ಶುಕ್ರವಾರ, ಡಿಸೆಂಬರ್ 13, 2019
20 °C
ಸಾ.ಶಿಕ್ಷಣ ಇಲಾಖೆಯಿಂದ ಅಂಬೇಡ್ಕರ್‌ಗೆ ಅಪಮಾನ ಆರೋಪ

ವಿವಿಧ, ಪಕ್ಷ ಸಂಘಟನೆಗಳಿಂದ ಪ್ರತಿಭಟನೆ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಉಮಾಶಂಕರ್ ಅವರನ್ನು ವಜಾಗೊಳಿಸಬೇಕು ಎಂದು ವಿವಿಧ ಪಕ್ಷ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ, ಸಿಪಿಐ, ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ನವ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ ಕಾರ್ಯಕರ್ತರು ಜಮಾಯಿಸಿದರು. ಆಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಶಾಲೆಗಳಲ್ಲಿ ಇದೇ 26ರಂದು ಸಂವಿಧಾನ ದಿನ ಆಚರಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೆ ಸಂವಿಧಾನ ರಚಿಸಿಲ್ಲ ಎನ್ನುವ ವಿಷಯ ಕುರಿತು ಚರ್ಚೆ ನಡೆಸುವಂತೆ ಸಾರ್ವಜನಿಕಶಿಕ್ಷಣ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸುವ ಮೂಲಕ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಕೆಲ ರಾಜಕೀಯ ಹಿತಾಸಕ್ತಿಗಳು ದೇಶದ ಸಂವಿಧಾನವನ್ನು ಅಪ್ರಸ್ತುತಗೊಳಿಸಲು, ಗಣತಂತ್ರ ವ್ಯವಸ್ಥೆ ಬುಡಮೇಲುಗೊಳಿಸಲು ಪಿತೂರಿ ನಡೆಸುತ್ತಿವೆ. ಅಂಬೇಡ್ಕರ್ ಅವರಿಗೆ ಅಪಮಾನಿಸುತ್ತಿವೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಇತಿಹಾಸ ತಿರುಚುತ್ತಿವೆ. ಸಾವಿರ ಬಾರಿ ಸುಳ್ಳು ಹೇಳಿ ಅವುಗಳನ್ನೆ ಸತ್ಯವೆಂದು ಪ್ರಚಾರ ಮಾಡುತ್ತಿವೆ’ ಎಂದು ದೂರಿದರು.

ಜಿಲ್ಲಾಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ವಿವಿಧತೆಯಲ್ಲಿ ಏಕತೆ ಸಂವಿಧಾನದ ಆಶಯವಾಗಿದೆ. ಸಂವಿಧಾನದಿಂದಾಗಿ ಸರ್ವರಿಗೂ ಸಮಬಾಳು, ಸಮಪಾಲು ದೊರೆಯುವಂತಾಗಿದೆ. ಆದರೆ ಬಿಜೆಪಿ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ. ಈ ಬಗ್ಗೆ ಪ್ರತಿ ಹಳ್ಳಿಗಳಲ್ಲಿಯೂ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದರು.

ಸಿಪಿಐ ಜಿಲ್ಲಾ ಸಂಚಾಲಕ ರೇಣುಕಾರಾಧ್ಯ ಮಾತನಾಡಿ, ದೇಶದಲ್ಲಿ ಆರ್‌ಎಸ್‌ಎಸ್‌ ಸಂಘಟನೆಯ ನಿರ್ದೆಶನದಂತೆ ಬಿಜೆಪಿ ಆಡಳಿತ ನಡೆಸುತ್ತಿದೆ. ಧರ್ಮ ದೇಶ ಆಳುವಂತಾಗಬೇಕು ಎನ್ನುವುದು ಅವರ ಅಜೆಂಡವಾಗಿದೆ. ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ವಿರೋಧಿಗಳಿಗೆ ಪಾಠ ಕಲಿಸಬೇಕು ಎಂದರು.

ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ, ಬಿ.ಎಂ.ಸಂದೀಪ್, ಎಚ್.‍ಪಿ.ಮಂಜೇಗೌಡ, ಲೇಖಕ ರವೀಶ್ ಬಸಪ್ಪ, ಬಿಎಸ್‌ಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಟಿ.ರಾಧಕೃಷ್ಣ, ಜೆಡಿಎಸ್‌ನ ಹೊಲದ ಗದ್ದೆ ಗಿರೀಶ್, ದಲಿತ ಸಂಘರ್ಷ ಸಮಿತಿಯ ವಸಂತ್‌, ರೈತ ಸಂಘದ ಗುರುಶಾಂತಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಕನ್ನಡಸೇನೆ ಜಿಲ್ಲಾಧ್ಯಕ್ಷ ರಾಜೇಗೌಡ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು