ಶನಿವಾರ, ಜನವರಿ 18, 2020
21 °C
ಕಾಫಿನಾಡಿನಲ್ಲಿ ದತ್ತ ಜಯಂತ್ಯುತ್ಸವ; ಕೇಸರಿ ಕಲರವ

ಅನಸೂಯಾ ಜಯಂತಿ ಸಡಗರ

 ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಂಗಳವಾರ ಅನಸೂಯಾ ಜಯಂತಿ, ಸಂಕೀರ್ತನಾ ಮೆರವಣಿಗೆಯೊಂದಿಗೆ ದತ್ತ ಜಯಂತ್ಯುತ್ಸವ ಮೊದಲ್ಗೊಂಡಿದೆ.

ವಿಶ್ವ ಹಿಂದು ಪರಿಷತ್‌ ಮತ್ತು ಬಜರಂಗ ದಳ ನೇತೃತ್ವದಲ್ಲಿ ಅನಸೂಯಾ ಜಯಂತಿ, ಸಂಕೀರ್ತನಾ ಯಾತ್ರೆ ನೇರವೇರಿತು. ನಗರದ ಬೋಳರಾಮೇಶ್ವರ ದೇಗುಲ ಆವರಣದಲ್ಲಿ ದತ್ತಭಕ್ತರು, ಮಹಿಳೆಯರು ಜಮಾಯಿಸಿದ್ದರು. ಅನಸೂಯಾ ಜಯಂತಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಬೆಳಿಗ್ಗೆ 10.30ರ ಹೊತ್ತಿಗೆ ಯಾತ್ರೆ ಶುರುವಾಯಿತು. ವೀರಗಾಸೆ ಮಹಿಳಾ ತಂಡದ ನೃತ್ಯ ಸೊಬಗು ಮೆರವಣಿಗೆಗೆ ಕಳೆ ನೀಡಿತು. ಚಿಕ್ಕಮಗಳೂರು ಅಕ್ಕಪಕ್ಕದ ಜಿಲ್ಲೆಗಳ ಮಹಿಳೆಯರು ದತ್ತ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಯಾತ್ರೆಯು ಐಜಿ ರಸ್ತೆ, ರತ್ನಗಿರಿ ರಸ್ತೆ ಮೂಲಕ ಹಾದು ಕಾಮಧೇನುಮಹಾಶಕ್ತಿ ಗಣಪತಿ ದೇಗುಲ ತಲುಪಿತು.

‘ದಿವ್ಯದರ್ಶಿ’ ನಿಗಾ: ಈ ಬಾರಿ ಮೆರವಣಿಗೆ ಮೇಲೆ ದಿವ್ಯದರ್ಶಿ (360 ಡಿಗ್ರಿ ಕಣ್ಗಾವಲು) ಹದ್ದಿನ ಕಣ್ಣು ಇಡಲಾಗಿತ್ತು. ಮೆರವಣಿಗೆಯ ಮುಂದೆ ಈ ಕ್ಯಾಮೆರಾ, ಉಪಕರಣಗಳಿದ್ದ ಇದ್ದ ವಾಹನ ಸಾಗಿತು. ಡ್ರೋಣ್‌ ಕ್ಯಾಮೆರಾ ಕಣ್ಗಾವಲು ಇತ್ತು.

ಜಿಲ್ಲೆಯಲ್ಲಿ ಹೊಸದಾಗಿ ಸಜ್ಜುಗೊಳಿಸಿರುವ ‘ಒಬವ್ವ ಪಡೆ’ (ಮಹಿಳಾ ಪೊಲೀಸ್‌ ತಂಡ) ಪಹರೆ ಇತ್ತು. 23 ಮಂದಿ ಈ ತಂಡದ ಕಾವಲಿನಲ್ಲಿ ಮೆರವಣಿಗೆ ಸಾಗಿತು.

ಆಯಕಟ್ಟಿನ ಸ್ಥಳಗಳು, ವೃತ್ತಗಳು, ರಸ್ತೆಗಳಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ಯಾತ್ರೆ ನಂತರ ಮಹಿಳೆಯರು, ಭಕ್ತರು ವಾಹನಗಳಲ್ಲಿ ಗಿರಿಗೆ ತೆರಳಿದರು. ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಗುಹೆಯೊಳಕ್ಕೆ ಸರತಿ ಸಾಲಿನಲ್ಲಿ ಸಾಗಿ ಪಾದುಕೆ ದರ್ಶನ ಮಾಡಿ, ಪುನೀತಭಾವ ಮೆರೆದರು.

ಗಿರಿಯಲ್ಲಿ ದತ್ತಪೀಠದ ಬಳಿಯ ತಾತ್ಕಾಲಿಕ ಸಭಾಮಂಟಪದಲ್ಲಿ ಅನಸೂಯಾ ದೇವಿ ಪೂಜೆ, ಗಣಪತಿ ಹೋಮ, ದುರ್ಗಾ ಹೋಮ, ಹವನ, ಪೂರ್ಣಾಹುತಿ ಕೈಂಕರ್ಯಗಳು ನೆರವೇರಿದರು. ಮಹಿಳೆಯರು ಕೈಂಕರ್ಯಗಳಲ್ಲಿ ಪಾಲ್ಗೊಂಡರು. ತೀರ್ಥ, ಪ್ರಸಾದಗಳನ್ನು ಸ್ವೀಕರಿಸಿದರು. ಭಕ್ತರಿಗೆ ಪಲಾವ್‌, ಕೇಸರಿಬಾತ್‌ ಪ್ರಸಾದ ವಿತರಿಸಲಾಯಿತು.

ಗಿರಿಶ್ರೇಣಿಯಲ್ಲಿ ಕೊಂಚ ಚಳಿ ಇದ್ದರೂ, ವಾತಾವರಣ ಹಿತಕರವಾಗಿತ್ತು. ಗಿರಿಶ್ರೇಣಿ ಮಾರ್ಗದಲ್ಲಿ ವಾಹನಗಳ ಅಬ್ಬರವೂ ಕಡಿಮೆ ಇತ್ತು.

ದತ್ತಪೀಠ ಆವರಣದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ಐಜಿಪಿ ಅರುಣ್‌ಚಕ್ರವರ್ತಿ, ಎಸ್ಪಿ ಹರೀಶ್‌ ಪಾಂಡೆ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ನಿಗಾ ವಹಿಸಿದ್ದರು.

ಮಾತುಕತೆಗೆ ಮುಖ್ಯಮಂತ್ರಿಗೆ ವಿನಂತಿ: ಸಿ.ಟಿ.ರವಿ

‘ದತ್ತಪೀಠ ವಿಚಾರದಲ್ಲಿ ಈಗ ವಿವಾದ ಇರುವುದು ಹಿಂದೂಗಳಿಗೆ ಮತ್ತು ಶಾಖಾದ್ರಿ ಕುಟುಂಬಕ್ಕೆ. ಹಿಂದೂ ಮುಖಂಡರು ಮತ್ತು ಶಾಖಾದ್ರಿ ಕುಟುಂಬದವರನ್ನು ಕರೆಸಿ ಮಾತುಕತೆ ಮಾಡಬೇಕು ಎಂದು ಮುಖ್ಯಮಂತ್ರಿಗೆ ವಿನಂತಿಸಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ದತ್ತ ಜಯಂತಿ ನಂತರ ಈ ಪ್ರಯತ್ನ ಮಾಡಲಾಗುವುದು. ದತ್ತಪೀಠ ವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಮತ್ತೆ ಹೈಕೋರ್ಟ್‌ಗೆ ಬಂದಿದೆ. ಕೋರ್ಟ್‌ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ, ನ್ಯಾಯ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದಲೂ ಕೋರ್ಟ್‌ಗೆ ಮನವಿ ಮಾಡಲಾಗುವುದು’ ಎಂದು ಉತ್ತರಿಸಿದರು.

‘ಮುಸಲ್ಮಾನರ ದರ್ಗಾ ತಂಟೆಗೆ ಹಿಂದುಗಳು ಹೋಗಬಾರದು. ಹಿಂದೂಗಳ ದತ್ತಪೀಠದ ತಂಟೆ ಮುಸಲ್ಮಾನರು ಬರಬಾರದು. ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಕೋರ್ಟ್‌ ಮಾಡಬೇಕು’ ಎಂದು ಮನವಿ ಮಾಡಿದರು.

‘ದತ್ತಜಯಂತಿ ಮೂರು ದಿನ ಜರುಗುತ್ತದೆ. ಮೊದಲ ದಿನ ಅನಸೂಯಾ ಜಯಂತಿಯೊಂದಿಗೆ ವಿಧ್ಯುಕ್ತ ಚಾಲನೆ ದೊರೆಯುತ್ತದೆ’ ಎಂದರು.

––––––––––

ಶೋಭಾಯಾತ್ರೆ ಇಂದು

11ರಂದು ನಗರದಲ್ಲಿ ಮಧ್ಯಾಹ್ನ 2ರಿಂದ ಸಂಜೆ 6 ಗಂಟೆವರೆಗೆ ಶೋಭಾಯತ್ರೆ ನಡೆಯಲಿದೆ. ರತ್ನಗಿರಿ ರಸ್ತೆಯ ಕಾಮಧೇನು ಮಹಾಶಕ್ತಿ ಗಣಪತಿ ದೇಗುಲದಿಂದ ಬಸವನಹಳ್ಳಿ ಮುಖ್ಯರಸ್ತೆ, ಎಂ.ಜಿ ರಸ್ತೆ ಮೂಲಕ ಆಜಾದ್‌ ವೃತ್ತದವರೆಗೆ ಮಾರ್ಗ ನಿಗದಿಪಡಿಸಲಾಗಿದೆ. ಸಂಜೆ 6 ಗಂಟೆಗೆ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಸಭೆ ನಡೆಯಲಿದೆ.

ಬೆಳಿಗ್ಗೆ 8 ಗಂಟೆಗೆ ಪಡಿ ಸಂಗ್ರಹ ಕೈಂಕರ್ಯ ನಡೆಯಲಿದೆ.

ವಾಹನ ನಿಲುಗಡೆ, ಸಂಚಾರ ನಿರ್ಬಂಧಿಸಿರುವ ಮಾರ್ಗ

* 11ರಂದು ಕಾಮಧೇನು ಗಣಪತಿ ದೇಗುಲದಿಂದ ಜಾಲಿಫ್ರೆಂಡ್ಸ್‌ ವೃತ್ತ, ಜಾಲಿ ಫ್ರೆಂಡ್ಸ್‌ ವೃತ್ತದಿಂದ ಕೆಇಬಿ ಈದ್ಗಾವರೆಗಿನ ರಸ್ತೆ– ಬೆಳಿಗ್ಗೆ 10ರಿಂದ ರಾತ್ರಿ 7.30ರವರೆಗೆ ವಾಹನ ನಿಲುಗಡೆ ನಿಷೇಧ

ಬಸವನಹಳ್ಳಿ ಮುಖ್ಯ ರಸ್ತೆ (ಕೆಇಬಿ ಈದ್ಗಾದಿಂದ ಹನುಮಂತಪ್ಪ ವೃತ್ತದವರೆಗೆ), ಎಂ.ಜಿ ರಸ್ತೆ ಯಿಂದ ಆಜಾದ್‌ ಪಾರ್ಕ್‌ ವರೆಗೆ – ಮಧ್ಯಾಹ್ನ 2ರಿಂದ ರಾತ್ರಿ 7.30ರವರೆಗೆ ವಾಹನ ನಿಲುಗಡೆ ಮತ್ತು ಸಂಚಾರ ನಿಷೇಧ

ಶಾಂತಿ ಸುವ್ಯವಸ್ಥೆ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

12ರಂದು ದತ್ತಪೀಠದಲ್ಲಿ ಪಾದುಕೆ ದರ್ಶನ ಜರುಗಲಿದೆ.

 

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು