ಭಾನುವಾರ, ಏಪ್ರಿಲ್ 5, 2020
19 °C

ಆರೋಗ್ಯದಲ್ಲಿ ಏರುಪೇರು: ಕ್ವಾರೆಂಟೈನ್‌ನಲ್ಲಿದ್ದ ಗೌರಿಬಿದನೂರಿನ ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಮೆಕ್ಕಾ ಯಾತ್ರೆ ಮಾಡಿದ ಕಾರಣಕ್ಕೆ ಗೌರಿಬಿದನೂರಿನಲ್ಲಿ ಮಗನ ಮನೆಯಲ್ಲಿಯೇ ಸಂಪರ್ಕ ತಡೆಗೆ (ಕ್ವಾರಂಟೈನ್) ಒಳಗಾಗಿದ್ದ, ಆಂಧ್ರಪ್ರದೇಶದ ಹಿಂದೂಪುರ ತಾಲ್ಲೂಕಿನ 72 ವರ್ಷದ ಮಹಿಳೆಯೊಬ್ಬರು ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

ಮೃತ ಮಹಿಳೆ ಹಿಂದೂಪುರ ತಾಲ್ಲೂಕಿನ ಚವಳೂರು ಗ್ರಾಮದವರಾಗಿದ್ದು, ವರ್ತಕರಾಗಿರುವ ಅವರ ಮಗ ಗೌರಿಬಿದನೂರಿನಲ್ಲಿ ನೆಲೆಸಿದ್ದಾರೆ.

ಇತ್ತೀಚೆಗಷ್ಟೇ ಮೆಕ್ಕಾ ಯಾತ್ರೆ ಮುಗಿಸಿ ವಾಪಾಸಾಗಿದ್ದ ಮಹಿಳೆ, ಮಾರ್ಚ್ 23 ರಂದು ಮಗನನ್ನು ನೋಡಲು ಬಂದಿದ್ದರು. ಈ ವಿಚಾರ ‌ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿ ಅವರನ್ನು ತಪಾಸಣೆಗೆ ಒಳಪಡಿಸಿ, ಯಾವುದೇ ಸೋಂಕಿನ ಲಕ್ಷಣಗಳು ಕಂಡುಬರದ ಕಾರಣ ಮಗನ ಮನೆಯಲ್ಲಿಯೇ ಸಂಪರ್ಕ ತಡೆಗೆ ಒಳಪಡಿಸಿದ್ದರು.

ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಮಹಿಳೆ ಆರೋಗ್ಯ, ಮಂಗಳವಾರ ಸಂಜೆ ದಿಢೀರ್ ಹದಗೆಟ್ಟ ಕಾರಣಕ್ಕೆ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. 

ಸಂಪರ್ಕ ತಡೆಯಲ್ಲಿದ್ದವರ ಚಿಕಿತ್ಸೆಗೆ ಅಗತ್ಯವಾದ ಪ್ರತ್ಯೇಕ ತುರ್ತು ನಿಗಾ ಘಟಕ ವ್ಯವಸ್ಥೆ ಜಿಲ್ಲಾ ಆಸ್ಪತ್ರೆಯಲ್ಲಿ ಇಲ್ಲದ ಕಾರಣಕ್ಕೆ ಮಹಿಳೆಯನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗ ಸಂಸ್ಥೆಗೆ ಕಳುಹಿಸಲಾಗಿತ್ತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮಹಿಳೆಯ ಸಾವಿನ ನಿಖರ ಕಾರಣವನ್ನು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಹೇಳಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಎಂ.ಯೋಗೇಶ್ ಗೌಡ ತಿಳಿಸಿದರು.
ಇತ್ತೀಚೆಗಷ್ಟೇ ಮೆಕ್ಕಾ ಯಾತ್ರೆಯಿಂದ ಹಿಂದಿಗಿರುಗಿದ ಗೌರಿಬಿದನೂರು ನಗರದ ಇಬ್ಬರು ಮತ್ತು ತೊಂಡೆಬಾವಿಯ ಒಬ್ಬ ಮಹಿಳೆಯಲ್ಲಿ ಕೋವಿಡ್ 19 ಸೋಂಕು ಇರುವುದು ದೃಢಪಟ್ಟ ಬೆನ್ನಲ್ಲೇ, ಸಂಪರ್ಕ ತಡೆಯಲ್ಲಿದ್ದ ಮಹಿಳೆ ಮೃತಪಟ್ಟಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)