ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿ ಮುಖಾಂತರ ಜನ ಗುರುತಿಸುತ್ತಿದ್ದಾರೆ

ಅಭ್ಯರ್ಥಿಯೊಂದಿಗೆ ಮುಖಾಮುಖಿ
Last Updated 2 ಮೇ 2019, 16:41 IST
ಅಕ್ಷರ ಗಾತ್ರ

ಕಾರ್ಮಿಕ ನಾಯಕಿ, ಹೋರಾಟಗಾರ್ತಿ, ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಅವರು ಪ್ರಸ್ತುತ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆ ಕಣದಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ರಾಜಕೀಯ ಹೋರಾಟಕ್ಕೆ ಅಣಿಗೊಂಡಿದ್ದಾರೆ.

ಹೋರಾಟವೇ ಬದುಕಾಗಿಸಿಕೊಂಡಿರುವ ಈ ಛಲದಂಕ ಮಹಿಳೆ ಕಾರ್ಮಿಕರು, ರೈತರು, ಮಹಿಳೆಯರ ಪರ ಹೋರಾಟಗಳಲ್ಲಿ ಲಾಠಿ ಏಟು ತಿಂದು, ಜೈಲು ಕಂಡು, ಕ್ರಿಮಿನಲ್ ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡರೂ ಅಂಜದೆ ಹೋರಾಟದ ಕಿಚ್ಚು ಎದೆಗೂಡಿನಲ್ಲಿ ಕಾಪಿಟ್ಟುಕೊಂಡವರು.

ಲಿಂಗ ತಾರತಮ್ಯದ ವಿರುದ್ಧ ಕಿಡಿಕಾರುತ್ತಲೇ ಬಂದಿರುವ ವರಲಕ್ಷ್ಮಿ ಅವರು ‘ಸಮಾನತೆ ಕೇಳುವಾಗ ಹೆಣ್ಣು ಎಂಬ ಕಾರಣಕ್ಕೆ ಮೀಸಲಾತಿ ಕೇಳಬಾರದು. ನಮ್ಮ ಪಾಲಿನ ಜವಾಬ್ದಾರಿ ನಿರ್ವಹಿಸಬೇಕು’ ಎಂದು ಪ್ರತಿಪಾದಿಸುತ್ತ ಬಂದವರು. ಚುನಾವಣಾ ಸ್ಪರ್ಧಾ ಕಣದ ಪ್ರಮುಖ ಹುರಿಯಾಳುಗಳಲ್ಲಿ ಒಬ್ಬರಾಗಿರುವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ...

ಪ್ರಜಾವಾಣಿ: ಈ ಕ್ಷೇತ್ರದಲ್ಲಿ ಸಿಪಿಎಂ ಇದೇ ಮೊದಲ ಬಾರಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಬಗ್ಗೆ ಏನು ಹೇಳುತ್ತೀರಿ?

ವರಲಕ್ಷ್ಮಿ: ಸಿಪಿಎಂ ಕಾರ್ಯಕರ್ತರು, ನಾಯಕರಲ್ಲಿ ಲಿಂಗಬೇಧವಿಲ್ಲ ಎನ್ನುವುದು ನಮಗೆ ಹೆಮ್ಮೆಯ ವಿಚಾರ. ಒಬ್ಬ ಸಾಧಾರಣ ಕಾರ್ಮಿಕಳಾಗಿದ್ದವಳು ಚಳವಳಿ ಮೂಲಕ ಇಲ್ಲಿಯವರೆಗೆ ಬಂದಿರುವೆ. ಈ ಎತ್ತರಕ್ಕೆ ಬೆಳೆಯಲು ಪಕ್ಷ ಕೊಟ್ಟ ಉತ್ತೇಜನ ಮುಖ್ಯ ಕಾರಣ. ಜನಸಾಮಾನ್ಯರು, ಹಿಂದುಳಿದವರು, ಮಹಿಳೆಯರನ್ನು ಗುರುತಿಸಿ ಮೇಲೆ ತರುವ ಸಿದ್ಧಾಂತವನ್ನು ಪಕ್ಷ ಒಳಗೊಂಡ ಕಾರಣಕ್ಕಾಗಿ ನಮ್ಮಂತಹವರು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಿದೆ.

ಪ್ರ: ಇತರ ಪಕ್ಷಗಳಿಗಿಂತ ಸಿಪಿಎಂ ಹೇಗೆ ಭಿನ್ನವಾಗಿದೆ?

ವ: ಸಿಪಿಎಂ ಇತರ ಪಕ್ಷಗಳಂತೆ ಚುನಾವಣೆಗಾಗಿ ವಿಚಾರಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ಸಿಪಿಎಂ ಇರುವುದೇ ಜನರ ಸಮಸ್ಯೆಗಳನ್ನು ಪರಿಹರಿಸಲು. ವರ್ಷವೀಡಿ ನಾವು ಹೋರಾಟ ಮಾಡುತ್ತಲೇ ಇರುತ್ತೇವೆ. ಈ ಭಾಗದಲ್ಲಿ ಹೋರಾಟದ ಮೂಲಕ ಸಾಕಷ್ಟು ಜನರಿಗೆ ಭೂಮಿ ಕೊಡಿಸಿದ್ದೇವೆ. ಜಿಲ್ಲೆಯಲ್ಲಿ ಬರಗಾಲಕ್ಕೆ ಶಾಶ್ವತ ಪರಿಹಾರ ಹುಡುಕಲು ಯಾರಾದರೂ ಹೋರಾಟ ಮಾಡಿದ್ದರೆ, ಆ ಪರಿಕಲ್ಪನೆ ಕೊಟ್ಟಿದ್ದು ಸಿಪಿಎಂ. ಆದರೆ ನಾವು ತೀರ್ಮಾನಗಳನ್ನು ಕೈಗೊಳ್ಳುವ ಸ್ಥಾನದಲ್ಲಿ ಇಲ್ಲದೆ ಇರುವುದರಿಂದ ನಮ್ಮ ಪ್ರಯತ್ನಗಳು ಕೈಗೊಂಡಿಲ್ಲ. ಆದರೆ ಅವು ನಿರಂತರವಾಗಿರುತ್ತವೆ.

ಪ್ರ: ಜಾತಿ ಮತ್ತು ಹಣವೇ ಚುನಾವಣೆಯ ಗೆಲುವಿನಲ್ಲಿ ನಿರ್ಣಾಯಕವಾಗುತ್ತಿರುವ ಇವತ್ತು ಸಿದ್ಧಾಂತವನ್ನೇ ನಂಬಿರುವ ನೀವು ಹೇಗೆ ಚುನಾವಣೆ ಎದುರಿಸುತ್ತೀರಿ?

ವ: ಜನಪ್ರತಿನಿಧಿಗಳು ತಮ್ಮ ಕರ್ತವ್ಯ ನಿಭಾಯಿಸದೆ ಹೋಗಿ, ಮತದಾರರ ನಡುವೆ ತನ್ನ ನಂಬಿಕೆ ಕಳೆದುಕೊಂಡಾಗ ಜಾತಿ, ಹಣ ಮತ್ತು ಆಮಿಷಗಳು ಮುನ್ನೆಲೆಗೆ ಬರುತ್ತವೆ. ಜನಪ್ರತಿನಿಧಿಗಳ ಕರ್ತವ್ಯವನ್ನು ನಾವು ಸರಿಯಾಗಿ ನಿಭಾಯಿಸಿದರೆ ಇದನ್ನು ತಡೆಗಟ್ಟಬಹುದು. ನಾವು ಹಣಕ್ಕಿಂತಲೂ ಹೋರಾಟದ ಮೇಲೆ ನಂಬಿಕೆ ಇಟ್ಟಿದ್ದೇವೆ.

ಹೋರಾಟ ಮತ್ತು ಜನರ ಸಮಸ್ಯೆಗಳೇ ನಮಗೆ ಬದುಕಾಗಿರುವುದರಿಂದ, ಅದರ ಆಧಾರದಲ್ಲಿ ನಾವು ಮತ ಕೇಳುತ್ತೇವೆ. ಚಳವಳಿ ಮುಖಾಂತರವೇ ಜನ ನಮ್ಮನ್ನು ಗುರುತಿಸುತ್ತಿದ್ದಾರೆ. ಸಂಸದ ವೀರಪ್ಪ ಮೊಯಿಲಿ ಅವರ ಬಗ್ಗೆ ಈಗಾಗಲೇ ಕ್ಷೇತ್ರದ ಜನರಲ್ಲಿ ಬೇಸರ ಮೂಡಿದೆ. ಹೀಗಾಗಿ ಈ ಸಂದರ್ಭ ನಮಗೆ ಬಹಳ ಲಾಭದಾಯಕ ಎಂದು ಅನಿಸಿದೆ.

ಪ್ರ: ಕಣದಲ್ಲಿರುವವರ ಪೈಕಿ ನಿಮಗೆ ಪ್ರಬಲ ಪ್ರತಿಸ್ಪರ್ಧಿ ಯಾರು?

ವ: ಇವತ್ತು ಈ ಕ್ಷೇತ್ರದಲ್ಲಿ ನಮಗೆ ಬಿಜೆಪಿಯೇ ಪ್ರಮುಖ ಪ್ರತಿಸ್ಪರ್ಧಿ. ಮೊಯಿಲಿ ಅವರಿಗೆ ಅವರ ಪಕ್ಷದಲ್ಲಿಯೇ ವಿರೋಧಗಳು ವ್ಯಕ್ತವಾಗುತ್ತಿವೆ. ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡರೂ ಜೆಡಿಎಸ್‌ನವರಿಗೆ ಮೊಯಿಲಿ ಅವರ ಬಗ್ಗೆ ಸಹಾನುಭೂತಿ ಇಲ್ಲ.

ಪ್ರ: ಬಿಜೆಪಿ ಕೋಮುವಾದಿ ಪಕ್ಷ, ನಾವು ಜಾತ್ಯತೀತರು ಎಂದು ಹೇಳುವವರೇ ಪಂಗಂಡಗಳಾಗಿ ಮತ ಯಾಚನೆಗೆ ಹೋದರೆ ಜಾತ್ಯತೀತರ ಮತಗಳು ಛೀದ್ರವಾಗುವುದಿಲ್ಲವೆ?

ವ: ಈ ಕ್ಷೇತ್ರದಲ್ಲಿ ಬಿಎಸ್ಪಿಗೆ ಅಂತಹ ನೆಲೆ ಇಲ್ಲ ಎನ್ನುವುದು ನಮಗೆ ತಿಳಿದು ಬಂದ ಮಾಹಿತಿ. ಬಿಜೆಪಿ ಮತ ಹಾಕದೇ ಇರುವವರೂ ದೊಡ್ಡ ಪ್ರಮಾಣದಲ್ಲಿದ್ದಾರೆ. ಈ ಬಾರಿ ಒಂದು ಜಾತಿಯ (ಒಕ್ಕಲಿಗರು) ಜನರು ಅವರಿಗೇ ಮತ ಹಾಕುತ್ತಾರೆ ಎಂಬ ಅನಿಸಿಕೆ ಏನಿದೆಯೋ ಅದು ಯಶಸ್ಸು ಕಾಣುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT