ಶನಿವಾರ, ಏಪ್ರಿಲ್ 17, 2021
32 °C
ಭದ್ರಾ ಮೇಲ್ದಂಡೆ ಯೋಜನೆ; ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಒತ್ತಾಯ

ಜಮೀನಿಗೆ ಏಕರೂಪ ಪರಿಹಾರ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಜ್ಜಂಪುರ: ‘ಭದ್ರಾ ಮೇಲ್ದಂಡೆ ಯೋಜನೆಗಾಗಿ ವಶಕ್ಕೆ ಪಡೆಯುತ್ತಿರುವ ಜಮೀನಿಗೆ ನಿಗದಿಗೊಳಿಸಿರುವ ಪರಿಹಾರದ ಮೊತ್ತ ಹೆಚ್ಚಿಸಬೇಕು’ ಎಂದು ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ತ ರೈತರು ಒತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಭದ್ರಾ ಯೋಜನೆಯಲ್ಲಿ ಜಮೀನು ಕಳೆದುಕೊಳ್ಳುವ ರೈತರ ಸಭೆಯಲ್ಲಿ ಮಾತನಾಡಿದ ರೈತ ರವಿಕುಮಾರ್, ‘ಒಂದೆರಡು ಕಿ.ಮೀ. ಅಂತರದ ಬಾಸೂರು, ಕೆದಿಗೆರೆ, ಚಿಕ್ಕನಲ್ಲೂರಿನಲ್ಲಿ ಎಕರೆಗೆ ₹ 1 ಕೋಟಿ ಪರಿಹಾರ ನಿಗದಿಗೊಳಿಸಿದೆ. ಆದರೆ, ನಮ್ಮ ಭಾಗದ ಚಿಣ್ಣಾಪುರ, ಸೌತನಹಳ್ಳಿಯಲ್ಲಿ ₹ 3 ಲಕ್ಷ, ಕಾಟಿಗನರೆಯಲ್ಲಿ ₹ 6 ಲಕ್ಷ, ಸೊಲ್ಲಾಪುರದಲ್ಲಿ ₹ 11 ಲಕ್ಷ ಪರಿಹಾರ ನಿಗದಿ ಮಾಡಲಾಗಿದೆ. ಇಂತಹ ತಾರತಮ್ಯ ಬಿಟ್ಟು ಸರಿಯಾದ ಪರಿಹಾರ ನೀಡಿ’ ಎಂದು ಆಗ್ರಹಿಸಿದರು.

‘ಹಿಂದೆ ಗೌರಾಪುರದಲ್ಲಿ ನಡೆದ ಸಭೆಯಲ್ಲಿ ಎಕರೆಗೆ ₹ 40 ಲಕ್ಷ ಏಕರೂಪ ದರ ನಿಗದಿಗೊಳಿಸುವಂತೆ ಒತ್ತಾಯಿಸಿದ್ದೆವು. ಸರ್ಕಾರದ ಗಮನಕ್ಕೆ ತರುವುದಾಗಿ ಹಿಂದಿನ ಉಪ ವಿಭಾಗಾಧಿಕಾರಿ ತಿಳಿಸಿದ್ದರು. ಅದು ಕಾರ್ಯರೂಪಗೊಂಡಿಲ್ಲ. ಪರಿಹಾರ ಮೊತ್ತವೂ ಹೆಚ್ಚಳವಾಗಿಲ್ಲ’ ಎಂದು ರೈತ ಜಯಪ್ಪ ದೂರಿದರು.

‘ಜನಪ್ರತಿನಿಧಿಗಳು ಬೆಂಬಲ ನೀಡಬೇಕಿತ್ತು. ಸರ್ಕಾರಕ್ಕೆ ಸಂತ್ರಸ್ತರ ಭವಿಷ್ಯದ ಬಗ್ಗೆ ಬೆಳಕು ಚೆಲ್ಲಿ, ಹೆಚ್ಚುವರಿ ಪರಿಹಾರಕ್ಕೆ ಮುಖ್ಯಮಂತ್ರಿಗೆ ಒತ್ತಡ ಹೇರಬೇಕಿತ್ತು. ಈವರೆಗೆ ಅಂತಹ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ’ ಎಂದು ರೈತ ಮಲ್ಲೇಶ್ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ನಿಗದಿಗೊಳಿಸಿದ ದರ ನಿಕೃಷ್ಟವಾಗಿದೆ. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು, ಹೆಚ್ಚುವರಿ ಹಣ ನಿಗದಿಗೊಳಿಸುವಂತೆ ಕೋರಲಾಗುವುದು’ ಎಂದು ರೈತರು ತಿಳಿಸಿದರು. ಹಲವು ಗ್ರಾಮಗಳ ರೈತರು ಭಾಗವಹಿಸಿದ್ದರು.

ಅಜ್ಜಂಪುರ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ, ಎಇಇ ಸುರೇಶ್, ಇಇ ಪರಮೇಶ್ವರಪ್ಪ, ಭೂ ಸ್ವಾಧೀನ ಅಧಿಕಾರಿಗಳು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು