ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪ | ಕೊಳವೆಬಾವಿ ವಿಫಲ: ಕೈ ಹಿಡಿದ ಕೃಷಿಹೊಂಡ

ಸಂಕಷ್ಟದ ಬದುಕಿಗೆ ಆಸರೆಯಾದ ಉದ್ಯೋಗ ಖಾತರಿ
Published 21 ಮೇ 2024, 15:52 IST
Last Updated 21 ಮೇ 2024, 15:52 IST
ಅಕ್ಷರ ಗಾತ್ರ

ಕೊಪ್ಪ: ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಣವಂತೆ ಗ್ರಾಮದ ಜನರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ನರೇರಾ) ಸದ್ಬಳಕೆ ಮಾಡಿಕೊಂಡಿದ್ದಾರೆ.

ಯೋಜನೆಯಡಿ ವೈಯಕ್ತಿಕವಾಗಿ ದನದ ಕೊಟ್ಟಿಗೆ ನಿರ್ಮಾಣ, ಹಂದಿ ಶೆಡ್‌, ಕೋಳಿ ಶೆಡ್‌, ಕುರಿ ಶೆಡ್‌, ಕೃಷಿ ಬಾವಿ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದ್ದು, ಗ್ರಾಮಸ್ಥರು ಕಾಮಗಾರಿಗಳನ್ನು ಕೈಗೊಂಡು ಯೋಜನೆಯ ಸಾಕಾರ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದಾರೆ.

ಗ್ರಾಮದ ನಿವಾಸಿ ಜೇಮ್ಸ್‌ ಅವರು ತಮ್ಮ ಒಂದೂವರೆ ಎಕರೆ ಜಮೀನನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಂಡಿದ್ದರು. ಆದರೆ, ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಇದ್ದುದರಿಂದ ಜೇಮ್ಸ್ ಕೊಳವೆಬಾವಿ ಕೊರೆಯಿಸಲು ಪ್ರಾರಂಭಿಸಿದ್ದು, ಸತತ 6 ಕೊಳವೆಬಾವಿ ತೆಗೆದರೂ ನೀರು ಸಿಗಲಿಲ್ಲ. ಇದರಿಂದ ಹತಾಶರಾಗಿದ್ದ ಜೇಮ್ಸ್ ಕುಟುಂಬಕ್ಕೆ ನರೇಗಾ ಯೋಜನೆ ಆಸರೆಯಾಗಿ ನಿಂತಿತು.

ಮನೆ –ಮನೆಗೆ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡಲು ರೋಜಗಾರ್‌ ಸಹಾಯಕ ಆದರ್ಶ್‌ ಅವರು ಗ್ರಾಮಕ್ಕೆ ಹೋಗಿದ್ದಾಗ ಜೇಮ್ಸ್‌ ಅವರ ಮನೆಗೆ ಭೇಟಿ ನೀಡಿದ್ದರು. ನೀರಿನ ಸಮಸ್ಯೆ ಆಲಿಸಿದ ಆದರ್ಶ್ ನರೇಗಾ ಯೋಜನೆಯಡಿ ಕೃಷಿಹೊಂಡ ಮಾಡಲು ತಿಳಿಸಿದ್ದರು. ಅದರಂತೆ ಜೇಮ್ಸ್‌ ಕೃಷಿಹೊಂಡ ಮಾಡಿದ್ದರಿಂದ ಕೊನೆಯ ಪ್ರಯತ್ನ ಫಲ ನೀಡಿದ್ದು, ಹೊಂಡದಲ್ಲಿ ನೀರು ಸಂಗ್ರಹಗೊಂಡಿದೆ. ಯೋಜನೆಯ ಬಗ್ಗೆ ಜೇಮ್ಸ್ ಸಂತಸ ಹಂಚಿಕೊಂಡಿರುವುದಾಗಿ ತಾಲ್ಲೂಕು ಪಂಚಾಯಿತಿ ಐಇಸಿ ಸಂಯೋಜಕಿ ಸುಮಲತಾ ಬಜಗೋಳಿ ತಿಳಿಸಿದ್ದಾರೆ.

ಭೂಮಿಯ ಒಡಲು ಬರಿದು ಮಾಡುವ ಕೊಳವೆ ಬಾವಿಗಳಿಗಿಂತ ರೈತರು ಜಲಾನಯನ ಸ್ನೇಹಿ ಉಪಕ್ರಮಗಳಾದ ಕೃಷಿಹೊಂಡ ತೆರೆದ ಬಾವಿಗಳನ್ನು ನರೇಗ ಯೋಜನೆಯಡಿ ನಿರ್ಮಿಸಬೇಕು.
ಚೇತನ್ ಕೆ.ಜಿ. ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಗ್ರಾ.ಉ)

ಕೃಷಿಹೊಂಡದಿಂದ ರೈತರ ಬದುಕು ಹಸನು

ನರೇಗ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳು ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಸಂಬಂಧಪಟ್ಟಂತೆ ಅನೇಕ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು ಅದರಲ್ಲಿ ಕೃಷಿಹೊಂಡ ಒಂದು. ಕೃಷಿಹೊಂಡದಲ್ಲಿ ನೀರನ್ನು ಸಂಗ್ರಹಿಸಿ ಇಡುವುದರಿಂದ ಕೃಷಿ ಚಟುವಟಿಕೆಗೆ ಸಹಕಾರಿಯಾಗುವುದಲ್ಲದೇ ರೈತರ ಜೀವನ ಮಟ್ಟ ಸುಧಾರಿಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಥಿಕ್ ಪಾಷ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT