ಭಾನುವಾರ, ಮಾರ್ಚ್ 26, 2023
24 °C
ಕುಗ್ರಾಮದ ಪರಿಕಲ್ಪನೆಯಿಂದ ಹೊರಬರದ ಊರು

ದೊಡ್ಡಘಟ್ಟದಲ್ಲಿ ಸೌಲಭ್ಯ ಮರೀಚಿಕೆ

ಎನ್‌.ಸೋಮಶೇಖರ Updated:

ಅಕ್ಷರ ಗಾತ್ರ : | |

Prajavani

ಬೀರೂರು (ದೊಡ್ಡಘಟ್ಟ): ‘ಸ್ವಾಮೀ..... ನಮ್ಮದು ಮಹಾರಾಜರೇ ಭೇಟಿ ನೀಡಿ ಹೋಗಿರುವ ಗ್ರಾಮ. ತೆಲುಗುಗೌಡರು ಮತ್ತು ಪರಿಶಿಷ್ಟರೇ ಇರುವ ಸುಮಾರು 230 ಮನೆಗಳಿರುವ ಹಳ್ಳಿ. ರಾಷ್ಟ್ರೀಯ ಹೆದ್ದಾರಿ–206ರಿಂದ ಕೇವಲ 2 ಕಿ.ಮೀ. ದೂರದಲ್ಲಿದೆ. ಚುನಾವಣೆ ಬಂದರೆ ಸಾಲುಸಾಲಾಗಿ ಭೇಟಿ ನೀಡುವ ರಾಜಕಾರಣಿಗಳು ಬಳಿಕ ಇತ್ತ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಇದಕ್ಕೆ ಕಾರಣ ನಮ್ಮೂರಿನ ಹಾಳಾದ ರಸ್ತೆ, ಚರಂಡಿಯ ಅವ್ಯವಸ್ಥೆ, ನಿವೇಶನ ಹಕ್ಕುಪತ್ರದ ಬೇಡಿಕೆ...’

ಇದು ಬೀರೂರು ಸಮೀಪದ ದೊಡ್ಡಘಟ್ಟ ಗ್ರಾಮಸ್ಥರ ಅಳಲು. ಜೋಡಿತಿಮ್ಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಘಟ್ಟ ಗ್ರಾಮವನ್ನು ಹೆದ್ದಾರಿ ಹಾದು ತಲುಪುವುದೇ ಒಂದು ಸಾಹಸ. 2.ಕಿ.ಮೀ. ಗುಂಡಿಬಿದ್ದ ರಸ್ತೆ ಡಾಂಬರು ಕಂಡು ಅದೆಷ್ಟು ವರ್ಷಗಳಾಗಿದೆಯೋ ದೇವರೇ ಬಲ್ಲ. ರಾತ್ರಿ ವೇಳೆಯಂತೂ ಹೊರಗಿನಿಂದ ಬಂದವರು ಇಲ್ಲಿಗೆ ಮುಟ್ಟಲು
ಧೈರ್ಯ ಮಾಡಿಯೇ ಬರಬೇಕು. ಸಾಕಷ್ಟು ಅಧಿಕಾರಸ್ಥರಿಗೆ ಇಲ್ಲಿನ ಪರಿಸ್ಥಿತಿಯ ಅರಿವಿದ್ದರೂ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ ಎನ್ನುವುದು ಗ್ರಾಮಸ್ಥರ ದೂರು.

ಇದೇ ರಸ್ತೆ ಗ್ರಾಮದ ಒಳಗೆ ಹಾದು ಮುಂಡ್ರೆ ರಸ್ತೆಯನ್ನು ಸಂಪರ್ಕಿಸಬಹುದು. ಆ ಹಾದಿ ಇನ್ನೂ ದುರ್ಭರ. ಮಳೆ ಬಂದರೆ ಕೆಸರಿನ ಹೊಂಡಗಳನ್ನೇ ಹಾದು ಮುಂದೆ ಹೋಗಬೇಕು. ಯಾರಾದರೂ ಅದನ್ನೂ ಸರಿಪಡಿಸಿದರೆ ನಮ್ಮೂರಿಗೆ ಶಾಪದಿಂದ ವಿಮುಕ್ತಿಯಾದಂತೆ ಎನ್ನುವುದು ಹಳ್ಳಿಗರ ಅಭಿಪ್ರಾಯ.

‘ಸುಮಾರು 550 ಜನಸಂಖ್ಯೆ ಇರುವ ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯಂತೂ ದುರವಸ್ಥೆಯೇ ಸರಿ. ಕೆಲವೆಡೆ ಚರಂಡಿ ಇದೆ, ನೀರು ಸರಿಯಾಗಿ ಹರಿಯುವುದಿಲ್ಲ, ಇನ್ನು ಕೆಲವೆಡೆ ಚರಂಡಿ ಇಲ್ಲ. ಮನೆಗಳ ಕೊಳಚೆ ನೀರು ಹರಿಯುವುದೇ ರಸ್ತೆಯ ಮೇಲೆ. ಕಾಲೊನಿಯಲ್ಲಿ ಮತ್ತು ಊರಿನ ಒಳಗೆ ಸಾಕಷ್ಟು ಕಡೆ ಹೊಸ ಮನೆಗಳಿದ್ದು, ಅಲ್ಲಿನ ಕೊಳಚೆ ನೀರು ಹರಿಯಲು ಚರಂಡಿ ವ್ಯವಸ್ಥೆ ಮಾಡಿದರೆ ಗ್ರಾಮದಲ್ಲಿ ಶುಚಿತ್ವ ಕಾಣಬಹುದು ಎನ್ನುವುದು ಇಲ್ಲಿನ ಜನರ ಕೂಗು.

‘ನಿರಂತರ ಜ್ಯೋತಿ ವಿದ್ಯುತ್‌ ಲೈನ್‌ ಆಗಿದ್ದರೂ ಮನೆಗಳಿಗೆ ಸಂಪರ್ಕ ಕಲ್ಪಿಸಿಲ್ಲ. ಇದು ಪ್ರಮುಖ ಕೊರತೆಯಾಗಿ ಕಾಣುತ್ತದೆ. ಕುಡಿಯುವ ನೀರಿಗೆ ಸಮಸ್ಯೆ ಏನೂ ಇಲ್ಲ. ಭದ್ರಾ ಕುಡಿಯುವ ನೀರು ಪೂರೈಕೆಯ ವ್ಯವಸ್ಥೆ ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೇ ಶುದ್ಧ ಕುಡಿಯುವ ನೀರು ದೊರೆಯುವ ಭರವಸೆ ಇದೆ.

ಗ್ರಾಮದ ಕಂದಾಯ ಭೂಮಿಯಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ಮನೆ ನಿರ್ಮಿಸಿಕೊಂಡಿವೆ. ಆದರೆ, ಹತ್ತಾರು ವರ್ಷಗಳು ಕಳೆದಿದ್ದರೂ ಹಕ್ಕುಪತ್ರ ಸಿಕ್ಕಿಲ್ಲ. ಕಂದಾಯ ಭೂಮಿ ಆಗಿರುವುದರಿಂದ ಗ್ರಾಮಠಾಣಾ ವ್ಯಾಪ್ತಿಗೂ ಒಳಪಟ್ಟಿಲ್ಲ. ಇದರಿಂದ ಗ್ರಾಮ ಪಂಚಾಯಿತಿಯವರು ಏನೂ ಕ್ರಮ ವಹಿಸಲು ಸಾಧ್ಯವಾಗುತ್ತಿಲ್ಲ. ಕೆಲ ತಿಂಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕರು ತಹಶೀಲ್ದಾರರಿಗೆ 94‘ಸಿ’ ಅಡಿ ಅರ್ಜಿ ಪಡೆದು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರು. ಬಳಿಕ ಯಾವುದೇ ಪ್ರಗತಿಯಾಗಿಲ್ಲ. ಹಕ್ಕುಪತ್ರ ಇಲ್ಲದ್ದರಿಂದ ಇ-ಸ್ವತ್ತು ಸಿಗದೆ ಸಾಕಷ್ಟು ಜನರಿಗೆ ತೊಂದರೆಯಾಗಿರುವುದೂ ಉಂಟು.

ಇನ್ನು ಈ ಗ್ರಾಮ ಬಸ್ ಮುಖ ನೋಡಿದ ಇತಿಹಾಸವಿಲ್ಲ. ಇಲ್ಲಿಂದ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರೌಢಶಾಲೆ, ಕಾಲೇಜಿಗೆ ತೆರಳಲು ಹೆದ್ದಾರಿಗೆ ಎಡತಾಕಬೇಕು. ಅಲ್ಲಿಂದ ಯಾವುದಾದರೂ ಖಾಸಗಿ ವಾಹನ, ರಿಕ್ಷಾಗಳಲ್ಲಿ ಕಾರೇಹಳ್ಳಿ, ಬೀರೂರು, ಕಡೂರು ಕಡೆ ತೆರಳಬೇಕು ಎಂಬುದು ಗ್ರಾಮಸ್ಥರು ದೂರು.

‘ಗ್ರಾಮದಲ್ಲಿ ಪರಿಶಿಷ್ಟರಿಗೆ ಸ್ಮಶಾನದ ಸೌಕರ್ಯ ಇಲ್ಲ. ಹೀಗಾಗಿ, ಸರ್ವೆ ನಂ 21ರ ಸರ್ಕಾರಿ ಜಮೀನಿನಲ್ಲಿ ಶವಗಳನ್ನು ಸುಡಲಾಗುತ್ತಿದೆ. ನಮ್ಮಲ್ಲಿ ಸುಡುವ ಪದ್ಧತಿ ಇಲ್ಲ. ಆದರೆ, ಸ್ಮಶಾನವೇ ಇಲ್ಲದಿದ್ದರೆ ಎಲ್ಲಿ ಹೂಳುವುದು? ನಮಗೆ ಸ್ವಂತ ಭೂಮಿಯೂ ಇಲ್ಲದ ಕಾರಣ ಯಾವುದು ಅನಿವಾರ್ಯವೋ ಅದನ್ನೇ ಆಯ್ಕೆ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಗ್ರಾಮಸ್ಥ ಡಿ.ಆರ್.ವೆಂಕಟೇಶ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.