ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮರ ಸಾಗಣೆ: ರಸ್ತೆಗಳಿಗೆ ಕಂಟಕ

ಕೊಟ್ಟಿಗೆಹಾರ–ಕಳಸ ರಸ್ತೆಯಲ್ಲಿ ಮರಗಳ ಸಾಗಣೆ ನಿರಂತರ
Published 6 ಜುಲೈ 2024, 7:27 IST
Last Updated 6 ಜುಲೈ 2024, 7:27 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದರೂ ಅಧಿಕ ಭಾರದ ಲಾರಿಗಳ ಸಂಚಾರ ಎಗ್ಗಿಲ್ಲದೆ ಸಾಗಿದೆ. ಮರಗಳನ್ನು ಹೊತ್ತು ಭಾರಿ ವಾಹನಗಳು ಸಾಗುತ್ತಿದ್ದು, ರಸ್ತೆಗಳಿಗೆ ಕಂಟಕವಾಗಿದೆ.

ಕೊಟ್ಟಿಗೆಹಾರದಿಂದ ಕಳಸಕ್ಕೆ ತೆರಳುವ ಮಾರ್ಗವು ರಾಜ್ಯ ಹೆದ್ದಾರಿಯಾಗಿದ್ದರೂ, ಕಿರಿದಾದ ರಸ್ತೆ. ಗುಡ್ಡಗಳ ಸಾಲಿನಲ್ಲೇ ಸಾಗುವ ಈ ರಸ್ತೆ ವಿಸ್ತರಣೆಗೂ ಅವಕಾಶ ಇಲ್ಲ. 42 ಕಿಲೋ ಮೀಟರ್ ಕ್ರಮಿಸಲು ಕನಿಷ್ಠ ಒಂದೂವರೆ ಗಂಟೆಗಳ ಸಮಯ ವಾಹನ ಸವಾರರಿಗೆ ಬೇಕಿದೆ.

ನೂರಾರು ತಿರುವುಗಳೊಂದಿಗೆ ಸಾಗುವ ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ಸಾಹಸದ ಕೆಲಸ. ಎದುರಿನಿಂದ ವಾಹನಗಳು ಬಂದರೆ ಜಾಗ ಬಿಡಲು ಕೊಂಚ ರಸ್ತೆಯಿಂದ ಕೆಳಗೆ ವಾಹನ ಇಳಿಸಿದರೆ ಹೂತುಕೊಳ್ಳುವುದು ಅಥವಾ ಪ್ರಪಾತಕ್ಕೆ ಬೀಳುವುದು ಖಚಿತ. ಈ ರಸ್ತೆಯೂ ಸೇರಿದಂತೆ ಮಲೆನಾಡಿನ ಗ್ರಾಮೀಣ ರಸ್ತೆಗಳಲ್ಲಿ ಮರದ ದಿಮ್ಮಿ ಹೊತ್ತ ಲಾರಿಗಳು ನಿರಂತರವಾಗಿ ಸಂಚರಿಸುತ್ತಿವೆ.

ಕೊಟ್ಟಿಗೆಹಾರ–ಕಳಸ ರಸ್ತೆಯಲ್ಲಿ ಸಾಗಿದರೆ ಮರದ ದಿಮ್ಮಿಗಳನ್ನು ಲಾರಿಗಳಿಗೆ ತುಂಬಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಕಾಣಿಸುತ್ತದೆ. ಮರದ ದಿಮ್ಮಿಗಳನ್ನು ತುಂಬಿಸುಲು ಜೆಸಿಬಿಗಳನ್ನು ಬಳಸುತ್ತಿದ್ದು, ರಸ್ತೆ ಬದಿಯಲ್ಲಿನ ಅಷ್ಟೂ ಜಾಗ ಹಾಳಾಗುತ್ತಿದೆ. ಆ ಜಾಗದಲ್ಲಿ ಬೇರೆ ವಾಹನಗಳು ರಸ್ತೆ ಬದಿಗೆ ವಾಹನ ಇಳಿಸಿದರೆ ಸಿಲುಕಿಕೊಳ್ಳುವುದು ಖಚಿತ.

ಮಳೆಗಾಲದಲ್ಲಿ ಭಾರಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ ಭೂಕುಸಿತ ಉಂಟಾಗುವ ಸಾಧ್ಯತೆಯೂ ಹೆಚ್ಚಿದೆ. 2019ರ ಪ್ರವಾಹ ಸಂಭವಿಸಿ ಗುಡ್ಡಗಳೇ ಕುಸಿದಿದ್ದವು. ಮಲೆನಾಡಿನ ಜನ ಅಕ್ಷರಶಃ ನಲುಗಿದ್ದರು. ‌ಎಗ್ಗಿಲ್ಲದೇ ಮರಗಳನ್ನು ಕಡಿದು ಜೆಸಿಬಿ-ಹಿಟಾಚಿಗಳನ್ನು ಬಳಸಿ ಕೆಲಸ ಮಾಡಿರುವುದೇ ಕಾರಣ ಎಂಬ ವರದಿಯನ್ನೂ ಆಗ ತಜ್ಞರು ನೀಡಿದ್ದರು.

ಆದ್ದರಿಂದ ಪ್ರತಿವರ್ಷ ಮಳೆಗಾಲದಲ್ಲಿ ಭಾರಿ ವಾಹನಗಳ ಸಂಚಾರ ಅದರಲ್ಲೂ ಮರದ ದಿಮ್ಮಿಗಳನ್ನು ಹೊತ್ತ ಲಾರಿಗಳ ಸಂಚಾರವನ್ನು ಜಿಲ್ಲಾಡಳಿತ ನಿಷೇಧ ಮಾಡುತ್ತಿದೆ. ಜಿಲ್ಲಾಧಿಕಾರಿ ನಿಷೇಧ ಹೇರಿದ್ದರೂ ಭಾರಿ ವಾಹನಗಳ ಸಂಚಾರ ನಿಂತಿಲ್ಲ. 12ರಿಂದ 16 ಚಕ್ರದ ಲಾರಿಗಳು ಮರದ ದಿಮ್ಮಿಗಳನ್ನು ಹೊತ್ತು ಸಾಗುತ್ತಿವೆ. ಇದು ಮಲೆನಾಡು ಜನರ ಆತಂಕಕ್ಕೆ ಕಾರಣವಾಗಿದೆ.

ಸಿಲ್ವರ್ ಮರ ಕಡಿತಲೆಗೆ ಇಲ್ಲ ನಿರ್ಬಂಧ ತೋಟಗಳಲ್ಲಿರುವ ಸಿಲ್ವರ್ ಮರಗಳನ್ನು ಕಡಿತಲೆಗೆ ಸರ್ಕಾರದ ನಿರ್ಬಂಧ ಇಲ್ಲ. ಆದ್ದರಿಂದ ವ್ಯಾಪಾರಿಗಳು ಬೇಕೆಂದಾಗ ಸಿಲ್ವರ್ ಮರಗಳನ್ನು ಕಡಿದು ಸಾಗಿಸುತ್ತಿದ್ದಾರೆ. ಮಳೆಗಾಲದಲ್ಲಿ ಸಾಗಣೆ ಮಾಡುವುದರಿಂದ ಗ್ರಾಮೀಣ ರಸ್ತೆಗಳು ಕಿರು ಸೇತುವೆಗಳು ಉಳಿಯುವುದಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಗಮನ ಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯ. ಸಿಲ್ವರ್ ಮರಗಳ ಕಡಿತಲೆಗೆ ವರ್ಷವಿಡೀ ಅವಕಾಶ ಇದೆ. ಭಾರಿ ವಾಹನಗಳ ಸಂಚಾರ ನಿಷೇಧದ ವಿಷಯ ಜಿಲ್ಲಾಡಳಿತಕ್ಕೆ ಸಂಬಂಧಿಸಿದ್ದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT