ಬುಧವಾರ, ಫೆಬ್ರವರಿ 1, 2023
16 °C
ಬಗರ್ ಹುಕುಂ ಸಾಗುವಳಿದಾರರಿಗೆ ಪತ್ರ ಮತ್ತು 94ಸಿ ಹಕ್ಕುಪತ್ರ ವಿತರಣೆ

70 ಜನರಿಗೆ ಹಕ್ಕುಪತ್ರ: ಬೆಳ್ಳಿಪ್ರಕಾಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು: ‘ಅಭಿವೃದ್ಧಿ ವಿಷಯದಲ್ಲಿ ಶಾಸಕನಾಗಿ ಏನೇನು ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡಿದ್ದೇನೆಂಬ ಆತ್ಮತೃಪ್ತಿ ಇದೆ. ಮುಂದೆಯೂ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಮುಂದೆ ಬರುತ್ತೇನೆ’ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಹೇಳಿದರು.

ಕಡೂರಿನ‌ ಲಕ್ಷ್ಯಾ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆಡಳಿತ ಶುಕ್ರವಾರ ಏರ್ಪಡಿಸಿದ್ದ ಬಗರ್ ಹುಕುಂ ಸಾಗುವಳಿದಾರರಿಗೆ ಪತ್ರ ಮತ್ತು 94ಸಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಭೂಮಿ ಖರೀದಿಸುವ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಕೃಷಿಕರಷ್ಟೆ ಅಲ್ಲದೆ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಕಡೂರು ತಾಲ್ಲೂಕಿನ ಎಂಟು ಗ್ರಾಮಗಳು ಕಂದಾಯ ಗ್ರಾಮಗಳಾಗಿವೆ. 70 ಜನರಿಗೆ ಹಕ್ಕುಪತ್ರ ನೀಡಲಾಗಿದೆ. 22 ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿಸಲು ಪ್ರಾಥಮಿಕ ಘೋಷಣೆ ಮಾಡಲಾಗಿದೆ. ಕಂದಾಯ ಸಚಿವ ಅಶೋಕ್ ಅವರು ರೈತರಿಗೆ ನೀಡಿರುವ ಕೊಡುಗೆ ಅಪಾರವಾದುದು ಎಂದರು.

‘ಬಹಳ ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರು ಹಕ್ಕುಪತ್ರ ಸಿಗದೆ ನಿರಾಶರಾಗಿದ್ದರು. ತಾಲ್ಲೂಕಿನ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ಮತ್ತು 94ಸಿ ಅಡಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಿದ್ದೇವೆ. ಹಲವಾರು ಅಡ್ಡಿಗಳ ನಡುವೆಯೇ ಅರ್ಹ ಅರ್ಜಿದಾರರಿಗೆ, ನಮ್ಮ ಅಧಿಕಾರಿಗಳ ವರದಿಯನ್ವಯವೇ ನೀಡಲಾಗಿದೆ. ಇಷ್ಟೊಂದು ಜನರಿಗೆ ಒಂದೇ ಸಮಯದಲ್ಲಿ ಹಕ್ಕುಪತ್ರ ವಿತರಿಸಿರುವುದು ಕಡೂರಿನ ಮಟ್ಟಿಗೆ ಇತಿಹಾಸ. ಯಾವುದೇ ಜಾತಿ, ಧರ್ಮ, ಪಕ್ಷ ನೋಡದೆ ಎಲ್ಲರನ್ನೂ ಸಮಭಾವದಿಂದ ನೋಡಲಾಗಿದೆ. ಹಕ್ಕುಪತ್ರ ಸಿಗದವರಿಗೆ ಮುಂದಿನ ದಿನಗಳಲ್ಲಿ ಹಕ್ಕುಪತ್ರ ಸಿಗಬಹುದು. ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಮೇ 30ರ ತನಕ ಅವಕಾಶ ನೀಡಲಾಗಿದೆ. ವಿರೋಧಿಗಳ ಟೀಕೆಗಳನ್ನು ಸಹಿಸಿಕೊಂಡು ಅಭಿವೃದ್ಧಿಯತ್ತ ಗಮನ ಹರಿಸಿದ್ದೇನೆ ಎಂದು ಹೇಳಿದರು.

ತಹಶೀಲ್ದಾರ್ ಜೆ ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಹಲವಾರು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡಿದ್ದವರಿಗೆ ಆ ಜಾಗವನ್ನು ಸಕ್ರಮಗೊಳಿಸಲು ಬಗರ್ ಹುಕುಂ ಸಮಿತಿ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಅರ್ಹರಿಗೆ ಅನ್ಯಾಯವಾಗದಂತೆ ಜಾಗ ಮಂಜೂರು ಮಾಡಲಾಗಿದೆ’ ಎಂದರು.

ಬಗರ್ ಹುಕುಂ ಸಮಿತಿ ಸದಸ್ಯರಾದ ಶಶಿಕಲಾ, ಮಂಜುನಾಥ ನಾಯ್ಕ, ಶೆಟ್ಟಿಹಳ್ಳಿ ಸತೀಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರೇವಣ್ಣಯ್ಯ, ಬೀರೂರು ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸೀಮಾ, ಕಾರ್ಮಿಕ ನಿರೀಕ್ಷಕಿ ಶಶಿಕಲಾ, ಇನ್‌ಸ್ಪೆಕ್ಟರ್ ಶಿವಕುಮಾರ್, ಮೌನೇಶ್, ಸತೀಶ್ ಕರಿಯಪ್ಪ, ಕೆ.ಎಂ.ಬೊಮ್ಮಣ್ಣ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.