ಅನಿಲ್ ಮೊಂತೆರೊ
ಕೊಟ್ಟಿಗೆಹಾರ: ಸುಂಕಸಾಲೆ ಸಮೀಪದ ಐತಿಹಾಸಿಕ ತಾಣ ಬಲ್ಲಾಳರಾಯನ ದುರ್ಗ ಹಸಿರು ಹೊದ್ದುಕೊಂಡು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಈ ತಾಣವು ಮೂಡಿಗೆರೆ ತಾಲ್ಲೂಕು ಕೇಂದ್ರದಿಂದ 30ಕಿ.ಮೀ ದೂರದಲ್ಲಿದೆ.
ದುರ್ಗದ ಮೇಲಿನಿಂದ ಕಣ್ಣು ಹಾಯಿಸಿದಷ್ಟು ದೂರದಲ್ಲಿ ಹಸಿರ ಸಿರಿ, ಬೆಟ್ಟಗಳ ನಡುವೆ ತೇಲುವ ಮಂಜು ಎಂಥವರನ್ನೂ ಸೆಳೆಯುತ್ತದೆ. ರಾಣಿ ಝರಿಯಲ್ಲಿ ನಿಂತರೆ ದಕ್ಷಿಣ ಕನ್ನಡ ಜಿಲ್ಲೆಯ ಹಸಿರ ಶೋಲಾರಣ್ಯ ಹಾಗೂ ಕಾಜೂರು, ಕಿಲ್ಲೂರು ಗ್ರಾಮಗಳ ನೋಟ ವರ್ಣನಾತೀತ. ಕೋಟೆ ಈಗ ದುಸ್ಥಿತಿಯಲ್ಲಿದ್ದರೂ ನಿಸರ್ಗದ ಸೌಂದರ್ಯ ಅಸ್ವಾದಿಸಬೇಕಾದರೆ ಪ್ರವಾಸಿಗರು ದುರ್ಗದ ಕೋಟೆಯ ತುದಿಗೆ ಏರಲೇಬೇಕು. ಅಲ್ಲಿಂದ ಪದರದಂತಿರುವ ಬೆಟ್ಟಗಳ ನಡುವೆ ಮಂಜು ಮುಸುಕಿನ ಮೋಡಿ ನೋಡುಗರನ್ನು ಬೆರಗುಗೊಳಿಸುತ್ತದೆ.
ಚಾರಣಕ್ಕೆ ಸೂಕ್ತವಾದ ಬಲ್ಲಾಳರಾಯನ ದುರ್ಗ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿದೆ. ಇಲ್ಲಿಗೆ ಸಾಗಲು ಕೊಟ್ಟಿಗೆಹಾರದಿಂದ ಕಳಸಕ್ಕೆ ಹೋಗುವ ರಸ್ತೆಯಲ್ಲಿ ಸುಂಕಸಾಲೆ ಎಂಬಲ್ಲಿ ಇಳಿದು ಅಲ್ಲಿಂದ ಡಾಂಬರು ರಸ್ತೆಯಲ್ಲಿ ಒಂದು ಕಿ.ಮಿ ಸಾಗಬೇಕು. ಮುಂದೆ ಎಡಭಾಗದಲ್ಲಿ ಬಲ್ಲಾಳರಾಯನ ದುರ್ಗಕ್ಕೆ ಹೋಗುವ ರಸ್ತೆಯಿದೆ.ರಾಣಿ ಝರಿವರೆಗೂ ಆಟೋ ಮತ್ತಿತರ ವಾಹನಗಳ ಸೌಲಭ್ಯವಿದೆ. ಕಿಲ್ಲೂರು, ಕಾಜೂರುಗಳಿಂದಲೂ ಕಾಲು ದಾರಿಗಳಿವೆ.ಆದರೆ, ಅಭಯಾರಣ್ಯವಾದ್ದರಿಂದ ಕೊಟ್ಟಿಗೆಹಾರದ ಮೂಲಕ ಸಾಗುವುದೇ ಒಳಿತು. ರಾಣಿ ಝರಿಯಿಂದ ದುರ್ಗಕ್ಕೆ ಕಾಲು ಸವೆಸಿ ಸಾಗುವ ಪಯಣ ರೋಮಾಂಚನ. ಇಲ್ಲಿಗೆ ಸಾಗಲು ಸುಂಕಸಾಲೆ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖಾ ಸಿಬ್ಬಂದಿ ಅನುಮತಿ ಕಡ್ಡಾಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.