ಬುಧವಾರ, ಸೆಪ್ಟೆಂಬರ್ 18, 2019
25 °C

ತರೀಕೆರೆಯಲ್ಲಿ ಬಸ್‌ಗಳ ಮುಖಾಮುಖಿ: ಕೆಎಸ್‌ಆರ್‌ಟಿಸಿ ಚಾಲಕ ಸಾವು

Published:
Updated:

ಬೀರೂರು: ರಾಷ್ಟ್ರೀಯ ಹೆದ್ದಾರಿ 206ರ ಕುಡ್ಲೂರುಗೇಟ್ ಸಮೀಪದ ಪುಂಡನಹಳ್ಳಿ ಬಳಿ ಗುರುವಾರ ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಸಾರಿಗೆ ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೈಸೂರಿನಿಂದ ಹೊಸಪೇಟೆಗೆ ತೆರಳುತ್ತಿದ್ದ ಸಾರಿಗೆ ಬಸ್ ಮತ್ತು ತರೀಕೆರೆಯಿಂದ ಬೀರೂರು ಕಡೆ ಬರುತ್ತಿದ್ದ ಎಸ್‍ಆರ್‌ಎಸ್ ಕಂಪನಿಗೆ ಸೇರಿದ ವೋಲ್ವೊ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಾರಿಗೆ ಬಸ್ ಚಾಲಕ ಮದ್ದೂರು ತಾಲ್ಲೂಕು ಗೆದ್ದಿಗೆರೆ ಗ್ರಾಮ ಮೂಲದ ಪುಟ್ಟಸ್ವಾಮಿಗೌಡ (40) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸಾರಿಗೆ ಬಸ್‍ನಲ್ಲಿ ಮೂವತ್ತೊಂದು ಪ್ರಯಾಣಿಕರಿದ್ದು, ಇವರಲ್ಲಿ ಹಲವರಿಗೆ ತಲೆ ಮತ್ತು ಕೈ, ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಮಳೆ ಬರುತ್ತಿದ್ದ ಸಂದರ್ಭ ಎದುರಿನಿಂದ ವೇಗವಾಗಿ ಬಂದ ವೋಲ್ವೊ ಬಸ್‍ನಿಂದ ಪಾರಾಗಲು ಯತ್ನಿಸಿದರೂ ಬ್ರೇಕ್ ಹಿಡಿಯದ ಕಾರಣ ಮುಖಾಮುಖಿ ಡಿಕ್ಕಿ ಸಂಭವಿಸಿತು ಎಂದು ಸಾರಿಗೆ ಬಸ್ ನಿರ್ವಾಹಕ ಮಹೇಶ್ ತಿಳಿಸಿದರು.

ಅಪಘಾತದ ರಭಸಕ್ಕೆ ಸಾರಿಗೆ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಖಾಸಗಿ ಬಸ್‍ನ ಚಾಲಕ ಮತ್ತು ನಿರ್ವಾಹಕರನ್ನು ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಿದ್ದು, ಬಸ್‍ನಲ್ಲಿ ಇದ್ದ ಪ್ರಯಾಣಿಕರ ಮಾಹಿತಿ ತಿಳಿದುಬಂದಿಲ್ಲ. ಅಪಘಾತ ಸಂಭವಿಸಿದ ಸ್ವಲ್ಪ ಸಮಯ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ಬೀರೂರು ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮತ್ತು ಸಂಚಾರವನ್ನು ಸುಗಮಗೊಳಿಸಲು ಶ್ರಮಿಸಿದರು. ಬೀರೂರು ಆಸ್ಪತ್ರೆಗೆ ತರೀಕೆರೆ ಉಪ ವಿಭಾಗಾಧಿಕಾರಿ ಬಿ.ಆರ್.ರೂಪಾ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದರು.

Post Comments (+)