ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ರಾಜಕಾರಣ; ಪ್ರಜಾಪ್ರಭುತ್ವಕ್ಕೆ ಧಕ್ಕೆ

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕಲ್ಮರುಡಪ್ಪ
Last Updated 22 ನವೆಂಬರ್ 2020, 3:43 IST
ಅಕ್ಷರ ಗಾತ್ರ

ಕೊಪ್ಪ: ‘ಪಂಚಾಯಿತಿ ಮಟ್ಟದಿಂದ ದೇಶದ ಉನ್ನತ ಸ್ಥಾನದ ವರೆಗೂ ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಶಿಕ್ಷಣ ತರಬೇತಿ ಅವಶ್ಯಕ’ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕಲ್ಮರುಡಪ್ಪ ಹೇಳಿದರು.

ತಾಲ್ಲೂಕಿನ ಸಿಗದಾಳು ಅಣ್ಣಪ್ಪ ಪೈ ಸಭಾ ಭವನದಲ್ಲಿ ಶನಿವಾರ ಮಂಡಲ ಬಿಜೆಪಿ ಪ್ರಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಭಾರತದ ಆರಂಭದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರ್ಕಾರ ರಚನೆಯಾದರೂ, ಕುಟುಂಬದ ವಾರಸುದಾರರಲ್ಲಿ ರಾಜಕೀಯ ವ್ಯವಸ್ಥೆ ಕೇಂದ್ರೀಕೃತವಾಯಿತು. ಆರಂಭದಲ್ಲೇ ಕುಟುಂಬದ ರಾಜಕಾರಣದಿಂದಾಗಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಯಿತು’ ಎಂದರು.

‘ಇಂದಿರಾಗಾಂಧಿ ಹೆಸರಿಗೂ ಗಾಂಧಿ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡು, ಜನರ ಭಾವನೆಗಳನ್ನು ದುರುಪಯೋಗ ಪಡಿಸಿಕೊಂಡು ಕುಟುಂಬದ ವ್ಯವಸ್ಥೆ ಅಧಿಕಾರ ಚುಕ್ಕಾಣಿ ಹಿಡಿಯಿತು. ದೇಶಕ್ಕೆ ಸಂವಿಧಾನ ರಚಿಸಿಕೊಟ್ಟ ಅಂಬೇಡ್ಕರ್ ಅವರನ್ನೂ ಸಂಸತ್‌ಗೆ ಹೋಗದಂತೆ ತಡೆಯಲಾಯಿತು’ ಎಂದು ಹೇಳಿದರು.

‘ದೇಶಕ್ಕೆ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಧಿಕ್ಕರಿಸಿ, ವ್ಯಕ್ತಿಗಿಂತ ಪಕ್ಷಮುಖ್ಯ, ಪಕ್ಷಕ್ಕಿಂತ ದೇಶಮುಖ್ಯ ಎಂಬ ನಿಟ್ಟಿನಲ್ಲಿ ಜನ ಸಂಘವನ್ನು ಜನತಾ ಪಕ್ಷಕ್ಕೆ ದೇಶದ ಹಿತದೃಷ್ಟಿಯಿಂದ ವಿಲೀನ ಮಾಡಲಾಯಿತು. ಭಾರತೀಯ ಸಂಸ್ಕೃತಿಗೆ, ಭಾರತೀಯ ಮಣ್ಣಿನ ಗುಣ ಗಳನ್ನು ಅನುಸರಿಸಿದಂತಹ ನಾಯಕತ್ವ ದೇಶಕ್ಕೆ ಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಉದಯವಾಯಿತು’ ಎಂದು ತಿಳಿಸಿದರು.

ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ‘ಬಿಜೆಪಿ ತ್ಯಾಗ ಬಲಿದಾನಗಳಿಂದ ಕಟ್ಟಿದ ಪಕ್ಷ. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗದಂತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರುತ್ತಿದೆ. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಏಕರೂಪ ನಾಗರಿಕ ಸಂಹಿತೆಯೊಂದು ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಅದೂ ಜಾರಿಗೆ ಬರಲಿದೆ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡಲ ಬಿಜೆಪಿ ಅಧ್ಯಕ್ಷ ಅದ್ದಡ ಸತೀಶ್, ‘ಪ್ರಶಿಕ್ಷಣ ತರಬೇತಿ ಕಾರ್ಯಾಗಾರ ಈ ಹಿಂದೆಯೇ ಆಗಬೇಕಿತ್ತು. ಆದರೆ, ಕೋವಿಡ್ ಕಾರಣಕ್ಕೆ ತಡವಾಗಿದೆ. ಪಕ್ಷದ ಧ್ಯೇಯ, ಉದ್ದೇಶ ಏನು ಎಂಬುದನ್ನು ಕೆಲವರು ಅರ್ಥ ಮಾಡಿಕೊಂಡಿಲ್ಲ. ಪ್ರಶಿಕ್ಷಣದಲ್ಲಿ ಅರಿವು ಮೂಡಿಸಲಾಗುತ್ತದೆ. 91 ಮಂದಿ ಹಾಜರಾಗುವ ನಿರೀಕ್ಷೆ ಇತ್ತು, ಇದೀಗ 61 ಮಂದಿ ಬಂದಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಂಬ್ಲೂರು ರಾಮಕೃಷ್ಣ ಪ್ರಾಸ್ತಾವಿಕ ಮಾತನಾಡಿದರು. ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಬಿಜೆಪಿ ಶಿವಮೊಗ್ಗ ವಿಭಾಗ ಸಂಘಟನಾ ಕಾರ್ಯದರ್ಶಿ ಗಣೇಶ್ ರಾವ್, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಬಿಜೆಪಿ ಚುನಾಯಿತ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT