ಮಂಗಳವಾರ, ಅಕ್ಟೋಬರ್ 27, 2020
20 °C
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಆರೋಪ

ರಾಮನ ರಾಜ್ಯದಲ್ಲೇ ಮಹಿಳೆಯರಿಗೆ ರಕ್ಷಣೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: 'ರಾಮ ಹುಟ್ಟಿದ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದ್ದು, ಕೂಡಲೇ ಯೋಗಿ ಆದಿತ್ಯನಾಥ್ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಥರಸ್‌ನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಯುವತಿಯ ನಾಲಿಗೆ ಕತ್ತರಿಸಿ, ಭೀಕರವಾಗಿ ಕೊಲೆ ಮಾಡಲಾಗಿದೆ. ಇದೀಗ ಘಟನೆಯನ್ನು ತಿರುಚುವ ಸಲುವಾಗಿ ಕಾಂಗ್ರೆಸ್ ನಾಯಕರ ಮೇಲೆ ದೌರ್ಜನ್ಯ ನಡೆಸಿರುವುದಲ್ಲದೆ, ಎಸ್‌ಡಿಪಿಐ ಹಾಗೂ ಪಿಎಫ್ಐ ತಲೆಗೆ ಕಟ್ಟಿ ಪ್ರಕರಣದ ಹಾದಿ ತಪ್ಪಿಸಲಾಗುತ್ತಿದೆ. ಈ ಘಟನೆಯ ಅತ್ಯಾಚಾರಿಗಳನ್ನು ರಕ್ಷಣೆ ಮಾಡಲು ಸರ್ಕಾರವೇ ಮುಂದೆ ಬಂದಿದೆ. ಯುವತಿಯ ಶವದ ಮುಖವನ್ನು ಪೋಷಕರಿಗೆ ತೋರಿಸದೇ, ಸಾಕ್ಷಿ ನಾಶಪಡಿಸುವ ಸಲುವಾಗಿ ಮಧ್ಯರಾತ್ರಿ ಸುಟ್ಟುಹಾಕಲಾಗಿದೆ’ ಎಂದು ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ‘ತಾನು ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಕೆ.ಎಂ.ರಸ್ತೆ ವಿಸ್ತರಣೆಗೆ ಶಾಸಕರ ನೇತೃತ್ವದಲ್ಲಿ 5 ಬಾರಿ ಸಭೆ ನಡೆಸಿ ರೂಪುರೇಷೆ ತಯಾರಿಸಲಾಗಿತ್ತು. ಈಗ ಅದು ನನೆಗುದಿಗೆ ಬಿದ್ದಿದೆ. ರಸ್ತೆ ವಿಸ್ತರಣೆಯಾಗದೇ ವಾಹನ ದಟ್ಟಣೆ ಪ್ರತಿದಿನ ಹೆಚ್ಚುತ್ತಿದೆ. ಹ್ಯಾಂಡ್ ಪೋಸ್ಟ್‌ನಿಂದ ಕೊಲ್ಲಿಬೈಲ್ ತಿರುವಿನವರೆಗೆ ಐದೂವರೆ ಕಿ.ಮೀ ರಸ್ತೆ ಹಾಗೂ ಎಂ.ಜಿ. ರಸ್ತೆಯನ್ನು ಹದಿನೈದು ದಿನಗಳಲ್ಲಿ ವಿಸ್ತರಣೆ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ನಿಖಿಲ್ ಚಕ್ರವರ್ತಿ, ಜೆಡಿಎಸ್ ಮಹಿಳಾ ಕ್ಷೇತ್ರ ಸಮಿತಿ ಅಧ್ಯಕ್ಷೆ ಸುಮಾ ನಾಗೇಶ್, ತಾಲ್ಲೂಕು ಅಧ್ಯಕ್ಷೆ ಸುಧಾ ಮಂಜುನಾಥ್, ನಾಗೇಶ್ ಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.