ಬುಧವಾರ, ಸೆಪ್ಟೆಂಬರ್ 18, 2019
25 °C

‘ಅಂಗವಿಕಲರ ಅನುದಾನ; ಜಿಲ್ಲೆಯಲ್ಲಿ ಶೇ 20 ಮಾತ್ರ ಬಳಕೆ’

Published:
Updated:
Prajavani

ಚಿಕ್ಕಮಗಳೂರು: ‘ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳು, ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗಾಗಿ ಲಭ್ಯವಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ. ಕಳೆದ ಎರಡು ವರ್ಷಗಳಲ್ಲಿ ಶೇ 20 ಮಾತ್ರ ಬಳಕೆಯಾಗಿದೆ’ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ವಿ.ಎಸ್‌.ಬಸವರಾಜು ಇಲ್ಲಿ ಶನಿವಾರ ತಿಳಿಸಿದರು.

‘ಅಂಗವಿಕಲರ ಹಕ್ಕುಗಳ ಕಾಯ್ದೆ–2016 ಪ್ರಕಾರ ಸ್ಥಳೀಯ ಸಂಸ್ಥೆಗಳು, ವಿವಿಧ ಇಲಾಖೆಗಳ ಅನುದಾನದಲ್ಲಿ ಶೇ 5 ಅಂಗವಿಕಲರಿಗೆ ವಿನಿಯೋಗಿಸಬೇಕು. ಜಿಲ್ಲೆಯಲ್ಲಿ ಶೇ 20 ರಷ್ಟು ಬಳಕೆಯಾಗಿದ್ದು, ಉಳಿಕೆ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘33 ಇಲಾಖೆಗಳು, ಸ್ಥಳೀಯ ಸಂಸ್ಥೆಗಳಿಂದ ಪ್ರತಿವರ್ಷ ಜಿಲ್ಲೆಗೆ ಸುಮಾರು ₹ 12 ಕೋಟಿ ಲಭ್ಯವಾಗುತ್ತದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಸಿ ಐದಾರು ವರ್ಷಗಳಲ್ಲಿ ಜಿಲ್ಲೆಯ ಅಂಗವಿಕಲರಿಗೆ ಅಗತ್ಯ ಸವಲತ್ತು ಕಲ್ಪಿಸಲು ಸಾಧ್ಯವಿದೆ. ಅಧಿಕಾರಿಗಳು, ಸಿಬ್ಬಂದಿ ಈ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿ ಕಾರ್ಯನಿರ್ವಹಿಸಬೇಕು. ತೋಟಗಾರಿಕೆ ಇಲಾಖೆಯೊಂದರಲ್ಲೇ ಸುಮಾರು ಒಂದು ಕೋಟಿ ಅನುದಾನ ಲಭ್ಯವಾಗುತ್ತದೆ’ ಎಂದರು.

‘ವಯಸ್ಸು ಆಧರಿಸಿ ವ್ಯವಸ್ಥೆ ಕಲ್ಪಿಸುವ ಅಗತ್ಯ ಇದೆ. ಹಗಲು ಯೋಗಕ್ಷೇಮ ಕೇಂದ್ರ ಆರಂಭಿಸಿ ಮಕ್ಕಳಿಗೆ ತರಬೇತಿ ನೀಡುವುದು ಮೊದಲಾದ ಕೆಲಸಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಗಮನಹರಿಸಬೇಕು. ಪ್ರಾಥಮಿಕ ಹಂತದಲ್ಲೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

‘ನಗರದಲ್ಲಿ ಜಿಲ್ಲಾ ಶೀಘ್ರ ಪತ್ತೆ ಮತ್ತು ಪುನರ್ವಸತಿ ಕೇಂದ್ರ (ಡಿಇಐಸಿ) ಕಾರ್ಯನಿರ್ವಹಿಸುತ್ತಿದೆ. ಆದರೆ, ಜಿಲ್ಲೆಯಲ್ಲಿ ಇಂಥ ಕೇಂದ್ರವೊಂದು ಇದೆ ಎಂಬ ಬಗ್ಗೆ ಬಹಳಷ್ಟು ಮಂದಿಗೆ ಮಾಹಿತಿ ಇಲ್ಲ. ಜಿಲ್ಲಾ ಆರೋಗ್ಯಧಿಕಾರಿ ಈ ಕೇಂದ್ರದ ಮುಖ್ಯಸ್ಥರಾಗಿರುತ್ತಾರೆ. ಇಲ್ಲಿ ‌ತಜ್ಞ ಚಿಕಿತ್ಸಕರು ಇರುತ್ತಾರೆ. ಎರಡು ವರ್ಷಗಳಿಂದ ಸುಮಾರು 2,500 ಮಂದಿ ಈ ಕೇಂದ್ರದ ಪ್ರಯೋಜನ ಪಡೆದಿದ್ದಾರೆ’ ಎಂದು ಹೇಳಿದರು.

‘ ಜಿಲ್ಲೆಯಲ್ಲಿ 6 ತಜ್ಞ ಚಿಕಿತ್ಸಕರು ಇದ್ದಾರೆ. ಬಿಐಆರ್‌ಟಿ, ಸಿಡಿಪಿಒಗಳಿಗೆ ತರಬೇತಿ ನೀಡುವಂತೆ ಸೂಚಿಸಿದ್ದೇನೆ. ಆರಂಭಿಕ ಹಂತದಲ್ಲೇ ದೋಷ ಗುರುತಿಸುವುದರಿಂದ ಪರಿಹಾರ ನಿಟ್ಟಿನಲ್ಲಿ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ 2011ರ ಗಣತಿ ಪ್ರಕಾರ 22 ಸಾವಿರ ಅಂಗವಿಕಲರು ಇದ್ದಾರೆ’ ಎಂದರು.

‘ಯುನಿಕ್‌ ಡಿಸೆಬಿಲಿಟಿ ಐಡೆಂಟಿ ಸೆಂಟರ್‌ (ಯುಡಿಐಡಿ) ತಂತ್ರಾಶದಲ್ಲಿ ಆಧಾರ್‌ ಸಂಖ್ಯೆ ಸಹಿತ ಅಂಗವಿಕಲರ ದತ್ತಾಂಶ ಅಳವಡಿಸಲಾಗುತ್ತಿದೆ. ಪ್ರಮಾಣಪತ್ರದ ನೀಡಿ ವೈದ್ಯರ ಹೆಸರೂ ಅದರಲ್ಲಿ ದಾಖಲಾಗಿರುತ್ತದೆ. ಹಾಸನ ಜಿಲ್ಲೆಯಲ್ಲಿ ಸುಳ್ಳು ಮಾಹಿತಿ ಒದಗಿಸಿ ಅಂಗವಿಕಲರ ಕೋಟಾದಡಿ ಉದ್ಯೋಗ ಗಿಟ್ಟಿಸಿದ್ದ 54 ಮಂದಿಗೆ ಶಾಸ್ತಿ ಆಗಿದೆ’ ಎಂದು ಪ್ರತಿಕ್ರಿಯಿಸಿದರು.

ಅಧಿನಿಯಮದ ಆಯುಕ್ತ ಪದ್ಮನಾಭ, ಅಂಗವಿಕಲ ಮತ್ತು ಹಿರಿಯನಾಗರಿಕರ ಇಲಾಖೆ ಅಧಿಕಾರಿ ಶಿವಪ್ರಕಾಶ್‌ ಇದ್ದರು.

ವಾಹನಕ್ಕೆ ಅನುದಾನ ಬಳಸದಂತೆ ಸೂಚನೆ

ಅಂಗವಿಕಲರಿಗೆ ವಾಹನ ಖರೀದಿಗೆ ಅನುದಾನ ಬಳಸದಂತೆ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬಸವರಾಜ್‌ ತಿಳಿಸಿದರು.

ಶಾಸಕರು, ಸಂಸದರ ಅನುದಾನದಲ್ಲಿ ವಾಹನ ನೀಡಲು ಅವಕಾಶ ಇದೆ. ಅದನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸುವಂತೆ ತಿಳಿಸಿದ್ದೇನೆ ಎಂದರು.

ಹಾಸ್ಟೆಲ್‌ಗಳಲ್ಲಿ ಅಂಗವಿಕಲರಿಗೆ ಶೇ 10 ಮೀಸಲು ಕಲ್ಪಿಸಬೇಕು. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದೇನೆ ಎಂದರು.

Post Comments (+)