ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ: ಕಾಯಿಗೆ ಕೊಳೆರೋಗ ಬಾಧೆ

ಮಾರುಕಟ್ಟೆಯಲ್ಲಿ ಹೆಚ್ಚಿದ ಬೆಲೆ: ಮಲೆನಾಡು ಬೆಳೆಗಾರಲ್ಲಿ ಆತಂಕ
Last Updated 14 ಜುಲೈ 2022, 4:01 IST
ಅಕ್ಷರ ಗಾತ್ರ

ಚಿಕ್ಕಮಗಳೂರು/ಕಳಸ: ಜಿಲ್ಲೆಯಲ್ಲಿ ಕೆಲದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು ಮಲೆನಾಡು ಭಾಗದ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಕಾಫಿತೋಟಗಳಲ್ಲಿ ಕಾಯಿ ಕೊಳೆರೋಗ ಕಾಣಿಸಿಕೊಂಡಿದೆ.

ಗಿಡಗಳಲ್ಲಿ ಕಾಫಿ ಕಾಯಿಗಳು ಕಪ್ಪಾಗಿವೆ. ಕಾಯಿಗಳು ಉದುರಿವೆ. ಎಲೆಗಳು ಕಪ್ಪಾಗಿವೆ. ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.

‘ಈ ವರ್ಷ ಒಳ್ಳೆ ಫಸಲು ಇತ್ತು. ಉತ್ತಮ ಇಳುವರಿ, ಆದಾಯ ನಿರೀಕ್ಷೆ ಇತ್ತು. ಕೊಳೆರೋಗ, ‘ವೆಟ್‌ ಫೀಟ್‌’ನಿಂದಾಗಿ ಈಗ ಶೇ 15ರಿಂದ 20ರಷ್ಟು ಫಸಲು ಹಾಳಾಗಿದೆ. ಮಳೆ ಎಲ್ಲದಕ್ಕೂ ತೊಡಕಾಗಿದೆ. ಫಸಲು ಉಳಿಸಿಕೊಳ್ಳಲು ಏನು ಮಾಡಬೇಕು ಎಂದು ದಿಕ್ಕುತೋಚುತ್ತಿಲ್ಲ’ ಎಂದು ಕಳಸ ತಾಲ್ಲೂಕಿನ ಬೆಳೆಗಾರ ರಜಿತ್‌ ಕೆಳಗೂರು ಅಳಲು ತೋಡಿಕೊಂಡರು.

ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ, ತರೀಕೆರೆ (ಭಾಗಶಃ) ತಾಲ್ಲೂಕುಗಳಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಕಾಫಿಯೂ ಒಂದು.

ಜಿಲ್ಲೆಯಲ್ಲಿ ಸುಮಾರು 90 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ತೋಟಗಳು ಇವೆ. ಅರೇಬಿಕಾ ಮತ್ತು ರೋಬಸ್ಟ ತಳಿಗಳು ಇವೆ. ಎರಡು ತಳಿಗಳಿಗೂ ರೋಗ ಬಾಧಿಸುತ್ತಿದೆ. ಹೆಚ್ಚು ಶೀತದ ಪರಿಣಾಮ ಬೇರಿಗೆ ಆಮ್ಲಜನಕದ ಕೊರತೆಯಾಗಿ ಹಸಿರುಕಾಯಿ ಉದುರುವ ‘ವೆಟ್ ಫೀಟ್‌’ ಕೂಡಾ ಬಾಧಿಸುತ್ತಿದೆ.

‘ಕಾಫಿ ಕಾಯಿ ಬಲಿಯುವ ಕಾಲ ಇದು. ಕೊಳೆರೋಗದಿಂದಾಗಿ ಗಿಡಗಳಲ್ಲಿ ಈಚುಗಳು ಕೊಳೆತು ನೆಲಕಚ್ಚುತ್ತಿವೆ. ಜಿಲ್ಲಾಡಳಿತ ಕಾಫಿ ಬೆಳೆ ಹಾನಿ ಸಮೀಕ್ಷೆಗೆ ಪ್ರತ್ಯೇಕ ತಂಡ ರಚಿಸಬೇಕು. ನಷ್ಟ ಅಂದಾಜಿಸಿ ಬೆಳೆಗಾರರಿಗೆ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಕ್ರಮ ವಹಿಸಬೇಕು’ ಎಂದು ಬೆಳೆಗಾರ ಹೊಲದಗದ್ದೆ ಗಿರೀಶ್‌ ಒತ್ತಾಯಿಸುತ್ತಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರುಮುಖದಲ್ಲಿದೆ. ಕಾಫಿಯಿಂದ ಉತ್ತಮ ಆದಾಯ ಸಿಗಬಹುದು ಎಂಬ ನಿರೀಕ್ಷೆ ಬೆಳೆಗಾರರಲ್ಲಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT