ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಯಲ್ಲಿ ಭಕ್ತರ ಕಲರವ: ದತ್ತಪಾದುಕೆ ದರ್ಶನ

Last Updated 18 ಡಿಸೆಂಬರ್ 2021, 5:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ಶುಕ್ರವಾರ ಜರುಗಿದ ಅನಸೂಯಾ ದೇವಿ ಪೂಜಾ ಕಾರ್ಯದಲ್ಲಿ ನಾಡಿನ ವಿವಿಧೆಡೆ ಮಹಿಳೆಯರು ಪಾಲ್ಗೊಂಡಿದ್ದರು. ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ ಮಾಡಿ ಪುನೀತಭಾವ ಮೆರೆದರು.

ಭಕ್ತೆಯರು ಬೆಳಿಗ್ಗೆ ನಗರದಲ್ಲಿ ಸಂಕೀರ್ತನಾ ಯಾತ್ರೆ ಮುಗಿಸಿ ವಾಹನಗಳಲ್ಲಿ ಗಿರಿಗೆ ತೆರಳಿದರು. ಗಿರಿಯಲ್ಲಿ ಸಾಲಾಗಿ ಗುಹೆಯೊಳಗೆ ತೆರಳಿ ದರ್ಶನ ಮಾಡಿ ಭಕ್ತಿ ಸಮರ್ಪಿಸಿದರು.

ಗಿರಿಯಲ್ಲಿ ಸಭಾಮಂಟಪದಲ್ಲಿ ಅನಸೂಯಾ ದೇವಿ, ಅತ್ರಿ ಮಹರ್ಷಿ, ಶ್ರೀಗುರುದತ್ತಾತ್ರೇಯರ ಮೂರ್ತಿಗಳಿಗೆ ವಿವಿಧ ಪೂಜೆಗಳು ನೆರವೇರಿದವು. ಗಣಪತಿ ಹೋಮ, ದುರ್ಗಾ ಪೂಜೆ ಕೈಂಕರ್ಯಗಳು ಜರುಗಿದವು. ಅರ್ಚಕ ಕೇಶವಮೂರ್ತಿ ಅವರು ಕೈಂಕರ್ಯಗಳನ್ನು ನೆರವೇರಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಚಿಕ್ಕಮಗಳೂರಿನ ಶಾರದಾ ಆಶ್ರಮದ ಶುಭಾರಥ ಪರ್ಣ ಮಾತಾಜಿ ಮಾತನಾಡಿ, ಅನಸೂಯಾ ದೇವಿ ಅವರು ತಪಸ್ಸು ಮಾಡಿದ್ದು ಜಗತ್ತಿನ ಒಳಿತಿಗಾಗಿ. ಒಳಿತು ಮಾಡುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ದೇವರು ಎಂದರೆ ಒಳ್ಳೆಯ ಗುಣಗಳು ಎಂದರ್ಥ. ಸೇವಾ ಮನೋಭಾವ ಇರಬೇಕು. ಸ್ವಾರ್ಥ ಇರಬಾರದು ಎಂದರು.

ವಿಶ್ವ ಹಿಂದೂ ಪರಿಷತ್‌ನ ಉಪಾಧ್ಯಕ್ಷೆ ವಿಜಯಲಕ್ಷ್ಮಿ ದೇಶಮಾನೆ ಮಾತನಾಡಿ, ಪ್ರಾರ್ಥನೆಯಿಂದ ಅನೇಕ ಲಾಭಗಳು ಇವೆ. ಭಗವಂತನ ಆರಾಧನೆಯು ನೆಮ್ಮದಿಯ ಬದುಕಿಗೆ ದಾರಿ ತೋರಿಸುತ್ತದೆ ಎಂದು ಹೇಳಿದರು.

‘ಕೋವಿಡ್‌, ಓಮೈಕ್ರಾನ್‌ ತಲ್ಲಣದ ನಡುವೆಯೂ ಅನಸೂಯಾ ಜಯಂತಿ ಸಾಂಗೋಪಾಂಗವಾಗಿ ನೆರವೇರಿದೆ. ಕೋವಿಡ್‌, ಓಮೈಕ್ರಾನ್‌ ದೂರ ಮಾಡು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ’ ಎಂದು ಪಲ್ಲವಿ ರವಿ ಪ್ರತಿಕ್ರಿಯಿಸಿದರು.

ಬಂದೋಬಸ್ತ್‌: ನಗರ ಮತ್ತು ಗಿರಿಯಲ್ಲಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ, ಎಎಸ್ಪಿ ಎನ್‌.ಎಸ್‌. ಶ್ರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT