ಚಿಕ್ಕಮಗಳೂರು: ಈಚೆಗೆ ಕಾಂಗ್ರೆಸ್ ಸೇರಿರುವ ಎಚ್.ಡಿ.ತಮ್ಮಯ್ಯಗೆ ಟಿಕೆಟ್ ನೀಡಬಾರದು ಎಂದು ಹಲವು ಮುಖಂಡರು ಧ್ವನಿ ಎತ್ತಿ ಆಕ್ರೋಶ ವ್ಯಕ್ತಪಡಿಸಿದ ಮತ್ತು ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದ ಪ್ರಸಂಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ನಡೆಯಿತು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಮಹಡಿಮನೆ ಸತೀಶ್, ಬಿ.ಎಚ್.ಹರೀಶ್, ಎ.ಎನ್.ಮಹೇಶ್, ಡಾ.ಡಿ.ಎಲ್.ವಿಜಯಕುಮಾರ್, ಮುಖಂಡರಾದ ಎಂ.ಎಲ್.ಮೂರ್ತಿ, ಸಿ.ಎನ್.ಅಕ್ಮಲ್ ಅವರು, ‘ತಮ್ಮಯ್ಯಗೆ ಟಿಕೆಟ್ ನೀಡಬಾರದು, ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಆರು ಮಂದಿಯಲ್ಲಿ ಒಬ್ಬರನ್ನು ವರಿಷ್ಠರು ಪರಿಗಣಿಸಬೇಕು’ ಎಂದು ಆಗ್ರಹಿಸಿದರು.
ಸಭೆ ಕೊನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಅವರು, ‘ಯಾರಿಗೇ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡಬೇಕು’ ಎಂದಾಗ ಕೆಲವರು ಮಧ್ಯಪ್ರವೇಶಿಸಿ ವಾಗ್ವಾದ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲವರು ಮುಖಂಡರನ್ನು ತಳ್ಳಿ ಕೈಕೈ ಮಿಲಾಯಿಸಿ ಗಲಾಟೆ ನಡೆಸಿದರು. ಇಡೀ ಸಭಾಂಗಣದಲ್ಲಿ ಗೊಂದಲದ ವಾತವಾರಣ ನಿರ್ಮಾಣವಾಗಿತ್ತು. ಜಿ.ಬಿ.ಪವನ್ ಎಂಬಾತಗೆ ಪೆಟ್ಟಾಗಿದೆ. ಪೊಲೀಸರು ಮತ್ತು ಮುಖಂಡರು ಕಾರ್ಯಕರ್ತರ ಜಗಳ ಬಿಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.