ಮಂಗಳವಾರ, ನವೆಂಬರ್ 29, 2022
21 °C
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ

‘ಶಾಲೆಗೆ ದಾನಿಗಳ ಸಹಕಾರ ಅಮೂಲ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀರೂರು: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಶೈಕ್ಷಣಿಕ ವಾತಾವರಣ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಭರವಸೆ ನೀಡಿದರು.

ಬೀರೂರಿನ ಕೆಎಲ್‍ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ಶಾಲೆಯ ಅಭಿವೃದ್ಧಿಗೆ ನೆರವು ನೀಡಿದ ದಾನಿಗಳನ್ನು ಗೌರವಿಸಿ ಮಾತನಾಡಿದರು.

ಗ್ರಾಮೀಣ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸಲು ಶಿಕ್ಷಣ ಪ್ರೇಮಿಗಳು ನೀಡುವ ಸಹಕಾರ ಅಮೂಲ್ಯವಾದುದು. ಅಲ್ಲದೆ, ತಾವು ಕಲಿತ ಶಾಲೆಯ ಅಭಿವೃದ್ಧಿಯ ಭಾಗವಾಗಬೇಕು ಎನ್ನುವ ಹಳೆ ವಿದ್ಯಾರ್ಥಿಗಳ ಅಪೇಕ್ಷೆಯೂ ಶ್ಲಾಘನೀಯ. ಇಂತಹವರ ನೆರವಿನಿಂದಲೇ ಶಿಕ್ಷಣದ ಸಾರ್ವತ್ರೀಕರಣ ಸಾಧ್ಯವಾಗಿದೆ ಎನ್ನುವುದನ್ನು ಯಾರೂ ಮರೆಯಬಾರದು. ಶಾಲೆಯಲ್ಲಿ ಬಯಲು ರಂಗಮಂದಿರ ನಿರ್ಮಿಸಲು ತಮ್ಮ ಅನುದಾನದಿಂದ ₹ 5ಲಕ್ಷ ನೀಡುವುದಾಗಿ ಘೋಷಿಸಿದರು.

ಪ್ರೌಢಶಾಲಾ ಕಟ್ಟಡದ ನಿರ್ಮಾತೃ ಕುಟುಂಬದ ಕೆ.ಎಲ್.ನಾಗರಾಜ್, ‘ಇಡೀ ಜಿಲ್ಲೆಯಲ್ಲಿ ತಮ್ಮ ಕುಟುಂಬದ ಗೌರವ ಹೆಚ್ಚಿಸಿದ ಶಾಲೆಯ, ಮಕ್ಕಳ ಸಾಧನೆ ಅಪೂರ್ವವಾದುದು. ಮುಂದೆಯೂ ಎಲ್ಲ ರೀತಿಯ ಸಹಕಾರ ನೀಡುವುದರ ಜತೆಗೆ ಪ್ರತಿವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮೂವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು’ ಎಂದರು.

ಶಾಲಾ ಕೈತೋಟ ನಿರ್ಮಾಣಕ್ಕೆ ಸಹಕರಿಸಿದ ದಾನಿ, ಮಾಲು ಸ್ಲೀಪರ್ಸ್ ವ್ಯವಸ್ಥಾಪಕ ವೆಂಕಟೇಶ್ ಜಿ. ಒಡೆಯರ್ ಗೌರವ ಸ್ವೀಕರಿಸಿ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಸಂಸ್ಕಾರಯುತ ಶಿಕ್ಷಣ ಕಲಿಕೆಗೆ ಆದ್ಯತೆ ನೀಡಬೇಕು. ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚಿನ ಸಾಧನೆಗೆ ಮುನ್ನುಡಿ ಬರೆಯಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು.

ಪುರಸಭಾಧ್ಯಕ್ಷ ಎಂ.ಪಿ.ಸುದರ್ಶನ್, ಶಾಲೆಯ ಶೌಚಾಲಯ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಉತ್ತಮ ಶೈಕ್ಷಣಿಕ ಪರಿಸರವನ್ನು ಹೊಂದಿರುವ ಶಾಲೆಯ ಅಭಿವೃದ್ಧಿಗೆ ಕಾಳಜಿ ವಹಿಸುವುದಾಗಿ ತಿಖಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಾಜಕುಮಾರ್ ಮಾತನಾಡಿದರು. ವಿದ್ಯಾರ್ಥಿಗಳ ವಾರ್ಷಿಕ ಚಟುವಟಿಕೆಯ ವಿವಿಧ ಘಟಕಗಳನ್ನು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮೋಹನ್ ಕುಮಾರ್ ಉದ್ಘಾಟಿಸಿದರು. ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ತಮ್ಮ ತತ್ವಪದಗಳ ಮೂಲಕ ಗಮನಸೆಳೆದರು.

ದಾನಿಗಳಾದ ಸುನೀತಾ ವೆಂಕಟೇಶ್ ಒಡೆಯರ್, ರೋಹಿಣಿ ನಾಗರಾಜ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾರ್ಗದ ಮಧು, ಆರ್.ವಿ.ರವಿ, ಉಪಪ್ರಾಚಾರ್ಯೆ ಪುಷ್ಪಾಂಜಲಿ, ಪುರಸಭಾ ಸದಸ್ಯರಾದ ಜಿ.ಲಕ್ಷ್ಮಣ್, ಬಿ.ಎಂ.ಮಲ್ಲಿಕಾರ್ಜುನ, ಎಸ್‍ಡಿಎಂಸಿ ಸಮಿತಿ ಸದಸ್ಯ ನರಹರಿಕುಮಾರ್, ಬಾವಿಮನೆ ಮಧು, ಕೆ.ಎಚ್.ನಾರಾಯಣ, ಉಪನ್ಯಾಸಕಿ ಜಿ.ವಿ.ಭಾಗ್ಯಮ್ಮ, ಶಿಕ್ಷಕ ಹೊಸೂರು ಪುಟ್ಟರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.