ಚಿಂತಾಮಣಿ: ಕೈವಾರವು ರಾಜ್ಯದಲ್ಲಿ ಪ್ರಸಿದ್ಧ ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕೈವಾರ ಹೋಬಳಿ ಕೇಂದ್ರವಾಗಿದ್ದು ತಾಲ್ಲೂಕಿನಲ್ಲಿ ದೊಡ್ಡ ಗ್ರಾಮ ಪಂಚಾಯಿತಿ ಆಗಿದೆ.
ಹೆಚ್ಚಿನ ಜನಸಂಖ್ಯೆ, ವ್ಯಾಪಾರ, ವಹಿವಾಟು ಹಾಗೂ ಪ್ರವಾಸಿ ಕೇಂದ್ರವಾಗಿರುವ ಕೈವಾರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವ ಸುಮಾರು 10-12 ವರ್ಷಗಳಿಂದ ನನೆಗುದಿಗೆ ಬಿದ್ದಿದೆ.
2012ರಲ್ಲಿ ಅಂದಿನ ಶಾಸಕ ಡಾ.ಎಂ.ಸಿ.ಸುಧಾಕರ್ ಮೇಲ್ದರ್ಜೆಗೇರಿಸಲು ಪ್ರಸ್ತಾವ ಸಲ್ಲಿಸಿದ್ದರು. 2013, 2018ರ ಚುನಾವಣೆಯಲ್ಲಿ ಅವರು ಸೋತಿದ್ದರಿಂದ ಪ್ರಸ್ತಾವ ನನೆಗುದಿಗೆ ಬಿದ್ದಿತ್ತು.
ಇತ್ತೀಚೆಗೆ ತಾಲ್ಲೂಕಿನ ವೈಜಕೂರು ಗ್ರಾಮದ ಕಾರ್ಯಕ್ರಮವೊಂದರಲ್ಲಿ ಡಾ.ಎಂ.ಸಿ.ಸುಧಾಕರ್ ಕೈವಾರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಹೀಗಾಗಿ ಮೇಲ್ದರ್ಜೆಗೇರುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.
2011ರ ಜನಗಣತಿ ಪ್ರಕಾರವೇ 6,800 ಜನಸಂಖ್ಯೆ ಇತ್ತು. ಈಗ ಸರಿಸುಮಾರು ಅದರ ದುಪ್ಪಟ್ಟು ಜನಸಂಖ್ಯೆ ಇದೆ. ಜತೆಗೆ ವಿಸ್ತಾರವಾಗಿ ಬೆಳೆದಿದೆ. ಆದರೂ ಕೈವಾರ ಇನ್ನೂ ಗ್ರಾಮ ಪಂಚಾಯಿತಿಯಾಗಿಯೇ ಉಳಿದಿದೆ.
ಈ ಹಿಂದೆ ಪುರಸಭೆಯಾಗಿದ್ದ ಚಿಂತಾಮಣಿ, ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ತಾಲ್ಲೂಕು ಕೇಂದ್ರ ಚಿಂತಾಮಣಿ ವೇಗವಾಗಿ ಬೆಳೆಯುತ್ತಿದೆ. ಚಿಂತಾಮಣಿಯಿಂದ 15 ಕಿ.ಮೀ ದೂರದಲ್ಲಿರುವ ಕೈವಾರವೂ ವೇಗವಾಗಿ ಬೆಳೆಯುತ್ತಿದೆ.
ಪಟ್ಟಣ ಪಂಚಾಯಿತಿಯಾಗಲು ಕನಿಷ್ಠ 11 ಸಾವಿರ ಜನಸಂಖ್ಯೆ ಇರಬೇಕು. ಎಲ್ಲ ಮೂಲಸೌಲಭ್ಯ ಇರಬೇಕು ಎಂಬ ಕಾನೂನಿದೆ. ಸದ್ಯ ಕೈವಾರದ ಜನಸಂಖ್ಯೆ 11 ಸಾವಿರಕ್ಕೂ ಮೀರಿದೆ. ಅಗತ್ಯವಾದರೆ ಪಕ್ಕದ ಮಸ್ತೇನಹಳ್ಳಿ ಗ್ರಮ ಪಂಚಾಯಿತಿಯನ್ನು ಸೇರಿಸಿಕೊಳ್ಳಬಹುದು.
ಕೈವಾರದಲ್ಲಿ ಸರ್ಕಾರಿ ಆಸ್ಪತ್ರೆ, ನಾಡಕಚೇರಿ, ಪೊಲೀಸ್ ಠಾಣೆ, ಅಂಚೆ ಕಚೇರಿ, ಬ್ಯಾಂಕ್, ಪಶುಪಾಲನಾ ಆಸ್ಪತ್ರೆ, ದೂರವಾಣಿ ಕಚೇರಿ, ಶಾಲಾ ಕಾಲೇಜುಗಳು ಇವೆ. ವಾರಕ್ಕೊಮ್ಮೆ ಸಂತೆ ನಡೆಯುತ್ತಿದೆ. ಕೈವಾರ ಹೋಬಳಿಯ ಕೇಂದ್ರವಾಗಿದ್ದ ನಾನಾ ರೀತಿಯ ವ್ಯಾಪಾರ ವಹಿವಾಟು ಕೇಂದ್ರಗಳಿವೆ. ಜನಸಾಮಾನ್ಯರಿಗೆ ಪ್ರತಿನಿತ್ಯ ಬೇಕಾಗುವ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಜನರ ಬದುಕಿಗೆ ಬೇಕಾಗುವ ಎಲ್ಲ ಸೌಲಭ್ಯಗಳು ಕೈವಾರದಲ್ಲಿ ಸಿಗುತ್ತವೆ.
ಯೋಗಿನಾರೇಯಣ ಮಠ, ಅಮರನಾರೇಯಣ ದೇವಸ್ಥಾನ, ಭೀಮಲಿಂಗೇಶ್ವರ ದೇವಸ್ಥಾನ, ನರಸಿಂಹ ಗುಹೆ, ವೈಕುಂಠ ಧಾರ್ಮಿಕ ಕೇಂದ್ರಗಳು ತಪೋವನ, ಕೈವಾರ ಬೆಟ್ಟ ಪ್ರವಾಸಿ ತಾಣಗಳಿವೆ.
ಕೈವಾರ ಪಕ್ಕದ ಮಸ್ತೇನಹಳ್ಳಿ ಬಳಿ ಸುಮಾರು 1,200 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರಾಂಗಣ ತಲೆ ಎತ್ತಲಿದೆ. ನೂರಾರು ಕಂಪನಿಗಳು ಸಾವಿರಾರು ಉದ್ಯೋಗಿಗಳು ಬರಲಿದ್ದಾರೆ. ಕೈಗಾರಿಕಾ ಪ್ರಾಂಗಣದ ಬಹುತೇಕ ಮಂದಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ಕೈವಾರದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾರೆ.
ಕೈವಾರದಲ್ಲಿ ಪ್ರಮುಖವಾಗಿ ಬಸ್ ನಿಲ್ದಾಣ, ಸಾರ್ವಜನಿಕರು ತಂಗಲು ಸಮುದಾಯ ಭವನ, ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ, ಸುಸಜ್ಜಿತ ಶೌಚಾಲಯ, ರಸ್ತೆ ದುರಸ್ತಿ ಅಗಬೇಕಿದೆ. ಮೇಲ್ದರ್ಜೆಗೇರಿಸಿದರೆ ಈ ಎಲ್ಲ ಯೋಜನೆಗಳಿಗೂ ಅನುಕೂಲವಾಗುತ್ತದೆ.
Quote - ಕೈವಾರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಕೈವಾರ ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿಯ ಸಾರ್ವಜನಿಕರು ಸಹಕಾರ ನೀಡಬೇಕು ಮಂಜುನಾಥ್ ಗ್ರಾ.ಪಂ ಸದಸ್ಯ
Quote - ಕೈವಾರದಲ್ಲಿ ನೂತನ ಬಡಾವಣೆ ನಿರ್ಮಾಣವಾಗುತ್ತಿದ್ದು ವಿಶಾಲವಾಗಿ ಬೆಳೆಯುತ್ತಿದೆ. ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿದರೆ ಹೆಚ್ಚಿನ ಸೌಲಭ್ಯ ದೊರೆಯಲಿವೆ ರಮೇಶ್ ಹಿರಿಯ ನಾಗರಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.