ಬುಧವಾರ, ಜನವರಿ 27, 2021
21 °C
ಮೂಡಿಗೆರೆ: ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವೆ ಮೋಟಮ್ಮ ಆರೋಪ

ಜನರ ಬದುಕು ಕಸಿದುಕೊಂಡ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ದೇಶದಲ್ಲಿ ಬಿಜೆಪಿ ಸರ್ಕಾರವು ನಿರುದ್ಯೋಗವನ್ನು ಸೃಷ್ಟಿಸಿ ಜನರನ್ನು ಶಾಶ್ವತವಾಗಿ ನಿರಾಶ್ರಿತರ ನ್ನಾಗಿರುವ ಮೂಲಕ ಜನರ ಬದುಕನ್ನು ಕಸಿದುಕೊಂಡಿದೆ ಎಂದು ಮಾಜಿ ಸಚಿವೆ ಮೋಟಮ್ಮ ಆರೋಪಿಸಿದರು.

ಪಟ್ಟಣದ ಪ್ರೀತಂ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್ ವತಿಯಿಂದ ಗ್ರಾಮ ಪಂಚಾಯಿತಿಗಳ ನೂತನ ಸದಸ್ಯರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಕಾಂಗ್ರೆಸ್ ಸರ್ಕಾರವು 70 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಯನ್ನು ಬಿಜೆಪಿ ಕೇವಲ ಆರು ವರ್ಷಗಳಲ್ಲಿ ನುಂಗಿ ಹಾಕಿ ಬಡತನ, ನಿರುದ್ಯೋಗ ಸೃಷ್ಟಿಸಿ ದೇಶದ ಜನರನ್ನು ಶಾಶ್ವತವಾಗಿ ನಿರಾಶ್ರಿತರನ್ನಾಗಿ ಮಾಡಿದೆ. ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ಡಾ.ಮನಮೋಹನ್‍ಸಿಂಗ್ ಅವರು ಪರಿಣಾಮಕಾರಿಯಾದ ಆಡಳಿತ ನಡೆಸಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದರು. ಈಗಿನ ಬಿಜೆಪಿ ಸರ್ಕಾರ ಕಾಂಗ್ರೆಸ್ ಕಟ್ಟಿದ್ದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡುತ್ತಿದೆ. ಹೀಗೆಯೇ ದೇಶದ ಎಲ್ಲಾ ಸಂಪತ್ತನ್ನು ಖಾಸಗಿಯವರಿಗೆ ವಹಿಸಿಬಿಟ್ಟರೆ ಸರ್ಕಾರವೇ ಅಗತ್ಯವಿಲ್ಲವೆ ನ್ನುವಂತಾಗುತ್ತದೆ’ ಎಂದು ದೂರಿದರು.

‘ಈ ಸರ್ಕಾರಗಳಿಗೆ ರೈತರು, ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಇಂತಹ ಮತಿಗೆಟ್ಟ ಸರ್ಕಾರದಿಂದ ಜನರು ಅಭಿವೃದ್ಧಿಯನ್ನು ನಿರೀಕ್ಷಿಸುವುದನ್ನೇ ಕೈ ಬಿಟ್ಟಿದ್ದಾರೆ’ ಎಂದು ಆರೋಪಿಸಿದರು.

ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರದೇವಿ ಮಾತನಾಡಿ, ‘ಕಾಂಗ್ರೆಸ್ ಸಹ ಬಾಳ್ವೆಯ ಪಕ್ಷವಾಗಿದೆ. ಗ್ರಾಮ ಪಂಚಾ ಯಿತಿಯ ಚುನಾವಣೆಯಲ್ಲಿ ಜಯ ಗಳಿಸಿದವರು ಹೋರಾಟದ ಮೂಲಕ ಪರಿಣಾಮಕಾರಿಯಾಗಿ ಜನರೊಂದಿಗೆ ಬೆರೆಯಬೇಕು. ಮುಂದಿನ ಚುನಾವಣೆ ಗಳಿಗೆ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಲು ಸಿದ್ಧರಾಗಿರಬೇಕು’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ. ಸುರೇಂದ್ರ ಮಾತನಾಡಿ, ‘ಬಿಜೆಪಿಯವರು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸೋಲು ಕಂಡಿದ್ದರಿಂದ ಈಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವರಲ್ಲಿ ಸದಸ್ಯರಿಲ್ಲದೇ ಹತಾಶರಾಗಿದ್ದಾರೆ. ಹಂತೂರು ಗ್ರಾಮ ಪಂಚಾಯಿತಿಯ ನೂತನ ಸದಸ್ಯೆ ಸೇರಿದಂತೆ ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಜಯ ಗಳಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ವಿವಿಧ ಆಮಿಷಗಳ ಮೂಲಕ ಬಿಜೆಪಿಗೆ ಸೆಳೆಯಲು ಹರ ಸಾಹಸ ಪಡುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಕಾಶ ಕೊಡುತ್ತಿಲ್ಲ’ ಎಂದರು.

ಇದೇ ವೇಳೆ ಕ್ಷೇತ್ರದ 9 ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ನೂತನ ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಅಂಶುಮಂತ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ. ಮಹಮ್ಮದ್, ಎ.ಎನ್. ಮಹೇಶ್, ಕಾಂಗ್ರೆಸ್ ಪದಾಧಿಕಾರಿಗಳಾದ ನಯನ ಮೋಟಮ್ಮ, ಯು.ಎಚ್. ಹೇಮ ಶೇಖರ್, ಎಂ.ಎಲ್. ಮೂರ್ತಿ, ಡಿ.ಕೆ. ಉದಯ ಶಂಕರ್, ಸಿ.ಕೆ. ಇಬ್ರಾಹಿಂ, ಎಂ.ಎಲ್. ಅಭಿಜಿತ್, ಯು.ಎನ್. ಚಂದ್ರೇ ಗೌಡ, ಕೆ. ವೆಂಕಟೇಶ್, ಸಂಪತ್, ಎಚ್.ಪಿ. ರಮೇಶ್, ವಿನಯ್ ಕುಮಾರ್, ಶಿವ ಸಾಗರ್ ತೇಜಸ್ವಿ, ಸುಬ್ರಾಯ ಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.