ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಮಗು ಕದ್ದೊಯ್ದ ಮಹಿಳೆ ಈಗ ಪೊಲೀಸರ ‘ಅತಿಥಿ’

ಆರೈಕೆಗೆ ಬಾಣಂತಿಗೆ ನೆರವಾಗುವ ನೆಪದಲ್ಲಿ ಕೃತ್ಯ
Last Updated 6 ಜನವರಿ 2020, 9:58 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಗುವಿನ ಆರೈಕೆಗೆ ಬಾಣಂತಿಗೆ ನೆರವಾಗುವ ‘ನಾಟಕ’ವಾಡಿ ಹೆರಿಗೆ ಆಸ್ಪತ್ರೆಯಿಂದ ನಾಲ್ಕು ದಿನದ ಹಸುಗೂಸನ್ನು ಕದ್ದೊಯ್ದಿದ್ದ ಮಹಿಳೆಯನ್ನು ಭಾನುವಾರ ಪೊಲೀಸರು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ.

ಅಸ್ಸಾಂ ರಾಜ್ಯದಿಂದ ಬಂದು ನಗರದಲ್ಲಿ ನೆಲೆಸಿರುವ ಅಂಜಲಿ ಮತ್ತು ರುನು ಅಲಿಯಾಸ್‌ ಸುನಿಲ್‌ ದಂಪತಿಯ ಕಂದಮ್ಮನನ್ನು ಶನಿವಾರ ಮಧ್ಯಾಹ್ನ ಕದ್ದೊಯ್ಯಲಾಗಿತ್ತು. ಮಗುವನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಗಿದೆ. ಜಯಮ್ಮ (37) ಬಂಧಿತ ಮಹಿಳೆ. ಈಕೆ ಗೃಹ ರಕ್ಷಕ ದಳದ ತಾತ್ಕಾಲಿಕ ಸಿಬ್ಬಂದಿ.

ದಂಪತಿ ಅಸ್ಸಾಂನ ಜುಲಾಟ್‌ ಜಿಲ್ಲೆಯ ಮಾಧವಪುರದವರು. ಗೌಡನಹಳ್ಳಿನ ಕೈಗಾರಿಕಾ ಪ್ರದೇಶದಲ್ಲಿ ನೆಲೆಸಿದ್ದಾರೆ.

‘ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಇದೇ 1ರಂದು ಅಂಜಲಿ ಅವರಿಗೆ ಹೆರಿಗೆಯಾಗಿತ್ತು. ಗಂಡು ಶಿಶು ಜನಿಸಿತ್ತು. ಮಗು ಆರೈಕೆ ನೆಪದಲ್ಲಿ ಮಹಿಳೆಯೊಬ್ಬರು 2ರಂದು ಅವರಿಗೆ ಪರಿಚಯಿಸಿಕೊಂಡಿದ್ದರು. 4ರಂದು ತಾಯಿ–ಮಗುವನ್ನು ಹೆರಿಗೆ ವಾರ್ಡ್‌ನಿಂದ ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ. ತಾಯಿ ಹಾಲುಣಿಸಿದ ನಂತರ ಶಿಶುವನ್ನು ತೇಗಿಸಲು ಪಡೆದ ಮಹಿಳೆ ಭುಜದ ಮೇಲಕ್ಕೆ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಳು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸ್ವಲ್ಪ ಹೊತ್ತಾದರೂ ಮಹಿಳೆ ವಾಪಸ್‌ ಬಂದಿಲ್ಲ. ಅಕ್ಕಪಕ್ಕ ವಿಚಾರಿಸಿದರೂ, ಹುಡುಕಾಡಿದರೂ ಸಿಕ್ಕಿಲ್ಲ. ಅಂಜಲಿ ರೋದಿಸಲು ಶುರು ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಮಹಿಳೆ ಬಗ್ಗೆ ಆಸ್ಪತ್ರೆಯಲ್ಲಿ ವಿಚಾರಿಸಿದೆವು. ಆಕೆ ತನ್ನದು ಜಾಗರ, ಕೋಡಿಹಳ್ಳಿ ಎಂದೆಲ್ಲ ಹೇಳಿಕೊಂಡಿದ್ದಳು. ಫೋಟೊ, ಸಿ.ಸಿ ಟಿವಿ ಕ್ಯಾಮೆರಾ, ಮೊಬೈಲ್‌ ಫೋನ್‌ ಆಧರಿಸಿ ಜಾಡು ಪತ್ತೆ ಹಚ್ಚಿದೆವು. ನಗರದ ಕೋಟೆಯಲ್ಲಿ ಮಹಿಳೆ ಸಿಕ್ಕಿಬಿದ್ದಳು. ಮಹಿಳೆ ಮೂಲತಃ ಅಂಬಳೆಯವಳು. ವಿಚಾರಣೆ ನಡೆದಿದೆ’ ಎಂದು ತಿಳಿಸಿದ್ದಾರೆ.

ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT