ಹೆಣ್ಣು ಮಗುವಾಗಿದ್ದಕ್ಕೆ ಕೋಪ | 40 ದಿನಗಳ ಕೂಸು ಕೊಂದ ಅಪ್ಪ

ಮಂಗಳವಾರ, ಜೂಲೈ 16, 2019
23 °C

ಹೆಣ್ಣು ಮಗುವಾಗಿದ್ದಕ್ಕೆ ಕೋಪ | 40 ದಿನಗಳ ಕೂಸು ಕೊಂದ ಅಪ್ಪ

Published:
Updated:

ಚಿಕ್ಕಮಗಳೂರು:  ಹೆಣ್ಣು ಮಗುವಾಗಿದ್ದಕ್ಕೆ ಬೇಸರಪಟ್ಟುಕೊಂಡು ತಂದೆಯೇ ಆ ಕೂಸನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ತಾಲ್ಲೂಕಿನ ಬೂಚೇನಹಳ್ಳಿ ಕಾವಲ್‌ನಲ್ಲಿ ಮಂಗಳವಾರ ನಡೆದಿದೆ. 

ನಿಹಾರಿಕಾ (40 ದಿನಗಳು) ಮೃತ ಕೂಸು. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿಯ ನರಸೀಪುರ ಗ್ರಾಮದ ಮಂಜುನಾಥ (24 ವರ್ಷ) ಕೃತ್ಯ ಎಸಗಿದವ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಮಗಳನ್ನು ಗಂಡ ಕತ್ತು ಹಿಸುಕಿ ಸಾಯಿಸಿರುವುದಾಗಿ ಸುಪ್ರೀತಾ ದೂರು ನೀಡಿದ್ದಾರೆ. 

ಬೂಚೇನಹಳ್ಳಿ ಕಾವಲ್‌ನ ಸುಪ್ರೀತಾ ಮತ್ತು ಮಂಜುನಾಥ್‌ ಅವರ ವಿವಾಹ ಒಂದೂವರೆ ವರ್ಷದ ಹಿಂದೆ ನಡೆದಿತ್ತು. ಈ ದಂಪತಿ ಕೂಲಿ ಕಾರ್ಮಿಕರು. 

40 ದಿನಗಳ ಹಿಂದೆ ಸುಪ್ರೀತಾಗೆ ಹೆಣ್ಣು ಮಗು ಜನಿಸಿತ್ತು. ಹೆರಿಗೆ ನಂತರ ಆರೈಕೆಗಾಗಿ ತವರು ಮನೆಯಲ್ಲಿದ್ದರು. ಹೆಣ್ಣುಮಗು ಜನಿಸಿದ್ದು ಪತಿ ಮಂಜುನಾಥ್‌ಗೆ ಬೇಸರಪಟ್ಟುಕೊಂಡು ಸಣ್ಣಪುಟ್ಟ ಗಲಾಟೆ ಮಾಡಿಕೊಂಡಿದ್ದ. ತಮ್ಮಂದಿರಿಗೂ ಹೆಣ್ಣು ಮಕ್ಕಳು ಇದ್ದಾರೆ, ಈಗ ನಮಗೂ ಹೆಣ್ಣು ಮಗುವಾಗಿದೆ ಎಂದು ನೊಂದುಕೊಂಡಿದ್ದ.

ಮಂಜುನಾಥ್‌ ಮಂಗಳವಾರ ಪತ್ನಿ ಮನೆಯಲ್ಲಿದ್ದ. ಸುಪ್ರೀತಾ ಮಗುವನ್ನು ಪತಿ ಕೈಗೆ ಕೊಟ್ಟು ಪಾತ್ರೆ ತೊಳೆಯಲು ಹೋಗಿದ್ದಾರೆ. ವಾಪಸಾದಾಗ ಮಗುವಿನ ಕುತ್ತಿಗೆಯಲ್ಲಿ ಕಂದು ಬಣ್ಣದ ಗುರುತು, ಮೂಗಿನಲ್ಲಿ ರಕ್ತ ಸೋರುತ್ತಿರುವುದು,  ಉಸಿರಾಡದಿರುವುದನ್ನು ಗಮನಿಸಿದ್ದಾರೆ. ಊರಿನ ವೈದ್ಯರು ಬಂದು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.  

ವಿಚಾರವನ್ನು ಪೊಲೀಸರಿಗೆ ತಿಳಿಸುವುದಾಗಿ ನೆರೆಹೊರೆಯವರು ಹೇಳಿದ್ದಾರೆ. ಈ ವಿಷಯವನ್ನು ಯಾರಾದರೂ ಪೊಲೀಸರಿಗೆ ತಿಳಿಸಿದರೆ ಅವರನ್ನೂ ಕೊಲೆ ಮಾಡುತ್ತೇನೆ ಎಂದು ಮಂಜುನಾಥ್‌ ಅಲ್ಲಿದ್ದವರಿಗೆ ಬೆದರಿಕೆ ಹಾಕಿ, ಕೂಸನ್ನು ಒಯ್ದು ಜಮೀನಿನಲ್ಲಿ ಹೂತಿದ್ದಾನೆ. ಕೃತ್ಯವನ್ನು ಮರೆಮಾಚುವ ಸಂಚು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸುಪ್ರೀತಾ ಅವರು ಗ್ರಾಮಸ್ಥರು ಮತ್ತು ಸಂಬಂಧಿಕರೊಂದಿಗೆ ಚರ್ಚಿಸಿ ಪತಿಯ ಕೃತ್ಯದ ಕುರಿತು ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು  ಐಪಿಸಿ 302 (ಕೊಲೆ), 201 (ಸಾಕ್ಷ್ಯ ನಾಶ), 506 (ಜೀವ ಬೆದರಿಕೆ) ಪ್ರಕರಣ ದಾಖಲಿಸಿದ್ದಾರೆ. 

ತನಿಖೆ ನಡೆಯುತ್ತಿದೆ. ಹೂತಿದ್ದ ಮೃತದೇಹವನ್ನು ಹೊರತೆಗೆದು ಪರೀಕ್ಷಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 3

  Sad
 • 0

  Frustrated
 • 8

  Angry

Comments:

0 comments

Write the first review for this !