ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಲ್ದೂರು: ‌ಮೂಗು ಮುಚ್ಚಿ ಓಡಾಟ; ಸೊಳ್ಳೆಕಾಟ

Published 6 ಜೂನ್ 2024, 6:05 IST
Last Updated 6 ಜೂನ್ 2024, 6:05 IST
ಅಕ್ಷರ ಗಾತ್ರ

ಆಲ್ದೂರು: ‌ಪಟ್ಟಣದ ಸಂತೆ ಮೈದಾನ ವಾರ್ಡಿನಲ್ಲಿ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಕೋಳಿ ಮಾಂಸದ ಮಳಿಗೆಗಳು ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದ್ದು, ಸ್ಥಳೀಯ ಪಂಚಾಯಿತಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

16 ವರ್ಷಗಳ ಹಿಂದೆ ₹15 ಲಕ್ಷ ವೆಚ್ಚದಲ್ಲಿ ನಿರ್ಮಿತವಾದ ಕೋಳಿ ಮಾಂಸದ ಮಳಿಗೆಗಳು ಗ್ರಾಮಸ್ಥರಿಗೆ ಮತ್ತು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಳಿಗೆಗಳ ಪಕ್ಕದಲ್ಲೇ ಇರುವ ರಸ್ತೆ ಮೂಲಕವೇ ರೋಸ್ ಬಡ್ಸ್ ಶಾಲೆ ವಿದ್ಯಾರ್ಥಿಗಳು ಸಾಗಬೇಕು. ವಾರ್ಡಿನಲ್ಲಿರುವ ಶನೇಶ್ವರ ಸ್ವಾಮಿ ಬಯಲು, ಅಭಯ ಹಸ್ತ ಆಂಜನೇಯಸ್ವಾಮಿ ದೇವಸ್ಥಾನ,  ನಾರಾಯಣಗುರು ಸಭಾಭವನ, ಸರ್ಕಾರಿ ಪದವಿ ಪೂರ್ವ ಕಾಲೇಜಿಗೂ ಇದೇ ಮಾರ್ಗದಲ್ಲಿ  ತೆರಳಬೇಕು.

ಸ್ವಚ್ಛತೆ ಇಲ್ಲದ ಮಳಿಗೆಗಳಿಂದ ಬೀರುವ ದುರ್ವಾಸನೆಗೆ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಇಷ್ಟೆಲ್ಲಾ ತೊಂದರೆಗಳ ನಡುವೆ ಕೋಳಿ ಮಾಂಸದ ಅಂಗಡಿ ಮಳಿಗೆಗಳ ಅವಶ್ಯಕತೆ ಇಲ್ಲ. ಬೇರಡೆ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಒಗ್ಗೂಡಿ ಪ್ರತಿಭಟನೆಯನ್ನೂ ನಡೆಸಿದ್ದರು. ಆದರೂ, ಪ್ರಯೋಜನ ಆಗಿಲ್ಲ.

ಎಂದಿನಂತೆ ಕೋಳಿ ಮಾಂಸದ ತ್ಯಾಜ್ಯಗಳನ್ನು ಎಗ್ಗಿಲ್ಲದೆ ಮಳಿಗೆಗಳ ಸುತ್ತಲೂ ಹಾಕಲಾಗುತ್ತಿದೆ. ಸಾಂಕ್ರಾಮಿಕ ಕಾಯಿಲೆಗಳು ಹರಡುವ ಮುನ್ನ ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು. ಆರೋಗ್ಯದ ದೃಷ್ಟಿಯಿಂದ ಮಳಿಗೆಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರಾದ ಜೀವನ್, ನಾಗರಾಜ್, ಎ.ಆರ್.ಕೃಪಾಕ್ಷ, ಮುಸ್ತಫಾ ಒತ್ತಾಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳ ಹೆಚ್ಚಳವಾಗಿ ಡೆಂಗಿ ಪ್ರಕರಣಗಳು ಅಧಿಕವಾಗಿದ್ದು, ಪಂಚಾಯಿತಿ ಸಿಬ್ಬಂದಿ ಸ್ವಚ್ಛತೆ ವಿಚಾರದಲ್ಲಿ ಗಮನಹರಿಸಿಲ್ಲ. ಇನ್ನೊಂದೆಡೆ ಮಳಿಗೆಗಳ ಬಳಿ ಬೀದಿ ನಾಯಿಗಳ ಹಾವಳಿ ಕೂಡ ಹೆಚ್ಚಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಸುಪ್ರೀತ್ ಅರೇನೂರು ಆಗ್ರಹಿಸಿದರು.

ಸ್ವಚ್ಛತೆ ಇಲ್ಲದ ಕೋಳಿ ಜಾಲರಿಗಳು

ಸ್ವಚ್ಛತೆ ಇಲ್ಲದ ಕೋಳಿ ಜಾಲರಿಗಳು

ಅವಕಾಶ ಇದ್ದರೆ ಸ್ಥಳಾಂತರ

ಕಳೆದ ಬಾರಿ ಆಲ್ದೂರು ಪಂಚಾಯಿತಿಗೆ ಭೇಟಿ ಕೊಟ್ಟಾಗ ಕೋಳಿ ತ್ಯಾಜ್ಯಗಳ ಸಂಸ್ಕರಣೆ ಸರಿಯಾದ ನಿರ್ವಹಣೆ ಇಲ್ಲದೆ ರಸ್ತೆ ಬದಿಯಲ್ಲಿ ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಗೋಪಾಲಕೃಷ್ಣ ‘‍ಪ್ರಜಾವಾಣಿ’ಗೆ ತಿಳಿಸಿದರು.

ಸ್ವಚ್ಛತೆ ಕಾಪಾಡದ ಕೋಳಿ ಅಂಗಡಿ ಮಳಿಗೆಗಳ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡುವಂತೆ ಸೂಚಿಸಲಾಗಿತ್ತು. ಮಳಿಗೆಗಳನ್ನು ಬೇರೆಡೆಗೆ ಸೂಕ್ತ ಜಾಗ ಇದ್ದರೆಸ್ಥಳಾಂತರಿಸಲು ಕ್ರಮ ವಹಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT