ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ವರ್ಷದಲ್ಲಿ 17 ಬಾಲ್ಯ ವಿವಾಹ

ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಕರಣ ಪತ್ತೆ
Last Updated 8 ಮೇ 2022, 4:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 17 ಬಾಲ್ಯ ವಿವಾಹಗಳು ಆಗಿವೆ. ಕಡೂರು ತಾಲ್ಲೂಕಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

2021ಏಪ್ರಿಲ್‌ನಿಂದ 2022ಮಾರ್ಚ್‌ವರೆಗೆ ಬಾಲ್ಯವಿವಾಹದ ಒಟ್ಟು 103 ದೂರುಗಳು ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ 96 ಹೆಣ್ಣು ಮಕ್ಕಳು ಹಾಗೂ 7 ಗಂಡು ಮಕ್ಕಳು.

ಒಟ್ಟು 103 ಪ್ರಕರಣಗಳು ಪೈಕಿ 86 ಪ್ರಕರಣಗಳನ್ನು ತಡೆಯಲಾಗಿದೆ. 17 ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕೆಲಸ ನಿಮಿತ್ತ ಅಸ್ಸಾಂ ಇತರೆಡೆಗಳಿಂದ ಜಿಲ್ಲೆಗೆ ಬಂದಿರುವ ವಲಸಿಗರು, ಕಾರ್ಮಿಕ ಕುಟುಂಬಗಳಲ್ಲಿ ಪ್ರಕರಣಗಳು ಹೆಚ್ಚು ಕಂಡುಬಂದಿವೆ.

‘ಕೋವಿಡ್‌ ತಲ್ಲಣದಿಂದ ಸಂಕಷ್ಟಕ್ಕೀಡಾಗಿ ಭವಿಷ್ಯದ ಭದ್ರತೆಯ ಆತಂಕದಿಂದ ಕೆಲ ಕೂಲಿಕಾರ ಪೋಷಕರು ಮಗಳನ್ನು (ವಿವಾಹ ವಯಸ್ಸು ಆಗಿರದಿದ್ದರೂ) ಮದುವೆ ಮಾಡಿ ಜವಾಬ್ದಾರಿ ಪೂರೈಸಬೇಕೆಂಬ ತರಾತುರಿ, ಕೋವಿಡ್‌ ಕಾಲದಲ್ಲಿ ಮಕ್ಕಳಿಗೆ ಆನ್‌ಲೈನ್‌ ತರಗತಿಗಳಿದ್ದವು ಬಿಡುವಿನ ಸಂದರ್ಭದಲ್ಲಿ ಕೆಲವರು ಮೊಬೈಲ್‌ ಫೋನ್‌ ಮೂಲಕ ಪರಿಚಯಿಸಿಕೊಂಡು ದಾರಿ ತಪ್ಪಿಸಿರುವುದು ಮೊದಲಾದವು ಬಾಲ್ಯ ವಿವಾಹಗಳಿಗೆ ಕಾರಣವಾಗಿವೆ’ ಎಂದು ಪಬ್ಲಿಕ್‌ ಪ್ರಾಸಿಕ್ಯುಟರ್‌ ಬಿ.ಎಸ್‌.ಮಮತಾ ಹೇಳುತ್ತಾರೆ.

‘ಕೂಲಿಕಾರರು, ಕಾರ್ಮಿಕರು, ಅವಿದ್ಯಾವಂತರು ಇತರರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅರಿವು ಮೂಡಿಸಬೇಕು. ಕಾರ್ಮಿಕರು ಇರುವ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಿ ಕಾಯ್ದೆ ಬಗ್ಗೆ ಅವರಿಗೆ ಮನದಟ್ಟು ಮಾಡಿಸಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

ಈಗ ಪತ್ತೆಯಾಗಿರುವ ಬಹುತೇಕ ಪ್ರಕರಣಗಳು ಸಾರ್ವಜನಿಕರಿಂದ ಚೈಲ್ಡ್‌ ಲೈನ್ ಸಹಾಯವಾಣಿಗೆ ಮಾಹಿತಿ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್‌ ಗೊತ್ತಾಗಿರುವವು.

ಶಾಲೆಗಳ ಮುಖ್ಯಶಿಕ್ಷಕರು, ಗ್ರಾಮ ಲೆಕ್ಕಿಗರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಆರೋಗ್ಯ ನಿರೀಕ್ಷಕರು, ವೈದ್ಯಾಧಿಕಾರಿಗಳು ಮೊದಲಾದವರು ಬಾಲ್ಯವಿವಾಹ ನಿಷೇಧಾಧಿಕಾರಿಗಳ ಪಟ್ಟಿಯಲ್ಲಿದ್ದಾರೆ. ಪ್ರಕರಣಗಳ ಪತ್ತೆ ನಿಟ್ಟಿನಲ್ಲಿ ಪಾತ್ರ ಕಡಿಮೆ ಇದೆ.

‘ಕೆಲವರು ಶಾಲೆ, ಮನೆ ಬಿಟ್ಟು ಜೋಡಿಯಾಗಿ ಬಂದಿರುತ್ತಾರೆ, ಕಟ್ಟಡ, ಇತರ ಕೂಲಿ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ವಯಸ್ಸಿನ ಪುರಾವೆ ಇರಲ್ಲ. ಪುರಾವೆ ಕೊರತೆಯಿಂದಾಗಿ ಕೆಲವು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರಕರಣಗಳ ತಡೆಗೆ ಆದ್ಯ ಗಮನ’

ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳ ತಡೆಗೆ ಆದ್ಯ ಗಮನ ಹರಿಸಲಾಗಿದೆ. ಬಾಲ್ಯವಿವಾಹ ನಿಷೇಧಾಧಿಕಾರಿಗಳ ಪಟ್ಟಿಯಲ್ಲಿರುವ ಎಲ್ಲರೂ ಇನ್ನಷ್ಟು ನಿಗಾ ವಹಿಸಿದರೆ ಪರಿಣಾಮಕಾರಿಯಾಗಿ ಕ್ರಮವಹಿಸಿ ಪ್ರಕರಣಗಳನ್ನು ಶೂನ್ಯಕ್ಕೆ ತರಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ರಂಗನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT