ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು ಪುರಸಭೆ ಅತಂತ್ರ: ಬಿಜೆಪಿ ಮೇಲುಗೈ

Last Updated 15 ನವೆಂಬರ್ 2019, 6:27 IST
ಅಕ್ಷರ ಗಾತ್ರ

ಬೀರೂರು (ಚಿಕ್ಕಮಗಳೂರು): ಇಲ್ಲಿನ ಪುರಸಭೆಯ 22 ವಾರ್ಡ್‌ಗಳಿಗೆ ಮಂಗಳವಾರ ನಡೆದ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಬಿಜೆಪಿ 10 ಸ್ಥಾನ ಗಳಿಸಿ ಮೇಲುಗೈ ಸಾಧಿಸಿದರೂ ಪೂರ್ಣ ಬಹುಮತ ದೊರೆತಿಲ್ಲ.

ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸ್ಥಾನ ಗಳಿಸಿವೆ. 2 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿಗಳು ಪುರಸಭೆ ಚುಕ್ಕಾಣಿ ಹಿಡಿಯುವ ಯತ್ನ ನಡೆಸುವವರಿಗೆ ಅನಿವಾರ್ಯವಾಗಿದ್ದು, ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಪೈಪೋಟಿ ಆರಂಭವಾಗಿದೆ.

ಕಡೂರಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಮತಗಳ ಎಣಿಕೆ ಬೆಳಿಗ್ಗೆ 8.30ಕ್ಕೆ ಆರಂಭವಾಗಿ 10.30ರ ವೇಳೆಗೆ ಎಲ್ಲ 22 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿತ್ತು. ವಾರ್ಡ್ ನಂ. 16ರಲ್ಲಿ ಅವಿರೋಧ ಆಯ್ಕೆ ನಡೆದು ಆಯ್ಕೆಯ ಪ್ರಮಾಣ ಪತ್ರವನ್ನು ಕಣದಲ್ಲಿದ್ದ ಏಕೈಕ ಅಭ್ಯರ್ಥಿ ಮೀನಾಕ್ಷಮ್ಮ ಅವರಿಗೆ ನೀಡಲಾಯಿತು.

ತೀವ್ರ ಕುತೂಹಲ ಕೆರಳಿಸಿದ್ದ 2ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮೀವುಲ್ಲಾ ಗೆಲುವು ಪಡೆದರೆ, 8ನೇ ವಾರ್ಡ್‌ನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಕೆ.ಶಶಿಧರ್ ಸತತ ಮೂರನೇ ಬಾಗಿ ಗೆಲುವಿನ ನಗೆ ಬೀರಿದರು. 4ನೇ ವಾರ್ಡ್‌ನ ಕಾಂಗ್ರೆಸ್ ಉಮೇದುವಾರ ಲೋಕೇಶಪ್ಪ ಸತತ ನಾಲ್ಕನೇ ಗೆಲುವು ಪಡೆದರೆ, 1ನೇ ವಾರ್ಡ್‌ನ ಎಂ.ಪಿ.ಸುದರ್ಶನ್ ಮತ್ತು 22ನೇ ವಾರ್ಡ್‍ನ ಎಲೆ ರವಿಕುಮಾರ್ ಮೂರನೇ ಬಾರಿಗೆ ಪುರಸಭೆಗೆ ಆಯ್ಕೆಯಾಗಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳ ಪರ ವಿಜಯೋತ್ಸವ ಆಚರಿಸಲು ಕಾರ್ಯಕರ್ತರು ಬೀರೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾದು ನಿಂತಿದ್ದರು. ಬಿಜೆಪಿಯಿಂದ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳೂ ಪಕ್ಷದ ಮುಖಂಡ ರವಿಕುಮಾರ್ ಅವರ ಮನೆಯಲ್ಲಿ ಶಾಸಕ ಬೆಳ್ಳಿಪ್ರಕಾಶ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಬಳಿಕ ವಾರ್ಡ್‌ಗಳಲ್ಲಿ ಮತದಾರರಿಗೆ ಕೃತಜ್ಞತೆ ಅರ್ಪಿಸಲು ತೆರಳಿದರು. ಕಾಂಗ್ರೆಸ್ ಅಭ್ಯರ್ಥಿಗಳು ಪ್ರಮಾಣಪತ್ರ ದೊರೆತ ಕೂಡಲೇ ತಮ್ಮ ವಾರ್ಡ್‌ಗಳಿಗೆ ತೆರಳಿ ವಿಜಯೋತ್ಸವ ಆಚರಿಸಿದರು.

ಪುರಸಭೆಯ 1ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಎಂ.ಪಿ.ಸುದರ್ಶನ್ 457 ಮತಗಳ ಭಾರೀ ಗೆಲುವು ಸಾಧಿಸಿದರೆ, 22ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಪೂಜಾರಿ ರಮೇಶ್ ಕೇವಲ 2 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಶರಣಾಗಬೇಕಾಯಿತು. ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ ಕಾರ್ಯಕರ್ತರನ್ನು ಸಹವರ್ತಿಗಳು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಫಲಿತಾಂಶದ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಅಂತಹ ಉತ್ಸಾಹ ಕಂಡು ಬರಲಿಲ್ಲ. ಬಿಜೆಪಿ ಶಾಸಕರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದರೆ, ಕಾಂಗ್ರೆಸ್ ಪ್ರತಿಕ್ರಿಯೆ ನೀಡಲೂ ಮುಂದಾಗಲಿಲ್ಲ.

ಬಿಗಿಭದ್ರತೆಯಲ್ಲಿ ಮತ ಎಣಿಕೆ: ಮತ ಎಣಿಕೆ ಕೇಂದ್ರದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಅಭ್ಯರ್ಥಿ ಮತ್ತು ಅವರ ಏಜೆಂಟ್ ಹೊರತುಪಡಿಸಿ ಇತರರಿಗೆ ಪ್ರವೇಶ ನಿರಾಕರಿಸಲಾಗಿತ್ತು.

ತರೀಕೆರೆ ಉಪವಿಭಾಗಾಧಿಕಾರಿ ಬಿ.ರೂಪಾ, ಅಜ್ಜಂಪುರ ತಹಶೀಲ್ದಾರ್ ವಿಶ್ವನಾಥ ರೆಡ್ಡಿ, ಸಮಾಜ ಕಲ್ಯಾಣ ಅಧಿಕಾರಿ ಶಂಕರಪ್ಪ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಇನ್‌ಸ್ಪೆಕ್ಟರ್‌ ಮಂಜುನಾಥ್ ಇದ್ದರು.

ಕಳೆದ ಬಾರಿ 11 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌

ಕಳೆದ ಅವಧಿಯಲ್ಲಿ ಮೊದಲು 11 ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷವು ಜೆಡಿಎಸ್ ಸದಸ್ಯರ ಮತ್ತು ಕೆಜೆಪಿ ಸದಸ್ಯರ ಸಹಕಾರ ಪಡೆದು ಮೊದಲ ಎರಡೂವರೆ ವರ್ಷ ಆಡಳಿತ ನಡೆಸಿತ್ತು. ಬಿಜೆಪಿ 8, ಜೆಡಿಎಸ್ 2 ಮತ್ತು ಕೆಜೆಪಿ ಹಾಗೂ ಪಕ್ಷೇತರರು ತಲಾ 1 ಸ್ಥಾನ ಪಡೆದಿದ್ದರು. ಅದೇ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯರೊಬ್ಬರ ಅಕಾಲಿಕ ಮರಣದಿಂದ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಸಂಖ್ಯಾಬಲವನ್ನು 9ಕ್ಕೆ ಹೆಚ್ಚಿಸಿಕೊಂಡಿತ್ತು. ನಂತರದ ಎರಡೂವರೆ ವರ್ಷದ ಅವಧಿಗೆ ಮೀಸಲಾತಿ ಬದಲಾವಣೆ ಅಸಮಾಧಾನದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬಿಜೆಪಿ ಅಧಿಕಾರಕ್ಕೇರಿತ್ತು. ಈ ಬಾರಿ 10 ಸ್ಥಾನ ಗಳಿಸಿರುವ ಬಿಜೆಪಿ ತನ್ನದೇ ಲೆಕ್ಕಾಚಾರ ನಡೆಸುತ್ತಿದ್ದು, ಅಧಿಕಾರ ಸ್ಥಾಪಿಸುವ ತನ್ನ ಹಕ್ಕನ್ನು ಸದ್ಯದಲ್ಲಿಯೇ ಪ್ರತಿಪಾದಿಸಲು ಮುಂದಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT