ಶನಿವಾರ, ಜನವರಿ 18, 2020
21 °C
ಗುರು ಸಿದ್ಧರಾಮ ಶಿವಯೋಗಿ ಜಯಂತ್ಯುತ್ಸವ ದಲ್ಲಿ ಸಿ.ಎಂ ಭರವಸೆ

ಕೆರೆ ತುಂಬಿಸಲು ಬಜೆಟ್‌ನಲ್ಲಿ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊಲ್ಲಾಪುರ (ಚಿಕ್ಕಮಗಳೂರು): ‘ನಾಡಿನ ಕೆರೆ–ಕಟ್ಟೆಗಳನ್ನು ತುಂಬಿಸುವ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲು ಪ್ರಯತ್ನಿಸುವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಸೊಲ್ಲಾಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ಗುರುಸಿದ್ಧರಾಮ ಶಿವಯೋಗಿ ಅವರ 847ನೇ ಜಯಂತ್ಯುತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಿದ್ಧರಾಮ ಶಿವಯೋಗಿಯವರು ಆ ಕಾಲದಲ್ಲಿ ನಾಡಿನ ರೈತರಿಗಾಗಿ ಕೆರೆ–ಕಟ್ಟೆಗಳನ್ನು ಕಟ್ಟುವ ಮಹತ್ಕಾರ್ಯ ಮಾಡಿದ್ದರು. ಇವತ್ತು ಇರುವ ಕೆರೆ–ಕಟ್ಟೆಗಳನ್ನು ಉಳಿಸಬೇಕಿದೆ. ಅವುಗಳಿಗೆ ಜಲಾಶಯಗಳಿಂದ ನೀರು ತುಂಬಿಸಬೇಕಿದೆ. ಇದರಿಂದ ಅನ್ನದಾತರಿಗೆ ಬಹಳ ಅನುಕೂಲವಾಗಲಿದೆ’ ಎಂದು ಹೇಳಿದರು.

‘ಅಂತರ್ಜಲ ಕುಸಿಯುವುದನ್ನು ತಪ್ಪಿಸಬೇಕಿದೆ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕಿದೆ. ಇದು ನಮ್ಮ ಸರ್ಕಾರದ ಮುಂದಿರುವ ಸವಾಲು’ ಎಂದರು.

ಸಿದ್ಧರಾಮ ಶಿವಯೋಗಿ ಅವರು ಕೆರೆಗಳಿಗೆ ಪುನಶ್ಚೇತನ ನೀಡಿ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿದ್ದು ಐತಿಹಾಸಿಕ ಮಹತ್ವದ ಸಂಗತಿ. ಜನರ ಮನವನ್ನು ಲೌಕಿಕದಿಂದ ಅಧ್ಯಾತ್ಮದ ಕಡೆಗೆ ಸೆಳೆದರು. ಜನರ ಏಳಿಗಾಗಿಯೇ ಬದುಕು ಸವೆಸಿದರು ಎಂದು ಬಣ್ಣಿಸಿದರು. ಜಯಂತ್ಯುತ್ಸವಕ್ಕೆ ಅಪಾರ ಭಕ್ತರ ದಂಡು ಹರಿದು ಬಂದಿತ್ತು.

 

ಮಾಧ್ಯಮದರಿಗೆ ಅಡ್ಡಿ: ಎಚ್ಚರಿಕೆ

‘ಕಾರ್ಯಕ್ರಮ ವರದಿಗೆ ಬಂದ ಮಾಧ್ಯಮದವರಿಗೆ ಅಡ್ಡಿಪಡಿಸಿದರೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್‌ ಅಧಿಕಾರಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಬಿಡುವುದಿಲ್ಲ. ಅದಕ್ಕೆ ಅವಕಾಶ ಕೊಡಬಾರದು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್‌ ಸೂಚನೆ ನೀಡಿದರು.

ಮಾಧ್ಯಮದವರನ್ನು ಪ್ರವೇಶ ದ್ವಾರದಲ್ಲಿ ಒಳಬಿಡದಂತೆ ಅಡ್ಡಗಟ್ಟಿದ್ದಕ್ಕೆ ಪೊಲೀಸರ ವಿರುದ್ಧ ಗರಂ ಆದರು. ವರ್ತನೆ ಬದಲಿಸಿಕೊಳ್ಳದಿದ್ದರೆ ಅಮಾನತು ಮಾಡಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ಪಾಂಡೆ ಅವರಿಗೆ ಎಚ್ಚರಿಕೆ ನೀಡಿದರು. ಸಿಎಂ ಮಾಧ್ಯಮದವರ ಕ್ಷಮೆ ಕೋರಿದರು.

ಇದೇ 18ರಂದು ಅಮಿತ್‌ ಶಾ ಬೆಂಗಳೂರಿಗೆ ಬರುತ್ತಾರೆ. ಸಂಪುಟ ವಿಸ್ತರಣೆ ಕುರಿತು ಅವರೊಂದಿಗೆ ಚರ್ಚಿಸಿ ಅಂತಿಮಗೊಳಿಸುತ್ತೇವೆ. -ಬಿ.ಎಸ್‌. ಯಡಿಯೂರಪ್ಪ,ಮುಖ್ಯಮಂತ್ರಿ

ಕೇರಳದಿಂದ ಬಂದಂತಹ ಇಬ್ಬರು ಶಂಕಿತರನ್ನು ಉಡುಪಿ ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
-ಬಸವರಾಜ ಬೊಮ್ಮಾಯಿ
ಗೃಹ ಸಚಿವ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು