ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಶ್ಚಿಯನ್‌ ಕಾಲೊನಿ ಮೋರಿ ದುರವಸ್ಥೆ: ದುರ್ನಾತ, ರೋಗಬಾಧೆ, ನಿವಾಸಿಗಳ ಸಂಕಷ್ಟ

Last Updated 14 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಕ್ರಿಶ್ಚಿಯನ್‌ ಕಾಲೊನಿಯ (15ನೇ ವಾರ್ಡ್) ಮೋರಿಯ ದುರವಸ್ಥೆ ನಿವಾಸಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ದುರ್ನಾತ, ಸೊಳ್ಳೆ ಕಾಟ, ರೋಗಬಾಧೆ, ಕೊಳಕಿನ ಮಡಿಲಲ್ಲೇ ಬದುಕಬೇಕಾಗಿದೆ.

ಕಾಲೊನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಚರಂಡಿ, ಒಳಚರಂಡಿ(ಯುಜಿಡಿ) ಗಲೀಜು, ಬಚ್ಚಲ ನೀರು ಈ ಮೋರಿಗೆ ಸೇರುತ್ತಿವೆ. ಮೋರಿಯ ಬದಿಯಲ್ಲಿ ಪ್ಲಾಸ್ಟಿಕ್‌, ಹಸಿಒಣ ಕಸ ಎಸೆದಿದ್ದು ಕೊಳೆಗೇರಿಯಾಗಿದೆ. ಕಸದ ರಾಶಿಯನ್ನು ಬಿಡಾಡಿಗಳು ಕೆದುಕಿ ರಾಡಿ ಮಾಡುತ್ತವೆ. ಸಹಿಸಲಸಾಧ್ಯ ದುರ್ವಾಸನೆ ಬೀರುತ್ತದೆ.

ಮೋರಿಗೆ ಕೆಲ ಮನೆಗಳು ಅಂಟಿಕೊಂಡಂತಿವೆ. ಕಾಲೊನಿಯ ನಿವಾಸಿಗಳು ಜ್ವರ, ತಲೆನೋವು, ಮೈಕೈನೋವು, ಚಿಕೂನ್‌ಗುನ್ಯಾ, ಮಲೇರಿಯಾ, ಡೆಂಗಿಯಿಂದಾಗಿ ಆಗಾಗ್ಗೆ ಆಸ್ಪತ್ರೆಗಳಿಗೆ ಅಲೆಯುವುದು ಸಾಮಾನ್ಯವಾಗಿದೆ.

ಮಧುವನ ಬಡಾವಣೆ ಬಳಿ ಈ ಮೋರಿ ತುಂಬಾ ಗಿಡಗಂಟಿಗಳು ಬೆಳೆದುಕೊಂಡಿವೆ. ಕಸಕಡ್ಡಿ, ಗಲೀಜು ತುಂಬಿಕೊಂಡಿದೆ. ಹಾವು, ಹುಳಹುಪ್ಪಟೆ, ಸೊಳ್ಳೆ, ಕ್ರಿಮಿಕೀಟಗಳ ಆವಾಸ ತಾಣವಾಗಿದೆ. ಈ ತೆರೆದ ಮೋರಿಯು ಅಪಾಯದ ಕೂಪವಾಗಿದೆ.
‘ಕಳೆದ ವರ್ಷ ಡೆಂಗಿಯಾಗಿತ್ತು. ಚಿಕಿತ್ಸೆ ಪಡೆದಿದೆ. ಮೂರ್ನಾಲ್ಕು ತಿಂಗಳಿಗೊಮ್ಮೆ ಜ್ವರ ಮರುಕುಳಿಸುತ್ತಿದೆ. ತಲೆ ಭಾರ ಎನಿಸುತ್ತದೆ. ಈಗ ಆಸ್ಪತ್ರೆಗೆ ಹೊರಟಿದ್ದೇನೆ. ಗಟಾರದ ದುರ್ನಾಟ, ಸೊಳ್ಳೆಗಳ ಕಾಟವೇ ಅನಾರೋಗ್ಯಕ್ಕೆ ಕಾರಣವಾಗಿದೆ. ಪ್ರತಿಭಟನೆ ಮಾಡಿ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ’ ಎಂದು ಖಯ್ಯುಮ್‌ ಗೋಳು ತೋಡಿಕೊಂಡರು.

‘ತಿಂಗಳ ಹಿಂದೆ ಚಿಕೂನ್‌ಗುನ್ಯಾ ಆಗಿತ್ತು. ಕೈಕಾಲು, ಮಂಡಿ ನೋವು ಪೂರ್ಣವಾಗಿ ಗುಣವಾಗಿಲ್ಲ. ಮಗ ವಿಠಲ, ಸೊಸೆ ಜ್ಯೋತಿ, ಪಕ್ಕದ ಮನೆ ಸರೋಜಾ ಅವರಿಗೂ ಈ ರೋಗ ಬಾಧಿಸಿತ್ತು. ನೆರೆಹೊರೆಯಲ್ಲಿ ಹಲವರಿಗೆ ಜ್ವರ ಇದೆ. ಚುನಾವಣೆ ಸಂದರ್ಭದಲ್ಲಿ ವೋಟು ಕೇಳಲು ಬರುವವರು, ನಂತರ ಇತ್ತ ಕಡೆ ಸುಳಿಯವುದಿಲ್ಲ’ ಎಂದು ಗೃಹಿಣಿ ಪುಂಗವನ ಅವರು ಜನಪ್ರತಿನಿಧಿಗಳನ್ನು ಶಪಿಸಿದರು.

ಮೋರಿ ಹಾದುಹೋಗಿರುವ ಸನಿಹದಲ್ಲಿ ಮಸೀದಿ ಇದೆ. ನೂರಾರು ಮಂದಿ ಪ್ರಾರ್ಥನೆಗೆ ಬರುತ್ತಾರೆ. ದುರ್ನಾತದಲ್ಲೇ ಪ್ರಾರ್ಥನೆ ಮಾಡಬೇಕಾದ ಸ್ಥಿತಿ ಇದೆ. ಮೋರಿ ಬದಿಯ ಜಾಗದಲ್ಲಿ ಕಾಲೊನಿಯ ಮಕ್ಕಳ ಆಟವಾಡುತ್ತಾರೆ. ಮೋರಿಯ ಪಕ್ಕದಲ್ಲೇ ನೀರಿನ ತೊಂಬೆ, ನಲ್ಲಿಗಳು ಇವೆ. ಮಳೆ ಜೋರಾಗಿ ಸುರಿದಾಗ ಮೋರಿ ಉಕ್ಕಿ ಹರಿಯುತ್ತದೆ, ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತದೆ.

‘ಸೊಳ್ಳೆ ಕಾಟ ತುಂಬಾ ಇದೆ. ಇದು ತೆರೆದ ಮೋರಿ. ನೆಂಟರು ಬಂದರೆ ಮೋರಿ ನೋಡಿಯೇ ಅಸಹ್ಯ ಪಟ್ಟುಕೊಳ್ಳುತ್ತಾರೆ. ನಾವು ಈ ಗಬ್ಬಿನಲ್ಲೇ ಜೀವನ ಸಾಗಿಸಬೇಕಾಗಿದೆ’ ಎಂದು ನಿವಾಸಿ ಆಸಿಫ್‌ ಅಳಲು ತೋಡಿಕೊಂಡರು.

‘ಸ್ವಚ್ಛತೆ ನಿರ್ವಹಣೆಗೆ ಕ್ರಮ ವಹಿಸಬೇಕು ಎಂದು ನಗರಸಭೆ ಗಮನಸೆಳೆದಿದ್ದೇವೆ. ಅವರು ಗಮನಹರಿಸಿಲ್ಲ. ಕಾಲುವೆ ವ್ಯವಸ್ಥಿತ ನಿರ್ಮಾಣಕ್ಕೆ ಸಣ್ಣನೀರಾವರಿ ಇಲಾಖೆಗೂ ಮನವಿ ಮಾಡಿದ್ದೇವೆ. ಅವರೂ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಕರ್ನಾಟಕ ರಾಜ್ಯ ಏಕತಾ ವೇದಿಕ ಅಧ್ಯಕ್ಷ ಅಫ್ಜಲ್‌ ಪಾಷಾ ದೂರಿದರು.

‘ಈ ಚರಂಡಿ ಕಾಲುವೆಯು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಮೋರಿ ಹಾದುಹೋಗಿರುವ ಬಳಿಯೇ ಇಲಾಖೆಯ ಕಚೇರಿಯೂ ಇದೆ. ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಇಲಾಖೆಯವರು ‘ಜಾಣ ಕುರುಡು’ ಪ್ರದರ್ಶಿಸುತ್ತಿದ್ದಾರೆ’ ಎಂದು ನಗರಸಭೆ ಸದಸ್ಯ ಬಿ.ಆರ್‌.ದಿನೇಶ್‌ ದೂಷಿಸಿದರು.

‘ಈ ಮೋರಿ ಅಕ್ಕಪಕ್ಕದಲ್ಲಿ ಒತ್ತುವರಿ ಸಮಸ್ಯೆ ಇದೆ. ಆಗಾಗ್ಗೆ ಕಸ ವಿಲೇವಾರಿಗೆ ಕ್ರಮ ವಹಿಸಲಾಗಿದೆ. ಮೋರಿ ಬಗ್ಗೆ ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT