ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಳಸ | ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

Published : 25 ಜುಲೈ 2023, 13:19 IST
Last Updated : 25 ಜುಲೈ 2023, 13:19 IST
ಫಾಲೋ ಮಾಡಿ
Comments

ಕಳಸ: ಪಟ್ಟಣದಲ್ಲಿ ಮಂಗಳವಾರ ನಡೆದ ಕಳಸ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಕೆಲ ವಿಷಯಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ  ತೆಗೆದುಕೊಂಡರು.

ಪಟ್ಟಣದಲ್ಲಿ ಬೀಡಾಡಿ ಜಾನುವಾರುಗಳ ಉಪಟಳ ಹೆಚ್ಚಾಗಿದೆ ಎಂದು ಜನರು ದೂರಿದರು. ಗೋಶಾಲೆಗೆ ಜಾಗ ಗುರುತಿಸುವಂತೆ ಸಲಹೆ ಕೂಡ ನೀಡಿದರು. ಕಳಸದ ಕೈಮರದ ಬಳಿ ನೀರು ಹರಿದು ಹೋಗುತ್ತಿದ್ದ ಮೋರಿ ಮುಚ್ಚಿದ್ದರಿಂದ ಇಡೀ ಪಟ್ಟಣಕ್ಕೆ ನೀರು ಹರಿದು ಬರುತ್ತಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರೊಬ್ಬರು ದೂರಿದರು.

ಹೇರಡಿಕೆ ಗಿರಿಜನರು ಮಾತನಾಡಿ, ‘ತಮ್ಮ ಗ್ರಾಮಕ್ಕೆ ರಸ್ತೆ ಸೌಲಭ್ಯ ಇಲ್ಲದೆ ಇಡೀ ಗ್ರಾಮದ ಜನರು ಬವಣೆ ಪಡುತ್ತಿದ್ದಾರೆ ಎಂದು ಗಮನ ಸೆಳೆದರು. ತೋಟಗಾರಿಕಾ ಇಲಾಖೆಯ ವಿವಿಧ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಯಲ್ಲಿ ಓದಬೇಕು. ಕೃಷಿ ಯಂತ್ರಧಾರೆಯ ಸಲಕರಣೆಗಳ ಬಾಡಿಗೆ ವಿವರ ನೀಡಬೇಕು ಎಂದು ಪಂಚಾಯಿತಿ ಸದಸ್ಯರಾದ ರಂಗನಾಥ್, ಸಂತೋಷ್ ಹಿನಾರಿ ಒತ್ತಾಯಿಸಿದರು. ತೋಟಗಾರಿಕಾ ಇಲಾಖೆಯ 30 ಎಕರೆ ಪ್ರದೇಶದಲ್ಲಿ ಇರವ ಸಪೋಟ ಮತ್ತು ತೆಂಗಿನ ಫಸಲು ಯಾರ ಪಾಲಾಗುತ್ತಿದೆ’ ಎಂದು ಗೋಪಾಲ ಹಡ್ಲು ಪ್ರಶ್ನಿಸಿದರು.

ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಮಾತನಾಡಿ, ‘ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಪೂರೈಕೆ ಸರಿ ಇಲ್ಲ ಎಂದು ಮೆಸ್ಕಾಂ ಅಧಿಕಾರಿ ಚೇತನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಲಿಗೆಯಲ್ಲಿ ಮೊಬೈಲ್ ಟವರ್ ನಿರ್ಮಿಸಲು 2 ಗುಂಟೆ ಕಂದಾಯ ಭೂಮಿ ಇಲ್ಲವೇ, ಈ ಬಗ್ಗೆ ಅರಣ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಜನಪರವಾಗಿ ಕೆಲಸ ಮಾಡುತ್ತಿಲ್ಲ’ ಎಂದು ಸವಿಂಜಯ್ ಆರೋಪಿಸಿದರು.

‘ಕೃಷಿ ಯಂತ್ರಧಾರೆ ಸಲಕರಣೆಗಳನ್ನು ಹೆಚ್ಚಿನ ಬೆಲೆಗೆ ಬಾಡಿಗೆಗೆ ಕೊಡಲಾಗುತ್ತಿದೆ ಎಂದು ಪಂಚಾಯಿತಿ ಸದಸ್ಯ ವೀರೇಂದ್ರ ದೂರಿದರು. ಕಳಸ ಪಟ್ಟಣದ ವಾಹನ ನಿಲುಗಡೆ ಸಮಸ್ಯೆ ಬಗ್ಗೆ ಮತ್ತು ಮಹಾವೀರ ರಸ್ತೆಯ ಸಂಚಾರ ದಟ್ಟಣೆ ನಿಯಂತ್ರಣದ ಬಗ್ಗೆ ಸದ್ಯದಲ್ಲೇ ಕ್ರಮ ವಹಿಸಲಾಗುವುದು. ಕಳಸದಲ್ಲೇ ಬಂದೂಕು ತರಬೇತಿ ಆಯೋಜಿಸುವ ಬಗ್ಗೆ ಪ್ರಯತ್ನ ನಡೆಸುತ್ತೇನೆ’ ಎಂದು ಕಳಸ ಠಾಣಾಧಿಕಾರಿ ನಿತ್ಯಾನಂದ ಹೇಳಿದರು.

ತೋಟಗಾರಿಕಾ ಸಹಾಯಕ ಪ್ರಜ್ವಲ್, ಕೃಷಿ ಅಧಿಕಾರಿ ವೆಂಕಟೇಶ್, ಪಿಡಿಓ ಕವೀಶ್ ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಂಚಾಯಿತಿ ಅಧ್ಯಕ್ಷೆ ಸುಜಯಾ ಅಧ್ಯಕ್ಷತೆ ವಹಿಸಿದ್ದರು.

‘ಅಡುಗೆ ಕೋಣೆ ನಿರ್ಮಿಸಿಕೊಡಿ’ ಕಳಸ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು. ಇಲ್ಲಿ ಅನೇಕ ವರ್ಷಗಳಿಂದ ಇರುವ ಸಿಬ್ಬಂದಿಗೆ ಬೇರೆಡೆಗೆ ವರ್ಗಾವಣೆ ಮಾಡಬೇಕು. ಕಾಯಂ ವೈದ್ಯರ ನೇಮಕಕ್ಕೆ ಕ್ರಮ ವಹಿಸಬೇಕು ಎಂದು ಸಿಪಿಐ ಮುಖಂಡ ಲಕ್ಷ್ಮಣಾಚಾರ್ ಆಗ್ರಹಿಸಿದರು. ವೈದ್ಯಾಧಿಕಾರಿ ಮಧು ಮಾತನಾಡಿ ‘ಆಸ್ಪತ್ರೆಯಲ್ಲಿ ಎಲ್ಲ ಸಿಬ್ಬಂದಿ ಮೇಲೂ ಕಣ್ಣಿಟ್ಟು ಸರಿಯಾಗಿ ಕೆಲಸ ಮಾಡುವಂತೆ ಪ್ರೇರಣೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಪಂಚಾಯಿತಿ ವತಿಯಿಂದ ಅಡುಗೆ ಕೋಣೆ ನಿರ್ಮಿಸಿಕೊಟ್ಟರೆ ರೋಗಿಗಳಿಗೆ ಆಹಾರ ಪೂರೈಸಲು ಅನುದಾನ ಲಭ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT