ಶನಿವಾರ, ಜನವರಿ 18, 2020
18 °C
ಮರಕ್ಕೆ ಕಾರು ಡಿಕ್ಕಿ: ಒಬ್ಬನಿಗೆ ಗಂಭೀರ ಗಾಯ

ಕಾಲೇಜು ವಿದ್ಯಾರ್ಥಿಗಳಿಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನ ಮುದ್ರಮನೆ ಗ್ರಾಮದ ಬಳಿ ಗುರುವಾರ ಸಂಜೆ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬನಿಗೆ ಗಂಭೀರವಾಗಿ ಗಾಯವಾಗಿದೆ.

ಮೂಡಿಗೆರೆ ಪಟ್ಟಣದ ನಳಿನಿ ಎಂಬುವವರ ಪುತ್ರ ಆದರ್ಶ (17) ಹಾಗೂ ಪ್ರದೀಪ ಪಲ್ಲವಿ ದಂಪತಿಯ ಪುತ್ರ ಧ್ಯಾನ್ ಗೌಡ (17) ಮೃತ ವಿದ್ಯಾರ್ಥಿಗಳಾಗಿದ್ದು, ಮುತ್ತಿಗೆಪುರ ಗ್ರಾಮದ ಜಯಕರ್ ಎಂಬುವವರ ಪುತ್ರ ಹರ್ಷಿತ (17) ಗಾಯಗೊಂಡ ವಿದ್ಯಾರ್ಥಿ.

ಮುದ್ರೆಮನೆ ಗ್ರಾಮದಲ್ಲಿರುವ ಹರೀಶ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ಈ ಮೂವರು ಗುರುವಾರ ಸಂಜೆಯ ವೇಳೆಗೆ ಮೂಡಿಗೆರೆ ಪಟ್ಟಣದಿಂದ ಕಾಲೇಜಿನತ್ತ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ನಿಯಂತ್ರಣ ಕಳೆದುಕೊಂಡು ಕಾರು  ಬದಿಯ ಮರಕ್ಕೆ ರಸ್ತೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿಯೇ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ತಕ್ಷಣವೇ ಸ್ಥಳೀಯರು ಗಾಯಗೊಂಡ ಹರ್ಷಿತ್ ಹಾಗೂ ಮೃತ ವಿದ್ಯಾರ್ಥಿಗಳ ದೇಹವನ್ನು ಹೊರ ತೆಗೆದು, ಮಹಾತ್ಮಗಾಂಧಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಹರ್ಷಿತನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂಜಿಎಂ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತವಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಸ್ಥಳಕ್ಕೆ ಡಿವೈಎಸ್‌ಪಿ ಬಸಪ್ಪಅಂಗಡಿ, ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಸಾವಿರಾರು ಜನರು ಆಸ್ಪತ್ರೆ ಆವರಣದಲ್ಲಿ ಜಮಾಯಿಸಿ ವಿದ್ಯಾರ್ಥಿಗಳ ಸಾವಿಗೆ ಮರುಗಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು