ಬುಧವಾರ, ಅಕ್ಟೋಬರ್ 16, 2019
28 °C

ರಸ್ತೆ ಅಪಘಾತ: ವಿದ್ಯಾರ್ಥಿ ಸಾವು, ಮತ್ತೊಬ್ಬನಿಗೆ ಗಾಯ

Published:
Updated:
Prajavani

ಕೊಪ್ಪ: ಇಲ್ಲಿನ ಎನ್.ಕೆ. ರಸ್ತೆ ಸಮೀಪದ ಸೂರ್ಯಾಸ್ತಮಾನ ವೀಕ್ಷಣಾ ಗೋಪುರ ಬಳಿ ಬೈಕ್‌ ಮತ್ತು ಗೂಡ್ಸ್‌ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪಿಯು ವಿದ್ಯಾರ್ಥಿ ಭಾನುವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಚಾಲಕ ಎಚ್.ಕೆ. ಹಂಸ ಅವರ ಪುತ್ರ ಎಚ್.ಕೆ. ಹಫೀಸ್ (17) ಮೃತರು. ಬೆಳಿಗ್ಗೆ ನಮಾಜ್ ಮುಗಿಸಿ ಹಫೀಸ್‌ ಮತ್ತು ಆತನ ಸಂಬಂಧ ಅನೀಶ್‌ ಅವರು ಬೈಕ್‌ನಲ್ಲಿ ನಾರ್ವೆ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ತರಕಾರಿ ತುಂಬಿಕೊಂಡು ಬರುತ್ತಿದ್ದ ಗೂಡ್ಸ್‌ ವಾಹನಕ್ಕೆ ಡಿಕ್ಕಿಯಾಗಿದೆ.

ಮುಂಜಾನೆ ವಿಪರೀತ ಮಂಜು ಕವಿದಿದ್ದರಿಂದ ಎದುರು ಬದುರಾದ ವಾಹನ ಸವಾರರಿಗೆ ಪರಸ್ಪರರು ಗೋಚರಿಸದಿರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಚಲಾಯಿಸುತ್ತಿದ್ದ ಅನೀಸ್‌ಗೆ ಗಂಭೀರ ಗಾಯಗಳಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಫೀಜ್ ಪಟ್ಟಣದ ಸಂತ ನಾರ್ಬರ್ಟ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು, ಈತ ಫ್ರೌಢಶಾಲೆ ಹಂತದಲ್ಲಿ ಗುಂಡು ಎಸೆತ, ಚಕ್ರ ಎಸೆತದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಉತ್ತಮ ಕ್ರೀಡಾಪಟುವಾಗಿದ್ದ. ಈತನಿಗೆ ತಂದೆ, ತಾಯಿ, ಸಹೋದರ, ಸಹೋದರಿ ಇದ್ದಾರೆ. ಕಾರ್ಯ ನಿಮಿತ್ತ ದುಬೈಗೆ ತೆರಳಿದ್ದ ಹಂಸ ಅವರಿಗೆ ವಿಷಯ ತಿಳಿದ ತಕ್ಷಣ ವಿದೇಶದಿಂದ ಬಂದಿದ್ದಾರೆ.

Post Comments (+)