ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮುದ್ರದ ನೆಂಟಸ್ತನ- ಉಪ್ಪಿಗೆ ಬಡತನ’

ಬ್ಯಾಗಡೆಹಳ್ಳಿ: ಮಾಸ್ಟರ್ ಕೇಂದ್ರ ಹತ್ತಿರವಿದ್ದರೂ ಬಗೆಹರಿದಿಲ್ಲ ವಿದ್ಯುತ್ ಸಮಸ್ಯೆ– ಸಮರ್ಪಕ ರಸ್ತೆಗಳಿಲ್ಲ
Last Updated 2 ಮಾರ್ಚ್ 2021, 5:07 IST
ಅಕ್ಷರ ಗಾತ್ರ

ಬೀರೂರು: ಬೀರೂರು ಹೋಬಳಿಯ ಹುಲ್ಲೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಗಡೆಹಳ್ಳಿ ಗ್ರಾಮದ ಸ್ಥಿತಿ ಒಂದು ರೀತಿ ‘ಸಮುದ್ರದ ನೆಂಟಸ್ತನ- ಉಪ್ಪಿಗೆ ಬಡತನ’ ಎನ್ನುವ ರೀತಿಯಲ್ಲಿದೆ. ತಾಲ್ಲೂಕು ಕೇಂದ್ರದಿಂದ ಕೂಗಳತೆ ದೂರದಲ್ಲಿದ್ದರೂ ಸಮರ್ಪಕ ರಸ್ತೆ ಇಲ್ಲ. 220 ಕೆ.ವಿ. ಸ್ವೀಕೃತಿ ಕೇಂದ್ರದ ಪಕ್ಕದಲ್ಲೇ ಇದ್ದರೂ ನಿರಂತರ ವಿದ್ಯುತ್ ಪೂರೈಕೆ ಮರೀಚಿಕೆಯಾಗಿದೆ.

ಸುಮಾರು 700 ಜನಸಂಖ್ಯೆಯ 150 ಮನೆಗಳ ಗ್ರಾಮ ಬ್ಯಾಗಡೆಹಳ್ಳಿ. ಬಹುತೇಕ ಕೃಷಿ ಅವಲಂಬಿಸಿದ ಒಂದೇ ಕೋಮಿಗೆ ಸೇರಿದ ಜನರೇ ಇರುವ ಹಳ್ಳಿ. ಗ್ರಾಮದ ಪಕ್ಕದಲ್ಲಿ ಹಾದುಹೋಗಿರುವ ಹೆದ್ದಾರಿ ಮೂಲಕ ಗ್ರಾಮಕ್ಕೆ ಸಂಪರ್ಕಿಸಲು ಉತ್ತಮ ರಸ್ತೆ ನಿರ್ಮಿಸಿಕೊಡಿ ಎನ್ನುವುದು 80ರ ದಶಕದಿಂದಲೂ ಬೇಡಿಕೆಯಾಗಿಯೇ ಉಳಿದಿದೆ. ಇಲ್ಲಿ ಉತ್ತಮ ಸಂಪರ್ಕ ರಸ್ತೆ ನಿರ್ಮಿಸಿದರೆ ಉತ್ತರ ದಿಕ್ಕಿನಲ್ಲಿ ಹಾದುಹೋಗಿರುವ ಬಿವೈಎಸ್‍ಎಸ್ ರಸ್ತೆಗೆ ತಲುಪುವುದು ಮತ್ತು ಪಂಚಾಯಿತಿ ಕೇಂದ್ರಸ್ಥಾನ ಹುಲ್ಲೇಹಳ್ಳಿಯೊಂದಿಗೆ ಸಂವಹನ ಸುಲಭ ಎನ್ನುವ ಗ್ರಾಮಸ್ಥರ ಕನಸು ನನಸಾಗಿಲ್ಲ.

ಗ್ರಾಮದ ರಸ್ತೆ ಕತೆ ಇಷ್ಟಕ್ಕೇ ಮುಗಿಯುವುದಿಲ್ಲ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿ ಅನುದಾನದಿಂದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಈವರೆಗೆ ಯಾವ ಜನಪ್ರತಿನಿಧಿಗಳೂ ಮನಸ್ಸು ಮಾಡದ ಕಾರಣ, ಗ್ರಾಮದ ಎಲ್ಲ ಬೀದಿಗಳೂ ಮಣ್ಣಿನ ರಸ್ತೆಗಳೇ ಆಗಿ ಉಳಿದಿವೆ. ಮುಖ್ಯರಸ್ತೆ ಪಕ್ಕ ಇರುವ ಬಾಕ್ಸ್ ಚರಂಡಿ ಬಿಟ್ಟರೆ ಇನ್ನುಳಿದ ಯಾವ ಮನೆಗಳ ಕೊಳಚೆ ಹರಿಯಲೂ ಚರಂಡಿ ವ್ಯವಸ್ಥೆ ಇಲ್ಲ. ಮನೆಗಳ ಮುಂದೆಯೋ, ಹಿಂದೆಯೋ ರಸ್ತೆಯ ಬದುವಿನಲ್ಲಿ ತ್ಯಾಜ್ಯ ನೀರು ಹರಿಯುವುದು ಸಾಮಾನ್ಯ.

ಎರಡು ದಶಕಗಳ ಹಿಂದೆ ಗ್ರಾಮದ ಪ್ರವೇಶ ಭಾಗದಲ್ಲಿ 220 ಕೆ.ವಿ. ಸ್ವೀಕೃತಿ ಕೇಂದ್ರವನ್ನು ಕೆಪಿಟಿಸಿಎಲ್ ನಿರ್ಮಿಸಿದೆ. ಆದರೆ, ವಿದ್ಯುತ್ ಸಮಸ್ಯೆ ಬಗೆಹರಿದಿಲ್ಲ ಎನ್ನುವುದು ಗ್ರಾಮಸ್ಥರ ಅಳಲು. ನಿರಂತರವಾಗಿ ವಿದ್ಯುತ್ ದೊರೆಯುವಂತೆ ಮಾಡಿದರೆ ಕೃಷಿ ಅವಲಂಬಿಸಿ ಬದುಕುವ ಗ್ರಾಮೀಣ ಜನರ ಬದುಕು ಹಸನಾಗಬಲ್ಲದು ಎನ್ನುವ ಅರಿವು ಇನ್ನೂ ಯಾರಿಗೂ ಮೂಡಿಲ್ಲ. ಅಕ್ಕಪಕ್ಕದ ಬಂಟಿಗನಹಳ್ಳಿ, ಕಲ್ಲಾಪುರ, ಹುಲ್ಲೇಹಳ್ಳಿ ಮೊದಲಾದ ಗ್ರಾಮಗಳಿಗೆ ನಿರಂತರ ಜ್ಯೋತಿ ವ್ಯವಸ್ಥೆ ಕಲ್ಪಿಸಲು ಇಲ್ಲಿಂದಲೇ ಲೈನ್ ಹಾದುಹೋಗಿದ್ದರೂ ಬ್ಯಾಗಡೆಹಳ್ಳಿ ಮಟ್ಟಿಗೆ ಲೋಡ್‍ಶೆಡ್ಡಿಂಗ್ ಮುಂದು ವರಿದಿದೆ. ಇದು ವಿದ್ಯಾರ್ಥಿಗಳ, ಮನೆ ನಿರ್ವಹಣೆಗಳ ಹಲವು ವಿಷಯದಲ್ಲಿ ತೊಡಕಾಗಿದೆ.

ಗ್ರಾಮದಲ್ಲಿ ನೈರ್ಮಲ್ಯ ಕೂಡಾ ಬಗೆಹರಿಯದ ಸಮಸ್ಯೆ. ಪಂಚಾಯಿತಿ ವತಿಯಿಂದ ಮನೆ ಮಂಜೂರು ಮಾಡಿದ್ದರೂ ಜಾಗ ಗುರುತಿಸದ ಕಾರಣ ವಸತಿ ಸಮಸ್ಯೆ ಬಗೆಹರಿದಿಲ್ಲ. ಇಲ್ಲಿ ಜನರ ನಿರ್ಲಕ್ಷ್ಯವೂ ಸಾಕಷ್ಟಿದೆ ಎನ್ನುವುದು ಹೆಸರು ಹೇಳ ಬಯಸದ ಗ್ರಾಮಸ್ಥರೊಬ್ಬರು ಅಭಿಪ್ರಾಯ.

ಬೀರೂರು ಕಾವಲು ವ್ಯಾಪ್ತಿಗೆ ಒಳ ಪಡುವ ಸರ್ವೆ ನಂ.4ರ ಭೂಮಿಯಲ್ಲಿ ಕೃಷಿ ಮಾಡಿ, ಹಕ್ಕುಪತ್ರ ಬಯಸಿ ನಮೂನೆ 53ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ಸಾಕಷ್ಟು ರೈತರು ವರ್ಷಗಳಿಂದ ಕಾಯುತ್ತಿದ್ದಾರೆ.

‘ಜನರ ಅದೃಷ್ಟವೋ ಏನೋ, ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ಕಡೂರು- ಬೀರೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ ಮೂಲಕ, ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಭದ್ರಾ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಗ್ರಾಮದ ಹೊರಭಾಗದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನೀರಿನ ಬವಣೆ ತಪ್ಪಿಸಿದ್ದರೆ, ಇನ್ನೊಂದು ಬದಿಯಲ್ಲಿ ನಿರ್ಮಿಸಿದ 2 ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ ಹೆಡ್ ಟ್ಯಾಂಕ್ ಅಕ್ಕಪಕ್ಕದ ಗ್ರಾಮಗಳಿಗೂ ನೀರು ಕೊಡುತ್ತಿದೆ.

ಗ್ರಾಮದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾಲ್ಲೂಕು ಕೇಂದ್ರ ಕಡೂರಿನ ಶಾಲೆ- ಕಾಲೇಜುಗಳಲ್ಲಿ ವ್ಯಾಸಂಗಕ್ಕೆ ನಿತ್ಯ ತೆರಳುತ್ತಾರೆ. ಇವರಿಗೆ ಆಟೊ ಅಥವಾ ಗ್ರಾಮಸ್ಥರ ದ್ವಿಚಕ್ರ ವಾಹನಗಳೇ ಆಧಾರ. ರಸ್ತೆಯೂ ಸರಿ ಇಲ್ಲ, ಗ್ರಾಮೀಣ ಸಾರಿಗೆ ಸೌಲಭ್ಯವೂ ಇಲ್ಲದ ಕಾರಣ ಹಲವು ಬಾರಿ 2 ಕಿ.ಮೀ ನಡೆದು ಹೊರವಲಯದ ಹೆದ್ದಾರಿಯಿಂದ ಆಟೊ ಮೂಲಕ ಕಡೂರಿಗೆ ತೆರಳಬೇಕಿದೆ. ರಸ್ತೆ ಸರಿಯಾದರೆ ಬಸ್ ಓಡಾಡಬಹುದೇನೋ ಎನ್ನುವುದು ಹಲವರ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT