ರಂಭಾಪುರಿ ಪೀಠ: ಪುಷ್ಕರಣಿ, ರೈತ ಭವನಕ್ಕೆ ಶಂಕುಸ್ಥಾಪನೆ

ಬಾಳೆಹೊನ್ನೂರು: ರಂಭಾಪುರಿ ಪೀಠದಲ್ಲಿ ಅಭಿವೃದ್ಧಿಪರ ಕಾರ್ಯಗಳು ವರ್ಷವಿಡೀ ತ್ವರಿತಗತಿಯಲ್ಲಿ ನಡೆಯು ತ್ತಿದ್ದು, ಪೀಠಕ್ಕೆ ಬರುವ ಭಕ್ತರಿಗೆ ಮೂಲಸೌಲಭ್ಯ ಒದಗಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಂಭಾಪುರಿ ಪೀಠದಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ರೈತ ಭವನ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಪುಷ್ಕರಣಿ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಂಭಾಪುರಿ ಪೀಠದಲ್ಲಿ ಭಕ್ತರ ಅನುಕೂಲಕ್ಕಾಗಿ ಪುಷ್ಕರಣಿ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಸರ್ಕಾರಕ್ಕೆ ಮನವಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ₹3 ಕೋಟಿ ವೆಚ್ಚದಲ್ಲಿ ಪುಷ್ಕರಣಿ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. 100x80 ಅಡಿ ಅಗಲ, 10ರಿಂದ 12 ಅಡಿ ಆಳ ಹೊಂದಿರುವ ಪುಷ್ಕರಣಿ ನಿರ್ಮಿಸಲಿದ್ದು, ಇದು ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಸ್ನಾನ, ಕೈಕಾಲು ತೊಳೆದುಕೊಳ್ಳಲು ಉಪಯೋಗಕ್ಕೆ ಬರಲಿದೆ.
ಕರ್ನಾಟಕ ನೀರಾವರಿ ನಿಗಮದ ವತಿಯಿಂದ ₹4 ಕೋಟಿ ವೆಚ್ಚದಲ್ಲಿ ರೈತ ಭವನ ಹೆಸರಿನಲ್ಲಿ ಯಾತ್ರಿ ನಿವಾಸ ನಿರ್ಮಾಣವಾಗಲಿದೆ. ಪೀಠಕ್ಕೆ ಬರುವ ಭಕ್ತರು ತಂಗಲು ಇದರಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.
ಮಾ.5ರಂದು ಪೀಠದಲ್ಲಿ ನಡೆಯಲಿ ರುವ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ, ಜಗದ್ಗುರು ರೇಣುಕಾಚಾರ್ಯ ಜಯಂತಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಾಮಗಾರಿಯು ಬಹುತೇಕ ಭಾಗ ನಡೆ ಯುವ ನಿರೀಕ್ಷೆಯಿದೆ ಎಂದು ಹೇಳಿದರು.
ಕರ್ನಾಟಕ ನೀರಾವರಿ ನಿಗಮದ ಇಇ ಜಗದೀಶ್, ಎಇಇ ರವಿಕುಮಾರ್, ಗುತ್ತಿಗೆದಾರ ಋಷ್ಯಶೃಂಗ, ಗೌರೀಶ್, ಸಣ್ಣ ನೀರಾವರಿ ಇಲಾಖೆಯ ಇಇ ದಕ್ಷಿಣಾಮೂರ್ತಿ, ಎಇಇ ಭರತ್, ಮೂಡ್ಲಗಿರಿಯಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.