ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಕಲ್ಲಂಗಡಿ, ಖರ್ಬೂಜಕ್ಕೆ ಬೇಡಿಕೆ

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಬಿಸಿಲು; ಹೆಚ್ಚಿದ ತಂಪು ಪಾನೀಯ ಅಂಗಡಿಗಳು
Last Updated 17 ಮಾರ್ಚ್ 2021, 15:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಬಿಸಿಲಿನ ಝಳ ಹೆಚ್ಚಳವಾಗುತ್ತಿದೆ. ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಜನರು ಉದರ ತಂಪಾಗಿಸುವ ಹಣ್ಣುಗಳು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಶಿವರಾತ್ರಿ ಮುಗಿದ ನಂತರ ಹೆಚ್ಚಿನ ಪ್ರಮಾಣದ ಉಷ್ಣಾಂಶ ಕಂಡುಬರುತ್ತದೆ. ವಾರದಿಂದ ಈಚೆಗೆ ಉಷ್ಣಾಂಶ ಏರುಗತಿಯಲ್ಲೇ ಸಾಗುತ್ತಿದೆ. ಈ ಪರಿಣಾಮ, ನಗರದ ಎಲ್ಲೆಡೆ ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರು, ಲಿಂಬು ಸೋಡಾ ಶರಬತ್ತು, ತಂಪು ಪಾನೀಯಗಳ ಅಂಗಡಿಗಳು ತಲೆ ಎತ್ತಿವೆ. ವಹಿವಾಟು ಚುರುಕು ಪಡೆದಿದೆ.

ಬಿ.ಬಿ.ರಸ್ತೆ, ಬಜಾರ್‌ ರಸ್ತೆ, ಎಂ.ಜಿ ರಸ್ತೆ, ಶಿಡ್ಲಘಟ್ಟ ರಸ್ತೆ, ಬಾಗೇಪಲ್ಲಿ ರಸ್ತೆ ಜತೆಗೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ –7ರಲ್ಲಿ ಕೂಡ ಅಲ್ಲಲ್ಲಿ ಕಲ್ಲಂಗಡಿ, ಕರಬೂಜ ಹಣ್ಣುಗಳು ಮಾರಾಟದ ತಾತ್ಕಾಲಿಕ ಮಳಿಗೆಗಳು ಆರಂಭವಾಗಿವೆ.

ಅದರಲ್ಲಿಯೂ ಕಲ್ಲಂಗಡಿ ಹಣ್ಣಿನ ವ್ಯಾಪಾರ ಚುರುಕು ಪಡೆದಿದೆ. ದಿನಕ್ಕೆ ಸರಾಸರಿ ಎರಡು ಟನ್‌ಗೂ ಹೆಚ್ಚು ಕಲ್ಲಂಗಡಿ ಹಣ್ಣುಗಳು ಮಾರಾಟವಾಗುತ್ತಿವೆ. ಬೇಸಿಗೆಯಲ್ಲಿ ಈ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಜತೆಗೆ ನಗರದಲ್ಲಿ ಎಲ್ಲೆಂದರಲ್ಲಿ ತಳ್ಳುಗಾಡಿಗಳ ಮೇಲೆ ಹಣ್ಣಿನ ವ್ಯಾಪಾರ ಹೆಚ್ಚಳವಾಗಿದೆ. ತಮಿಳುನಾಡು, ಆಂಧ್ರಪ್ರದೇಶದಿಂದಲೇ ವ್ಯಾಪಾರಿಗಳು ಕಲ್ಲಂಗಡಿ ತರಿಸುತ್ತಿದ್ದಾರೆ.

ಎಳನೀರಿಗೂ ಬೇಡಿಕೆ ಬಂದಿದ್ದು ಬಿಬಿ ರಸ್ತೆಯಲ್ಲಿ ಕೆಲವು ಕಡೆಗಳಲ್ಲಿ ಎಳನೀರಿನ ರಾಶಿ ಕಂಡು ಬರುತ್ತದೆ. ಜ್ಯೂಸ್ ಅಂಗಡಿಗಳ ಮುಂದೆ ಜನರು ಮಧ್ಯಾಹ್ನವಾದರೆ ಕಿಕ್ಕಿರಿದಿರುವರು.

ಬಿಸಿಲು ಹೆಚ್ಚಾಗಿದ್ದೆ ಜಿಲ್ಲಾ ಕ್ರೀಡಾಂಗಣದಲ್ಲಿ ನಸುಕಿನಲ್ಲಿ ವಿಹಾರ ಮಾಡುವವರ ಕೂಡ ಸಂಖ್ಯೆ ಹೆಚ್ಚಳವಾಗುತ್ತಿದೆ. ಚಳಿಯಿಂದಾಗಿ ಒಂದು ತಿಂಗಳ ಹಿಂದಿನವರೆಗೆ ಕುಂಠಿತಗೊಂಡಿದ್ದ ವಾಯುವಿಹಾರಿಗಳ ಸಂಖ್ಯೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಏರುಮುಖವಾಗಿದೆ.

‘ತಮಿಳುನಾಡಿನಿಂದ ಕಲ್ಲಂಗಡಿ ಹಣ್ಣು ತರಿಸುತ್ತಿದ್ದೇವೆ. ಇವು ನಾಮಧಾರಿ ತಳಿಯ ಹಣ್ಣುಗಳು. ಅಲ್ಲಿನ ಹಣ್ಣು ನಮ್ಮ ನೆಲೆದ ಹಣ್ಣಿಗಿಂತ ಚುರಿಯಾಗಿರುತ್ತದೆ. ಸರಾಸರಿ ನಿತ್ಯ 300 ಕೆ.ಜಿ ಮಾರಾಟವಾಗುತ್ತಿದೆ. ಐದಾರು ವ್ಯಾಪಾರಿಗಳು ಸೇರಿ ಒಂದು ಲೋಡ್ ಲಾರಿಯಲ್ಲಿ ಕಲ್ಲಂಗಡಿ ತರಿಸುತ್ತೇವೆ. ₹ 10ಕ್ಕೆ ಒಂದು ಪ್ಲೇಟ್ ಕಲ್ಲಂಗಡಿ ಬೆಲೆ ನಿಗದಿ ಮಾಡಿದ್ದೇವೆ‘ ಎಂದು ಶಿಡ್ಲಘಟ್ಟ ರಸ್ತೆಯಲ್ಲಿ ಕಲ್ಲಂಗಡಿ ಮಾರಾಟ ಮಾಡುವ ವ್ಯಾಪಾರಿಯೊಬ್ಬರು ತಿಳಿಸಿದರು.

ಜನ ನಿಬಿಡ ಪ್ರದೇಶಗಳಲ್ಲಿ ಕಬ್ಬಿನ ಹಾಲಿನ ಅಂಗಡಿಗಳೂ ಹೆಚ್ಚಾಗಿವೆ. ಇದು ನಗರದ ಒಳಗಷ್ಟೇ ಅಲ್ಲ ನಗರದ ಹೊರವಲಯಗಳ ರಸ್ತೆಯ ಬದಿಯಲ್ಲಿಯೂ ಕಬ್ಬಿನ ಹಾಲು ಮಾರಾಟ ಜೋರಾಗಿದೆ.

ಖರ್ಬೂಜಕ್ಕೂ ಡಿಮ್ಯಾಂಡ್: ಕಲ್ಲಂಗಡಿಯ ನಂತರ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿರುವ ಹಣ್ಣು ಎಂದರೆ ಅದು ಖರ್ಬೂಜ. ಕಲ್ಲಂಗಡಿ ಹಣ್ಣಿನ ವಹಿವಾಟಿಗೆ ಪೈಪೋಟಿ ಎನ್ನುವಂತೆ ಖರ್ಬೂಜ ಮಾರಾಟ ನಡೆಯುತ್ತಿದೆ. ಕಲ್ಲಂಗಡಿ ಒಂದು ಕೆ.ಜಿಗೆ ₹ 20ರಿಂದ 25 ಇದ್ದರೆ ಖರ್ಬೂಜ ₹ 30 ಇದೆ. ನಗರದ ರಸ್ತೆ ಬದಿಗಳಲ್ಲಿ ರಾಶಿ ರಾಶಿಯಾಗಿ ಈ ಎರಡೂ ಹಣ್ಣುಗಳು ಕಂಡು ಬರುತ್ತವೆ. ತಳ್ಳು ಗಾಡಿಗಳ ವ್ಯಾಪಾರದಲ್ಲಿಯೂ ಈ ಹಣ್ಣುಗಳು ವ್ಯಾಪಾರವೇ ಪ್ರಮುಖವಾಗಿವೆ.

‘ನಗರದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಕೆಳಗಿನ ತೋಟ ಸ್ವಲ್ಪ ಮಟ್ಟಿಗೆ ತಂಪಾಗಿದೆ. ವಾಹನಗಳ ಓಡಾಟ ಹೆಚ್ಚು ಇಲ್ಲದ್ದೂ ಇದಕ್ಕೆ ಕಾರಣ. ಮನೆಯಿಂದ ಕೆಲಗಳಿಗೆ ಮಧ್ಯಾಹ್ನ ಹೊರಟರೆ ಬಿಸಿಲಿನಿಂದ ಬಸವಳಿಯುತ್ತಿದ್ದೇವೆ‘ ಎನ್ನುತ್ತಾರೆ ಕೆಳಗಿನ ತೋಟದ ರವಿಕಿರಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT