಡ್ಡಿ ತುಂಬಿದೆ. ಇನ್ನು ಉಳಿದ ತೊಟ್ಟಿಲಲ್ಲಿ ನೀರು ಇಲ್ಲ. ತೊಟ್ಟಿಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಬಿ.ಎಂ.ವೆಂಕಟೇಶ್ ಒತ್ತಾಯಿಸಿದರು.

ಸಾದಲಿ ಹೊಸ ಕೆರೆಯಲ್ಲಿ ನೀರಿಲ್ಲದೆ ಬಯಲು ಭೂಮಿಯಂತೆ ಕಾಣುತ್ತಿರುವುದು.
ಸಾದಲಿ ಹೊಸ ಕೆರೆಯಲ್ಲಿ ನೀರಿಲ್ಲದೆ ಬಯಲು ಭೂಮಿಯಂತೆ ಕಾಣುತ್ತಿರುವುದು.
ಸಾದಲಿ ಕೆರೆಯಲ್ಲಿ ತಗ್ಗು ಪ್ರದೇಶದಲ್ಲಿ ಇರುವ ಸ್ವಲ್ಪ ನೀರು
ಸಾದಲಿ ಕೆರೆಯಲ್ಲಿ ತಗ್ಗು ಪ್ರದೇಶದಲ್ಲಿ ಇರುವ ಸ್ವಲ್ಪ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT