ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ನಿತ್ಯ ನೆನೆದರೂ ಸಾಲದು

‘ರಾಷ್ಟ್ರೀಯ ರೈತ ದಿನಾಚರಣೆ’ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಮುನೇಗೌಡ ಅಭಿಮತ
Last Updated 23 ಡಿಸೆಂಬರ್ 2018, 19:49 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸರ್ಕಾರದ ಸೌಲಭ್ಯಗಳು ನಿಜವಾಗಿ ಅರ್ಹ ರೈತರಿಗೆ ಸಿಗಬೇಕು. ನಾವು ಒಂದು ದಿನ ಮಾತ್ರ ರೈತರನ್ನು ನೆನೆದರೆ ಸಾಲದು, ಪ್ರತಿ ದಿನ ಅವರನ್ನು ಸ್ಮರಿಸಬೇಕು. ಆಗ ಮಾತ್ರ ರೈತ ದಿನಾಚರಣೆಗೆ ಅರ್ಥ ಬರುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಮುನೇಗೌಡ ತಿಳಿಸಿದರು.

ನಗರದಲ್ಲಿ ಭಾನುವಾರ ಕೃಷಿ ಇಲಾಖೆ, ಕೃಷಿ ಮತ್ತು ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಹಾಗೂ ಕೃಷಿಕ ಸಮಾಜದ ತಾಲ್ಲೂಕು ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ರೈತ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೃಷಿ ಇಲಾಖೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ರೈತರಿಗೆ ಮನವರಿಕೆ ಮಾಡಿಕೊಡಬೇಕು. ರೈತರು ಸಹ ವಿವಿಧ ಸವಲತ್ತುಗಳನ್ನು ಪಡೆದುಕೊಂಡು ಸಬಲರಾಗಬೇಕು. ಸರ್ಕಾರ ಹೋಬಳಿಗೊಂದು ರೈತ ಸಂಪರ್ಕ ಕೇಂದ್ರ ತೆರೆದು ಅಲ್ಲಿ ರೈತರಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ಪರಿಣಿತ ಅಧಿಕಾರಿಗಳನ್ನು ನೇಮಕ ಮಾಡಬೇಕು’ ಎಂದು ಹೇಳಿದರು.

‘ರೈತರಿಗೆ ಈಗ ನೀಡುತ್ತಿರುವ ಬೆಳೆ ವಿಮೆ ಪರಿಹಾರ ಅವೈಜ್ಞಾನಿಕವಾಗಿದೆ. ರೈತರಿಗೆ ಬೆಳೆ ಬೆಳೆಯಲು ಬೇಕಾದ ನೀರು, ಗೊಬ್ಬರ, ಬಿತ್ತನೆ ಬೀಜಗಳು, ರಾಸಾಯನಿಕಗಳು ವೆಚ್ಚಗಳು, ಕಾರ್ಮಿಕರ ಕೂಲಿ ಇವೆಲ್ಲಾ ಪರಿಗಣಿಸಿ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಂತಾಗಬೇಕು’ ಎಂದರು.

‘ಚಿಕ್ಕಬಳ್ಳಾಪುರಕ್ಕೆ ಎಲ್ಲಿಂದಲೂ ನೀರು ಬರುವುದು ಬೇಡ. ಮೇಕೆದಾಟುವಿನಿಂದ ನೀರು ಬರಬೇಕು. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಬೇರೆ ದೇಶಗಳಲ್ಲಿ ನಮಗಿಂತಲೂ ಮಳೆ ಪ್ರಮಾಣ ಕಡಿಮೆ ಇದ್ದರೂ ನಮಗಿಂತಲೂ ಉತ್ತಮವಾಗಿ ಬೆಳೆ ಬೆಳೆಯುತ್ತಾರೆ. ನಮ್ಮಲ್ಲಿ ಕೃಷಿಯಲ್ಲಿ ಹೆಚ್ಚು ವೈಜ್ಞಾನಿಕತೆ ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್ ಮಾತನಾಡಿ, ‘ಹೆಚ್ಚಿನ ಇಳುವರಿ, ಆದಾಯ ಪಡೆಯುವ ಉತ್ಸುಕತೆಯಲ್ಲಿ ರೈತರು ಭೂಮಿಗೆ ವಿಪರೀತ ಎನಿಸುವಷ್ಟರ ಮಟ್ಟಿಗೆ ರಾಸಾಯನಿಕ ಗೊಬ್ಬರ ಬಳಸುತ್ತಿರುವುದು ಭೂಮಿಯ ಫಲವತ್ತತೆ ಹಾಳು ಮಾಡಿ, ಕೃಷಿಗೆ ಮಾರಕವಾಗುತ್ತಿದೆ. ರೈತರು ಅತಿಯಾದ ಮತ್ತು ಅವೈಜ್ಞಾನಿಕ ರೀತಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆ ನಿಲ್ಲಿಸಬೇಕು. ಮಣ್ಣಿನ ಸಾರ ವರ್ಧಿಸುವಂತಹ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು’ ಎಂದರು.

‘ಕೆಲ ದಶಕಗಳ ಹಿಂದೆ ಕೃಷಿಯನ್ನೇ ಪ್ರಧಾನವಾಗಿ ಅವಲಂಬಿಸಿದ್ದ ದಿನಗಳಲ್ಲಿ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಸಾಂಪ್ರದಾಯಿಕ ಕೃಷಿ ಪದ್ಧತಿ ಅನುಸರಿಸುತ್ತಿದ್ದ ಸಂದರ್ಭದಲ್ಲಿ ಮನುಷ್ಯನ ಆರೋಗ್ಯ ಉತ್ತಮವಾಗಿತ್ತು. ಪರಿಣಾಮ ಹಿಂದಿನ ಜನರು ಜನರು 80 ರಿಂದ 100 ವರ್ಷಗಳು ಬದುಕುತ್ತಿದ್ದರು. ಆದರೆ ಇಂದು ವಿಷಪೂರಿತ ಆಹಾರ ತಿಂದು 60 ವರ್ಷ ಬದುಕಿದರೆ ಹೆಚ್ಚು ಎನ್ನುವಂತಾಗಿದೆ’ ಎಂದು ಹೇಳಿದರು.

ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎನ್. ನಾರಾಯಣಸ್ವಾಮಿ ಮಾತನಾಡಿ, ‘ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರೈತ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ದೇಶ ಅವರಿಗೆ ಗೌರವ ಸಲ್ಲಿಸುತ್ತಿದೆ. ಕೇವಲ ಆರು ತಿಂಗಳು ಮಾತ್ರ ದೇಶದ ಪ್ರಧಾನ ಮಂತ್ರಿಯಾಗಿದ್ದ ಅವರು ತಮ್ಮ ಅಲ್ಪ ಅವಧಿಯಲ್ಲೇ ರೈತರ ಬದುಕನ್ನು ಹಸನುಗೊಳಿಸಲು ಕೈಗೊಂಡ ಕ್ರಮಗಳು ಇಂದಿಗೂ ಚಿರಸ್ಥಾಯಿಯಾಗಿವೆ’ ಎಂದು ತಿಳಿಸಿದರು.

ಸಮಗ್ರ ಕೃಷಿ ಪದ್ದತಿ , ರೇಷ್ಮೆ, ಪಶು ಸಂಗೋಪನೆ, ತೋಟಗಾರಿಕೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರೈತರಿಗೆ ಕಾರ್ಯಕ್ರಮದಲ್ಲಿ 10 ಸಾವಿರ ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ತಿರುಮಳಪ್ಪ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ದೇವರಾಜ್ , ಗಾಯತ್ರಿ, ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ರಾಮಾಂಜಿನಪ್ಪ, ರೈತ ಸಂಘದ ಜಿಲ್ಲಾ ಘಟಕದ ಕಾರ್ಯರ್ದರ್ಶಿ ಮುನಿರಾಜು, ರೈತ ಮುಖಂಡರಾದ ವೆಂಕಟರೆಡ್ಡಿ, ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT