ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತಿಹುದು ಆಸ್ಪತ್ರೆ ಮಾಳಿಗೆ...

ಅತ್ತಿಗುಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲ
Last Updated 4 ಜೂನ್ 2021, 2:36 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಅತ್ತಿಗುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಚಾವಣಿ, ಗೋಡೆ ಹಾಳಾಗಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಆಸ್ಪತ್ರೆಯಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ, ಸಿಬ್ಬಂದಿ ಕೊರತೆ, ನೀರಿನ ಸಮಸ್ಯೆಗಳಿವೆ.

ಆಸ್ಪತ್ರೆಯ ಚಾವಳಿ ಹಾಳಾಗಿ ಕೆಲವೆಡೆ ಹೆಂಚುಗಳು ಇಲ್ಲ. ವೈದ್ಯಾಧಿಕಾರಿ ಕೊಠಡಿ, ಪರೀಕ್ಷಾ ಕೋಣೆ ಸಹಿತ ಎಲ್ಲ ರೂಮುಗಳು ಮಳೆಯಾದಾಗ ಸೋರುತ್ತವೆ. ಕೆಲವೆಡೆ ಗೋಡೆಯ ಗಾರೆ ಕಿತ್ತಿದೆ. ಕಿಟಕಿಗಳು ಮುರಿದಿವೆ.

ಇದೇ ಕಟ್ಟಡದಲ್ಲಿರುವ ವಸತಿಗೃಹವೂ ದುರವಸ್ಥೆಯಲ್ಲಿದೆ. ಶೌಚಾಲಯ ಚಾವಣಿ ಶೀಟು, ಬಾಗಿಲು ಮುರಿದಿದ್ದು, ಕುಸಿಯುವ ಸ್ಥಿತಿಯಲ್ಲಿದೆ. ಸುತ್ತ ಗಿಡಗಂಟಿಗಳು ಬೆಳೆದುಕೊಂಡಿವೆ.

‘ಆಸ್ಪತ್ರೆ ಕಟ್ಟಡ ಬಹಳ ಹಳೆಯದು. ಹೊಸ ಕಟ್ಟಡ ನಿರ್ಮಿಸುವಂತೆ ಶಾಸಕ, ಇತರ ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಯಾರೊಬ್ಬರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಅತ್ತಿಗುಂಡಿ ಗ್ರಾಮಸ್ಥ ಮೋಹನಕುಮಾರ್‌ ದೂರಿದರು.

ಆಸ್ಪತ್ರೆಯಲ್ಲಿ ಒಬ್ಬರು ಆಯುಷ್‌ ವೈದ್ಯೆ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಪ್ರಯೋಗಾಲಯ ತಂತ್ರಜ್ಞೆ, ಗ್ರೂಪ್‌ ‘ಡಿ’ ಸಿಬ್ಬಂದಿ ಇದ್ದಾರೆ. ನಾಲ್ವರೂ ಗುತ್ತಿಗೆ ನೌಕರರು.

‘ಇದ್ದ ಒಬ್ಬರು ವೈದ್ಯೆಯನ್ನೂ ಕೋವಿಡ್‌ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಆರೇಳು ದಿನಗಳಿಂದ ಅವರು ಆಸ್ಪತ್ರೆಗೆ ಬಂದಿಲ್ಲ. ರೋಗಿಗಳು ಆಸ್ಪತ್ರೆಗೆ ಬಂದು ವಾಪಸ್‌ ಹೋಗುವಂತಾಗಿದೆ. ಕಿರಿಯ ಆರೋಗ್ಯ ಸಹಾಯಕಿ ಮಾತ್ರ ಇರುತ್ತಾರೆ. ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಅವರು ಚಿಕಿತ್ಸೆ ನೀಡಲು ಆಗಲ್ಲ. ಸಮಸ್ಯೆ ಕೇಳುವವರೇ ಇಲ್ಲ’ ಎಂದು ಕೂಲಿ ಕಾರ್ಮಿಕ ರಮೇಶ್‌ ಸಂಕಷ್ಟ ತೋಡಿಕೊಂಡರು.

ಬಾಬಾಬುಡನ್‌ಗಿರಿಶ್ರೇಣಿ ಭಾಗದ ಏಕೈಕ ಆಸ್ಪತ್ರೆ ಇದು. ಚಂದ್ರಗಿರಿ, ಜೈನಸಿರಿ, ಮಲಗಾರ್‌, ಗುಂಡಿಖಾನ್‌, ಕೆಸುವಿನ ಮನೆ, ಮೇಲಿನಹುಲುವತ್ತಿ, ಅಡ್ಡಖಾನ್‌, ಕೃಷ್ಣಗಿರಿ,ಮಹಲ್‌ ಭಾಗದ ರೋಗಿಗಳಿಗೆ ಈ ಆಸ್ಪತ್ರೆಯೇ ದಿಕ್ಕು. ಎಸ್ಟೇಟ್‌ಗಳ ಕೂಲಿ ಕಾರ್ಮಿಕರು ಹೆಚ್ಚು ಇದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದರಿಂದ ರೋಗಿಗಳು ಚಿಕಿತ್ಸೆಗಾಗಿ ಕೈಮರ, ಚಿಕ್ಕಮಗಳೂರಿಗೆ ಬರಬೇಕಾಗಿದೆ.

‘ಈ ಆಸ್ಪತ್ರೆ ದುರವಸ್ಥೆಗಳ ತಾಣವಾಗಿದೆ. ನೀರಿನ ಸಮಸ್ಯೆ ಇದೆ. ವಿದ್ಯುತ್‌ ಪದೇಪದೇ ಕೈಕೊಡುತ್ತದೆ. ಕೆಲವೊಮ್ಮೆ ಲಸಿಕೆ, ಕೆಲ ಔಷಧಗಳನ್ನು ಸಂಜೆ ಒಯ್ದು ಕೈಮರ ಆಸ್ಪತ್ರೆಯಲ್ಲಿ ಇಟ್ಟು, ಬೆಳಿಗ್ಗೆ ತರುತ್ತೇವೆ’ ಎಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT