ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಝಿಕಾ ವೈರಸ್

Published 2 ನವೆಂಬರ್ 2023, 13:56 IST
Last Updated 2 ನವೆಂಬರ್ 2023, 13:56 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಕೀಟಶಾಸ್ತ್ರಜ್ಞರು ಸೊಳ್ಳೆಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದರು. ಅವುಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ಸಿಕ್ಕ ಸೊಳ್ಳೆಯ ದೇಹದಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ ಎಂಬ ವಿಚಾರವು ತಾಲ್ಲೂಕು ಆರೋಗ್ಯಾಧಿಕಾರಿಗೆ ಅಕ್ಟೋಬರ್ 24ರಂದು ಮಾಹಿತಿ ಸಿಕ್ಕಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಹಾಗೂ ಸಿಬ್ಬಂದಿ ಅಕ್ಟೋಬರ್ 25ರಂದು ತಲಕಾಯಲಬೆಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿಸಿ ಕೆಲವು ಗರ್ಭಿಣಿಯರನ್ನು ಪರೀಕ್ಷಿಸಿ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರಿಸಿದ್ದರು.

ಕಳೆದ ಅಕ್ಟೋಬರ್ 31ರ ಮಂಗಳವಾರ ತಾಲ್ಲೂಕು ಪಂಚಾಯಿತಿಯಲ್ಲಿ ಆಡಳಿತಾಧಿಕಾರಿ ಜಾವೀದಾ ನಸೀಮಾ ಖಾನಂ ನಡೆಸಿದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರು, ತಾಲ್ಲೂಕಿನ ತಲಕಾಯಲಬೆಟ್ಟದ ಬಳಿ ಕೀಟಶಾಸ್ತ್ರಜ್ಞರು ಪರೀಕ್ಷಿಸಿದ ಸೊಳ್ಳೆಯೊಂದರಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ ಎಂಬ ವಿಚಾರ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರನ್ನು ಸಂಪರ್ಕಿಸಿದಾಗ, ತಲಕಾಯಲಬೆಟ್ಟ, ವೆಂಕಟಾಪುರ, ದಿಬ್ಬೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ ಮುಂತಾದೆಡೆ 30 ಗರ್ಭಿಣಿಯರು ಸೇರಿದಂತೆ ನಾಲ್ವರು ಜ್ವರ ಪೀಡಿತ ಗ್ರಾಮಸ್ಥರ ರಕ್ತವನ್ನು ಪರೀಕ್ಷೆಗಾಗಿ ವೈರಾಲಜಿ ಶಾಖೆಗೆ ಕಳುಹಿಸಿದ್ದೇವೆ. ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ವಿವರಿಸಿದರು.

ಡೆಂಗಿ, ಹಳದಿ ಜ್ವರ, ಮೆದುಳು ಜ್ವರ (ಜಪಾನೀಸ್ ಎನ್ಸೆಫಾಲಿಟಿಸ್) ಹಾಗೂ ವೆಸ್ಟ್ ನೈಲ್ ವೈರಸ್ ಹರಡುವ ಈಡಿಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಝಿಕಾ ವೈರಸ್ ವೈರಸ್ ಹರಡುತ್ತದೆ. ತಲೆನೋವು, ಕಣ್ಣು ಕೆಂಪಗಾಗುವುದು, ಜ್ವರ, ಚರ್ಮದ ಮೇಲೆ ಅಲ್ಲಲ್ಲಿ ದದ್ದುಗಳು, ಮೈಕೈ ನೋವು, ಮಾಂಸಖಂಡಗಳ ಸೆಳೆತ, ಕೀಲು ನೋವು ಲಕ್ಷಣಗಳು ಕಂಡು ಬರುತ್ತವೆ.

ಈ ಲಕ್ಷಣಗಳು ಕಂಡು ಬಂದಲ್ಲಿ ಆಸ್ಪತ್ರೆಗೆ ಬಂದು ಸೂಕ್ತ ಚಿಕಿತ್ಸೆ ಪಡೆಯಬೇಕು. ವೈರಸ್ ಹರಡದಂತೆ ಮುಂಜಾಗ್ರತೆ ವಹಿಸುವುದೇ ಇದನ್ನು ತಡೆಯುವ ವಿಧಾನವಾಗಿದೆ ಎಂದರು.

ಕಳೆದ ಅಕ್ಟೋಬರ್ 26ರಿಂದ ಆರಂಭಿಕ ಹಂತದಲ್ಲೇ ಮಾರಕ ವೈರಸ್‌ಗೆ ಕಡಿವಾಣ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆ ತಲಕಾಯಲಬೆಟ್ಟ ಗ್ರಾಮದ 5 ಕಿ.ಮೀ ವ್ಯಾಪ್ತಿಯಲ್ಲಿರುವ 5 ಗ್ರಾಮಗಳಲ್ಲಿ 30 ಗರ್ಭಿಣಿಯರ ರಕ್ತ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಿದೆ. 4 ಮಂದಿ ಜ್ವರಪೀಡಿತರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾಹಿತಿ ನೀಡಿದರು.

ಮಾದರಿ ಪರೀಕ್ಷೆಗಳ ವರದಿ ಬರಲು 15 ದಿನಗಳಾಗಲಿದ್ದು, ವರದಿ ಬಂದ ನಂತರ ಝಿಕಾ ವೈರಸ್‌ ಇದೆಯೋ ಇಲ್ಲವೋ ಎಂಬುದು ಖಚಿತವಾಗಲಿದೆ. ಅಲ್ಲಿಯವರೆಗೂ ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಉತ್ತಮ ಪೋಷಕಾಂಶಯುಕ್ತ ಆಹಾರ ಸೇವನೆಗೆ ಸೂಚನೆ ನೀಡಲಾಗಿದೆ. ಸೊಳ್ಳೆ ಪರದೆ ಬಳಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ರಕ್ತ ಪರೀಕ್ಷೆ: ದಿಬ್ಬೂರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಗರ್ಭಿಣಿಯರು ಮತ್ತು ಜ್ವರ ಕಂಡುಬಂದವರ ರಕ್ತ ಪರೀಕ್ಷೆಯನ್ನು ಅಕ್ಟೋಬರ್ 26ರಿಂದ ನವೆಂಬರ್ 1 ರವರೆಗೂ ನಡೆಸಲಾಗಿದೆ. ತಲಕಾಯಲಬೆಟ್ಟ (8), ಟಿ.ವೆಂಕಟಾಪುರ (2), ವಡ್ಡಹಳ್ಳಿ (1), ದಿಬ್ಬೂರಹಳ್ಳಿ (21), ಬಚ್ಚಹಳ್ಳಿ (2) ಒಟ್ಟು 34 ಮಂದಿಯ ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮ: ಈ ಹಳ್ಳಿಗಳಲ್ಲಿನ ಗರ್ಭಿಣಿಯರಿಗೆ ಶುಕ್ರವಾರದಿಂದ ಸ್ಕ್ಯಾನಿಂಗ್ ಮಾಡಿಸಲಾಗುವುದು. ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ತಂಡ ರಚಿಸಿದ್ದು, ಪ್ರತಿನಿತ್ಯ ಒಂದೊಂದು ತಂಡವೂ ಕನಿಷ್ಠ 50 ಮನೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಿವೆ. ಜ್ವರದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ರಕ್ತವನ್ನು ಪಡೆದು ಪರೀಕ್ಷೆಗೆ ಕಳುಹಿಸುತ್ತೇವೆ. ತೊಟ್ಟಿ, ಬ್ಯಾರೆಲ್, ಡ್ರಮ್ಮುಗಳಲ್ಲಿ ನೀರು ಬದಲಾಯಿಸುವಿಕೆ, ಲಾರ್ವ ತಿನ್ನುವ ಸೊಳ್ಳೆಗಳನ್ನು ಬಿಡುಗಡೆ ಮಾಡುವ ಕ್ರಮಗಳನ್ನು ಕೈಗೊಂಡಿರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಹೇಳಿದರು.

ಝಿಕಾ ವೈರಸ್ ರೋಗ ಲಕ್ಷಣಗಳು: ಕೆಲ ದಿನಗಳ ಹಿಂದೆಯಷ್ಟೇ ಕೇರಳದಲ್ಲಿ ಪತ್ತೆಯಾಗಿದ್ದ ಝಿಕಾ ವೈರಸ್ ಇದೀಗ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ವೈರಸ್‌ ಜ್ವರ, ತಲೆನೋವು, ತುರಿಕೆ, ಕಣ್ಣಿನ ಬಣ್ಣ ಬದಲಾವಣೆ, ಮೈ ಕೈ ನೋವು ಲಕ್ಷಣಗಳನ್ನು ಹೊಂದಿದೆ.

ಶಿಡ್ಲಘಟ್ಟ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಹಾಗೂ ಸಿಬ್ಬಂದಿ ಮನೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಿದರು
ಶಿಡ್ಲಘಟ್ಟ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಹಾಗೂ ಸಿಬ್ಬಂದಿ ಮನೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಿದರು
ರಕ್ತ ಪರೀಕ್ಷೆ ವಿವರ
ರಕ್ತ ಪರೀಕ್ಷೆ ವಿವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT