ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲಕ್ಕೆ ವೇತನ ಪಾವತಿಗೆ ಆಗ್ರಹ

ಜಿಲ್ಲಾಡಳಿತ ಭವನದ ಎದುರು ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ
Last Updated 17 ಡಿಸೆಂಬರ್ 2019, 13:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಮ್ಮ ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಪಾಪಣ್ಣ, ‘ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ನೀಡುವ ಜತೆಗೆ ಸಕಾಲದಲ್ಲಿ ವೇತನ ಪಾವತಿಸಬೇಕು. ನೌಕರರಿಗೆ ಪಿಂಚಣಿ, ವೈದ್ಯಕೀಯ ವೆಚ್ಚ, ಭವಿಷ್ಯ ನಿಧಿ ಸೌಲಭ್ಯ ನೀಡಬೇಕು. ಎಂ.ಎಸ್.ಸ್ವಾಮಿ ಅವರ ವರದಿಯ ಶಿಫಾರಸ್ಸಿನ ಅನ್ವಯ ಕಾಯಂಗೊಳಿಸಲು ಬಾಕಿ ಉಳಿದಿರುವ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ಏಕಕಾಲದಲ್ಲಿ ಅನುಮೋದನೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ‘ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್‌ಮೆಂಟ್ ಸಿಸ್ಟಂ’ (ಇಎಫ್‌ಎಂಎಸ್‌) ಮೂಲಕ ವೇತನವನ್ನು 5ನೇ ತಾರೀಖಿನ ಒಳಗೆ ನೆರವಾಗಿ ನೌಕರರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು. ಪಂಚಾಯಿತಿಯ ತೆರಿಗೆ ಸಂಗ್ರಹದಲ್ಲಿ ಶೇ 40 ರಷ್ಟನ್ನು ನೌಕರರ ಸಂಬಳಕ್ಕೆ ಬಳಸಬೇಕು ಎಂಬ ಆದೇಶವಿದೆ. ಆದರೂ ಇದು ಬಳಸುತ್ತಿಲ್ಲ’ ಎಂದು ಆರೋಪಿಸಿದರು.

‘ಗ್ರಾಮ ಪಂಚಾಯಿತಿ ನೌಕರರಿಗೆ ಪಿಂಚಣಿ, ವೈದ್ಯಕೀಯ ವೆಚ್ಚ, ಭವಿಷ್ಯ ನಿಧಿ ಸಿಗುವಂತೆ ಆದೇಶಿಸಬೇಕು. ನಗರಾಭಿವೃದ್ಧಿ ಇಲಾಖೆಯ ಮಾದರಿಯಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ಸೇವಾ ನಿಯಮಾವಳಿ ರಚಿಸುವುದು ಪ್ರಗತಿಯಲ್ಲಿದ್ದು, ಅದನ್ನು ಪೂರ್ಣಗೊಳಿಸಲು ಆದೇಶ ಹೊರಡಿಸಬೇಕು. ಶೇ.40 ರಷ್ಟು ಕರ ವಸೂಲಿ ಹಣವನ್ನು ವೇತನ ಖಾತೆಗೆ ಜಮಾ ಮಾಡಬೇಕು. ಇಎಫ್‍ಎಂಎಸ್ ಸೇರದೆ ಇರುವವರನ್ನು ಇಎಫ್‍ಎಂಎಸ್ ಸೇರಿಸಬೇಕು’ ಎಂದು ಒತ್ತಾಯಿಸಿದರು.

‘ನಿವೃತ್ತ ನೌಕರರಿಗೆ ಉಪಧಾನ ನೀಡಲು ಕೂಡಲೇ ಕ್ರಮಕೈಗೊಳ್ಳಬೇಕು. ಕರ ವಸೂಲಿಗಾರರಿಗೆ 2008 ರಿಂದ ಬಡ್ತಿ ನೀಡಿಲ್ಲ. ಇದರಿಂದ ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸಿ, ನಿವೃತ್ತಿ ಅಂಚಿನಲ್ಲಿದ್ದವರಿಗೆ ಕೂಡಲೇ ಗ್ರೇಡ್ 2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ಹುದ್ದೆಗೆ ಬಡ್ತಿ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಅಂತಿಮ ಪಟ್ಟಿ ಪ್ರಕಟಿಸಬೇಕು. 2011ರ ಜನಗಣತಿ ಆಧಾರದಲ್ಲಿ ಗ್ರೇಡ್‌ –2 ಗ್ರಾಮ ಪಂಚಾಯಿತಿಗಳನ್ನು ಗ್ರೇಡ್ –1ಕ್ಕೆ ಮೇಲ್ದರ್ಜೆಗೇರಿಸಬೇಕು’ ಎಂದು ಹೇಳಿದರು.

‘ಬಿಲ್ ಕಲೆಕ್ಟರ್ ಹುದ್ದೆಯಿಂದ ಗ್ರೇಡ್ -2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಿ ಖಾಲಿಯಾದ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ನೇಮಕಾತಿ ಮಾಡಬೇಕು. ಜಿಲ್ಲೆಯಲ್ಲಿ ಗುರುತಿಸಿದ ಹೊಸ ಗ್ರೇಡ್ –1 51 ಗ್ರಾಮ ಪಂಚಾಯಿತಿಗಳನ್ನು ಅನುಮೋದನೆ ನೀಡಿ ಪ್ರಕಟಿಸಬೇಕು. ಇದರಿಂದ ಗ್ರೇಡ್ 2 ಮತ್ತು ಲೆಕ್ಕ ಸಹಾಯಕರ ಹುದ್ದೆಗಳು ಸೃಜಿಸಬಹುದಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಪದೋನ್ನತಿಗೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಆಂಜನೇಯರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಅಶ್ವತ್ಥಪ್ಪ, ಖಜಾಂಚಿ ಅಶೋಕ್ ಮುಖಂಡರಾದ ಶಂಕರಪ್ಪ, ವೆಂಕಟೇಶ್, ನರಸಿಂಹಮೂರ್ತಿ, ರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT