ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಂಪುರ: ಅಧಿಕ ಇಳುವರಿ, ಉತ್ತಮ ಧಾರಣೆ, ಬೆಳೆಗಾರರ ಕೈಹಿಡಿದ ಈರುಳ್ಳಿ ಬೆಳೆ

Last Updated 28 ಸೆಪ್ಟೆಂಬರ್ 2020, 8:18 IST
ಅಕ್ಷರ ಗಾತ್ರ

ಅಜ್ಜಂಪುರ: ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ ಈ ಬಾರಿ ರೈತರ ಕೈಹಿಡಿದಿದೆ. ಅಧಿಕ ಇಳುವರಿ ಮತ್ತು ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆಯ ಹೆಚ್ಚಳ ಕೃಷಿಕರ ಸಂತಸವನ್ನು ಇಮ್ಮಡಿಗೊಳಿಸಿದೆ.

ಬೆಲೆ ಹೆಚ್ಚಳದಿಂದ ಹರ್ಷಗೊಂಡಿ ರುವ ರೈತರು ಈರುಳ್ಳಿ ಸುಗ್ಗಿ ಚುರುಕುಗೊಳಿಸಿದ್ದಾರೆ. ಸದ್ಯ ರೈತರು, ಕೂಲಿಯಾಳುಗಳು ಕೃಷಿ ಜಮೀನುಗಳಲ್ಲಿ ಬೀಡುಬಿಟ್ಟಿದ್ದಾರೆ. ಈರುಳ್ಳಿ ಹಸನುಗೊ ಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

‘ಪ್ರತಿ ಎಕರೆ ಈರುಳ್ಳಿ ಬೆಳೆಯಲು ಬೇಸಾಯ, ಬಿತ್ತನೆ ಬೀಜ, ಗೊಬ್ಬರ, ಕಳೆ ತೆಗೆಸುವಿಕೆಗೆ ₹ 20,000 ವೆಚ್ಚವಾದರೆ, ಈರುಳ್ಳಿ ಕೀಳುವುದು, ಹೊಲದಿಂದ ಕಣಕ್ಕೆ ಹಾಕುವುದು, ತೊಂಡೆಯಿಂದ ಈರುಳ್ಳಿ ಬೇರ್ಪಡೆಸುವಿಕೆ, ಗಾತ್ರಕ್ಕೆ ಅನುಗುಣವಾಗಿ ವಿಭಾಗಿಸುವಿಕೆ, ಚೀಲಕ್ಕೆ ತುಂಬುವಿಕೆ, ಮಾರುಕಟ್ಟೆಗೆ ಕೊಂಡೊಯ್ಯವ ವಾಹನ ಬಾಡಿಗೆಗೆ ₹ 25,000 ತಗುಲಿದೆ. ಒಟ್ಟಾರೆ, ಪ್ರತೀ ಕೆಜಿ ಈರುಳ್ಳಿ ಬೆಳೆಯಲು ₹ 12-14 ವೆಚ್ಚವಾಗಿದೆ. ಈಗಿನ ಧಾರಣೆ ಸಾಕಷ್ಟು ಲಾಭ ತಂದುಕೊಟ್ಟಿಲ್ಲದಿದ್ದರೂ, ನಷ್ಟವಿಲ್ಲ ಎಂಬುದು ಸಮಾಧಾನ ತರಿಸಿದೆ’ ಎನ್ನುತ್ತಾರೆ ಈರುಳ್ಳಿ ಬೆಳೆಗಾರ ಗೌರಾಪುರ ಪ್ರಶಾಂತ್.

‘ಪ್ರತಿ ಎಕರೆಯಲ್ಲಿ 50-70 ಕ್ವಿಂಟಲ್ ಈರುಳ್ಳಿ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹ 20-25 ಧಾರಣೆಯಿದೆ. ಇದರಿಂದ ಖರ್ಚಿಗಿಂತ ಆದಾಯ ಹೆಚ್ಚಳ ಆದಂತಾಗಿದೆ. ಈರುಳ್ಳಿ ಆದಾಯ ತಂದುಕೊಟ್ಟಿದೆ’ ಎಂದು ಹೆಬ್ಬೂರಿನ ರೈತ ಪ್ರಸನ್ನ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕೃಷಿ ಕಾರ್ಮಿಕರ ಕೊರತೆ: ಪ್ರತೀ ವರ್ಷ ಈರುಳ್ಳಿ ಸುಗ್ಗಿಗಾಗಿ ತಾಲ್ಲೂಕಿಗೆ ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ಹೊರಜಿಲ್ಲೆಯ ಐದು ಸಾವಿರಕ್ಕೂ ಅಧಿಕ ಕೃಷಿ ಕಾರ್ಮಿಕರು ಬರುತ್ತಿದ್ದರು. ಈ ಬಾರಿ ಕೋವಿಡ್-19 ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯ ಕೃಷಿ ಕಾರ್ಮಿಕರೂ ಬಂದಿಲ್ಲ. ಇದು ಕಾರ್ಮಿಕರ ಅಭಾವ ಸೃಷ್ಟಿಸಿದೆ.

ಕೂಲಿ ಹೆಚ್ಚಳ: ಕೃಷಿ ಕಾರ್ಮಿಕರ ಕೊರತೆ ‘ಕೂಲಿ’ ಹಣದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ. ಜಮೀನಿನಲ್ಲಿ ಕೆಲಸ ಮಾಡುವ ಪುರುಷ ಆಳಿಗೆ ₹ 500-600, ಪ್ರತೀ ಚೀಲ ಈರುಳ್ಳಿಯನ್ನು ತೊಂಡೆಯಿಂದ ಬೇರ್ಪಡಿಸುವ ಮಹಿಳೆಯರಿಗೆ ₹ 80-100 ಕೂಲಿ ನಿಗದಿಯಾಗಿದೆ. ಈ ಹೆಚ್ಚಳ ಬೆಳೆಗಾರರ ಖರ್ಚು ಹೆಚ್ಚಿಸಿದೆ.

ಕಾಡುವ ಮಳೆ: ಮೋಡ ಕವಿದ ವಾತಾವರಣ, ಆಗಾಗ ಬೀಳುವ ಮಳೆ ರೈತರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಹೊಲದಿಂದ ಈರುಳ್ಳಿ ಹೊರತರಲು, ಈರುಳ್ಳಿ ಹಸನುಗೊಳಿಸಲು ಮಳೆ ಅಡ್ಡಿಯಾಗುತ್ತಿದೆ. ಮಳೆ ಬಿಡುವು ಕೊಟ್ಟರೆ ಸಾಕಪ್ಪ ಎನ್ನುತ್ತಿದ್ದಾರೆ ಈರುಳ್ಳಿ ಬೆಳೆಗಾರರು.

ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಏರುತ್ತಿದೆ. ಇದು ಈರುಳ್ಳಿ ಬೆಳೆದು ಆದಾಯ ಪಡೆಯಬೇಕು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ವರದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT